ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ನರೇಗಾ ಯೋಜನೆಯ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ಸುಳ್ಯದಿಂದ ಮೂಲ್ಕಿಯವರೆಗೆ ಪಾದಯಾತ್ರೆ
ಸುಳ್ಯ: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ನರೇಗಾ ಯೋಜನೆಯ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ಸುಳ್ಯದಿಂದ ಮೂಲ್ಕಿಯವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ.
ಈ ಪಾದಯಾತ್ರೆಗೆ ಸೋಮವಾರ ಸುಳ್ಯ ಗಾಂಧಿನಗರದಿಂದ ಚಾಲನೆ ನೀಡಲಾಯಿತು. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ''''''''ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರ್ಕಾರ ಜಾರಿಗೆ ತಂದ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಹೆಸರು ಬದಲಾಯಿಸಿರುವುದಲ್ಲದೆ ರೈತರಿಗೆ ಮತ್ತು ರಾಜ್ಯ ಸರ್ಕಾರಗಳಿಗೆ ತೊಂದರೆಯಾಗುವಂತೆ ಮಾಡಿ ಯೋಜನೆಯನ್ನೆ ನಿಧಾನವಾಗಿ ಸ್ಥಗಿತಗೊಳಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಂಚು ರೂಪಿಸಿದೆ. ಈ ಯೋಜನೆಯ ಪ್ರಯೋಜನವನ್ನು ಲಕ್ಷಾಂತರ ಮಂದಿ ಗ್ರಾಮೀಣ ಭಾಗದ ಜನರು ಪಡೆದುಕೊಂಡಿದ್ದಾರೆ. ಆದರೆ ಬಿಜೆಪಿ ಆಡಳಿತದ ಸರ್ಕಾರವು ಯೋಜನೆಯನ್ನು ಬದಲಾಯಿಸಿರುವುದಲ್ಲದೆ ಅವರಿಗೆ ಬೇಕಾದವರಿಗೆ ಮಾತ್ರ ಈ ಯೋಜನೆಯ ಫಲ ಸಿಗುವಂತೆ ಮಾಡುತ್ತಿದೆ. ಇದನ್ನು ಯುವಜನತೆ ಅರ್ಥಮಾಡಿಕೊಳ್ಳಬೇಕೆಂದು ಹೇಳಿದರು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಿಸಿಸಿ ಅಧ್ಯಕ್ಷರಾದ ಹರೀಶ್ ಕುಮಾರ್ ಮಾತನಾಡಿ, ಬಿಜೆಪಿಯವರ ದುರಾಡಳಿತವನ್ನು ಸಹಿಸಲು ಸಾಧ್ಯವಾಗದೆ ಕಾಂಗ್ರೆಸ್ ಪಕ್ಷ ಇಂದು ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಮೂಲಕ ಜನಜಾಗೃತಿ ಮಾಡುವ ಕೆಲಸ ಮಾಡುತ್ತಿದೆ. ರಾಷ್ಟ್ರದ್ಯಂತ ಪ್ರತಿಭಟನೆಗೆ ಕಾಂಗ್ರೆಸ್ ಇಳಿದಿದ್ದು ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಸುಳ್ಯದಿಂದ ಮೂಲ್ಕಿಯವರೆಗೆ ಪ್ರತಿಭಟನಾ ಪಾದಯಾತ್ರೆ ನಡೆಸಲು ದ.ಕ. ಜಿಲ್ಲಾ ಕಾಂಗ್ರೆಸ್ ನಿರ್ಧರಿಸಿದೆ ಎಂದು ಹೇಳಿದರು.ವೇದಿಕೆಯಲ್ಲಿ ಕಾಂಗ್ರೆಸ್ಸಿನ ಹಿರಿಯ ಮುಖಂಡ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಮಂಗಳೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಲೋಬೋ, ಮುಖಂಡರಾದ ಜಿ ಎ ಬಾವ, ಆರ್ ಪದ್ಮರಾಜ್ ಪೂಜಾರಿ, ಎಂ ಎಸ್ ಮೊಹಮ್ಮದ್, ಜಿ ಕೃಷ್ಣಪ್ಪ, ಟಿಎಂ ಶಹೀದ್ ತೆಕ್ಕೆಲ್, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಭರತ್ ಮುಂಡೋಡಿ, ಹಮೀದ್ ಕುತ್ತಮಟ್ಟೆ, ಕೆ ಎಮ್ ಮುಸ್ತಫ ಜನತಾ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಗೀತಾ ಕೋಲ್ಚಾರ್ ಸೇರಿದಂತೆ ಬ್ಲಾಕ್ ಕಾಂಗ್ರೆಸ್ಸಿನ ವಿವಿಧ ಪದಾಧಿಕಾರಿಗಳು ಜಿಲ್ಲಾ ಕಮಿಟಿಯ ಪದಾಧಿಕಾರಿಗಳು ಸದಸ್ಯರು, ಕಡಬ ಬ್ಲಾಕ್ ನ ಅಧ್ಯಕ್ಷರು ಪದಾಧಿಕಾರಿ ಉಪಸ್ಥಿತರಿದ್ದರು. ಅ
ಸುಳ್ಯದಿಂದ ಆರಂಭಗೊಂಡ ಪಾದಯಾತ್ರೆ ಪೈಚಾರ್, ಜಾಲ್ಸೂರು ಮೂಲಕ ಸಾಗಿ ಮಧ್ಯಾಹ್ನ ಕನಕಮಜಲು ತಲುಪಿ ಮಧ್ಯಾಹ್ನ ಊಟದ ಬಳಿಕ ಯಾತ್ರೆ ಆರಂಭಿಸಿ ಸಂಜೆ ಕುಂಬ್ರ ದಲ್ಲಿ ಸಾರ್ವಜನಿಕ ಸಭೆ ನಡೆಯಿತು. ಪುತ್ತೂರು ಗಡಿ ಪೆರ್ನಾಜೆಗೆ ತಲುಪುವ ವೇಳೆಗೆ ಪುತ್ತೂರಿನ ಕಾಂಗ್ರೆಸ್ ಕಾರ್ಯಕರ್ತರು ಬಂದು ಪಾದಯಾತ್ರೆಯನ್ನು ಬರಮಾಡಿಕೊಂಡರು.