ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆಯಲ್ಲಿ ವ್ಯಾಪಕ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ, ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕೊಪ್ಪಳದ ಅಶೋಕ ವೃತ್ತದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕೊಪ್ಪಳ: ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆಯಲ್ಲಿ ವ್ಯಾಪಕ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ, ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಗರದ ಅಶೋಕ ವೃತ್ತದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯಲು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೊಪ್ಪಳ ಸಂಸದ ಕೆ. ರಾಜಶೇಖರ ಹಿಟ್ನಾಳ ಮಾತನಾಡಿ, ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಸಂಪೂರ್ಣವಾಗಿ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಕೋಟಿಗಟ್ಟಲೆ ಅರ್ಹ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಈ ಅಕ್ರಮಕ್ಕೆ ನೇರವಾಗಿ ಜವಾಬ್ದಾರರಾಗಿರುವ ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ ಹಾಗೂ ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ದೇಶದಲ್ಲಿ ವಿಶೇಷ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ನೆಪದಲ್ಲಿ ಸುಮಾರು 13.50 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಇವರಲ್ಲಿ ಬಹುತೇಕರು ಈಗಲೂ ಮತದಾನದ ಅರ್ಹತೆ ಹೊಂದಿರುವ ಸಕ್ರಿಯ ನಾಗರಿಕರಾಗಿದ್ದಾರೆ. ಅರ್ಹ ಮತದಾರರಿಗೆ ಅವರ ಹಕ್ಕನ್ನು ತಕ್ಷಣವೇ ಮರಳಿಸಬೇಕು. ಸಾರ್ವಜನಿಕರಿಗೆ ನ್ಯಾಯ ಒದಗಿಸಲು ಸಾಧ್ಯವಾಗದಿದ್ದರೆ ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಎಸ್‌ಐಆರ್ ಪ್ರಕ್ರಿಯೆಯನ್ನೇ ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರಕ್ಕೆ ಯಾವುದೇ ವಿಷಯ ಕೇಳಿದರೂ ಬಿಜೆಪಿ ಮತ್ತೊಂದು ಹೊಸ ವಿವಾದವನ್ನು ಕೆದಕುತ್ತದೆ. 1984ರ ಸಿಖ್ ನರಮೇಧವನ್ನು ಉಲ್ಲೇಖಿಸಿ ದೇಶದ ದಿಕ್ಕು ತಪ್ಪಿಸಲು ಬಿಜೆಪಿ ಹೊರಟಿದೆ. ಆದರೆ ಕಾಂಗ್ರೆಸ್ ಗುಜರಾತ್ ನರಮೇಧದ ವಿಷಯವನ್ನು ಪ್ರಸ್ತಾಪಿಸಬಹುದಲ್ಲವೇ? ಇದರಲ್ಲಿ ಮೋದಿ ಅವರನ್ನು ಅಪರಾಧಿ ಎಂದು ಬಿಂಬಿಸಲಾಗಿತ್ತು. ಕೋಟ್ಯಂತರ ರುಪಾಯಿ ಭ್ರಷ್ಟಾಚಾರದ ಪ್ರಕರಣದಲ್ಲಿ ಇರುವ ವ್ಯಕ್ತಿಯನ್ನು ಮಹತ್ವದ ಚುನಾವಣಾ ಆಯೋಗದ ಮುಖ್ಯಸ್ಥರನ್ನಾಗಿ ಮಾಡಿರುವುದು, ಇಂತಹ ಭ್ರಷ್ಟಾಚಾರವನ್ನು ಮುಂದುವರಿಸುವ ಉದ್ದೇಶಕ್ಕಾಗಿಯೇ ಎಂಬ ಸಂದೇಹ ದೇಶದ ಜನರಲ್ಲಿದೆ ಎಂದು ಹೇಳಿದರು.

ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಮಾತನಾಡಿ, ಅಧಿಕಾರ ಹಿಡಿಯಲು ಅಡ್ಡದಾರಿ ತುಳಿದಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರೂ ರಾಜೀನಾಮೆ ನೀಡಬೇಕು. ಆಯೋಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ವಿಫಲವಾದರೆ ಸುಪ್ರೀಂ ಕೋರ್ಟ್ ತಕ್ಷಣವೇ ಮಧ್ಯಪ್ರವೇಶಿಸಿ ಜ್ಞಾನೇಶ್ ಕುಮಾರ್ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಎಂ. ಇಟ್ಟಂಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಡ್ಡಿ ಶ್ರೀನಿವಾಸ, ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ನಗರ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಶಾ, ಹನುಮಂತಗೌಡ ಚಂಡೂರ್, ಮುಖಂಡರಾದ ಯಂಕಣ್ಣ ಯರಾಶಿ, ಮುತ್ತುರಾಜ ಕುಷ್ಟಗಿ, ಅಕ್ಬರ್ ಪಾಶಾ, ಸುರೇಶ ದಾಸರಡ್ಡಿ, ಮಾನವಿ ಪಾಶಾ, ಚಿಕನ್ ಪೀರಾ, ಸಲೀಂ ಅಳವಂಡಿ, ಸೈಯದ್ ನಾಸಿರುದ್ದೀನ್, ಕೆ.ಎಂ. ಸೈಯದ್, ಮಲ್ಲಿಕಾರ್ಜುನ ಪೂಜಾರ, ಪದ್ಮಾ ಕಂಬಳಿ, ಲಿಂಗರಾಜ ಕಾಳೆ, ಸೇವಾದಳದ ಶ್ರೀನಿವಾಸ ಪಂಡಿತ್ ಭಾಗವಹಿಸಿದ್ದರು.