ಸಾರಾಂಶ
-ಜಿಲ್ಲಾ ಉಸ್ತುವಾರಿ ಸಚಿವ ಮುನಿಯಪ್ಪ ನೇತೃತ್ವದಲ್ಲಿ ಚೊಂಬು ಪ್ರದರ್ಶಿಸಿ ಪ್ರತಿಭಟಿಸಿದ ಕಾರ್ಯಕರ್ತರುಕನ್ನಡಪ್ರಭ ವಾರ್ತೆ ದೇವನಹಳ್ಳಿ
ದೇಶದಲ್ಲಿ ಕೇಂದ್ರ ಸರ್ಕಾರಕ್ಕೆ ತೆರಿಗೆ ಹಣ ನೀಡುವಲ್ಲಿ ಕರ್ನಾಟಕ ರಾಜ್ಯ ಎರಡನೆಯದು, ಆದರೆ ಈ ಬಾರಿಯ ಬಜೆಟ್‌ನಲ್ಲಿ ಪ್ರಧಾನಿ ಮೋದಿಯವರು ಮಲತಾಯಿ ಧೋರಣೆ ತೋರಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಹೆಚ್. ಮುನಿಯಪ್ಪ ಆರೋಪಿಸಿದರು.ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ತಾಲೂಕು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಕಾಂಗ್ರೆಸ್ ಸರ್ಕಾರ ಆಡಳಿತವಿರುವ ರಾಜ್ಯಗಳಿಗೆ ಬಜೆಟ್‌ನಲ್ಲಿ ಯಾವುದೇ ಅನುದಾನಗಳನ್ನು ಕೊಡದೆ ಬಿಜೆಪಿ ಸರ್ಕಾರ ಮತ್ತು ಅವರಿಗೆ ಬೆಂಬಲ ನೀಡಿರುವ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದು ಆರೋಪಿಸಿದರು.
ಜಿಎಸ್‌ಟಿ ಹಣ ಕೇಂದ್ರಕ್ಕೆ ಕಟ್ಟುವಲ್ಲಿ ಮಹಾರಾಷ್ಟ್ರದ ನಂತ ಕರ್ನಾಟಕ ಎರಡನೆಯದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಬದ್ಧವಾಗಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಜವಾಬ್ದಾರಿಯುತವಾಗಿ, ಯಾರಿಗೂ ಅನ್ಯಾಯವಾಗದಂತ ಅನುದಾನ ಹಂಚಬೇಕು. ಆದರೆ ಮೋದಿ ಸರ್ಕಾರ ಆ ರೀತಿ ಮಾಡದೆ ಮಲತಾಯಿ ಧೋರಣೆ ತೋರಿದೆ ಎಂದು ಆಪಾದಿಸಿದರು.2004ರಿಂದ 14ರವರೆಗೂ ಯಾವುದೇ ರಾಜ್ಯಕ್ಕೂ ತಾರತಮ್ಯ ಮಾಡಿಲ್ಲ, ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ರಾಜ್ಯಕ್ಕೆ ಬಹಳಷ್ಟು ತಾರತಮ್ಯ ನಡೆದಿದೆ. ನೀರಾವರಿ ಯೋಜನೆಗಳಿಗಷ್ಟೇ ಅಲ್ಲದೆ ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಕೇಂದ್ರ ಸರ್ಕಾರ ಹಣ ಕೊಟ್ಟಿಲ್ಲ, ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ. ಇದನ್ನು ಖಂಡಿಸಿ ನಮ್ಮ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಬಿಜೆಪಿಯವರು ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಹಿಂದೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರ ನಡೆಸಿವೆ. ಆದರೀಗ ಜನ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ. ನಮ್ಮನ್ನು ಯಾರೂ ಏನೂ ಮಾಡೋಕೆ ಆಗೊಲ್ಲ. ಯಾವುದೇ ಸಮಸ್ಯೆ ಇರಲಿ ತನಿಖೆಯಾಗಲಿ ಎಂದರಲ್ಲದೆ ವ್ಯಕ್ತಿಗತವಾಗಿ ಸಿದ್ದರಾಮಯ್ಯ ಅವರದ್ದು ಯಾವುದೇ ಪಾತ್ರವಿಲ್ಲ. ಇದು ರಾಜಕೀಯ ಪ್ರೇರಿತ. ವಿರೋಧಿಗಳ ಹುನ್ನಾರವಷ್ಟೇ ಎಂದರು.ಪ್ರತಿಭಟನೆಯಲ್ಲಿ ದೊಡ್ಡಬಳ್ಳಾಪುರ ಮಾಜಿ ಶಾಸಕ ವೆಂಕಟರಮಣಯ್ಯ, ಬಯಪ ಅಧ್ಯಕ್ಷ ಶಾಂತಕುಮಾರ್, ಮುಖಂಡರಾದ ಬಿ.ರಾಜಣ್ಣ, ಸಿ.ಜಗನ್ನಾಥ್, ಕೆ.ಸಿ.ಮಂಜುನಾಥ್, ಬಾಲೇಪುರ ಲಕ್ಷ್ಮೀನಾರಾಯಣ್ ವಿಜಯಪುರ ವಿ.ಮಂಜುನಾಥ್ ಸಾವಿರಾರು ಕಾರ್ಯಕರ್ತರು ಕೈಯಲ್ಲಿ ಮೂರು ನಾಮ ಹಾಕಿರುವ ಚೊಂಬು ಹಿಡಿದು, ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಸುಧಾಕರ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದದರು.