ಕಳೆದ ಗುರುವಾರ ರಾತ್ರಿ ನಡೆದ ಸದಸ್ಯರ, ಪಕ್ಷದ ಮುಖಂಡರ ಸಭೆಯಲ್ಲಿ ಸದಸ್ಯರೆಲ್ಲ ಒಕ್ಕೂರಲಿನಿಂದ ಸಚಿವ ಶಿವರಾಜ ತಂಗಡಗಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ಅಧಿಕಾರ ನೀಡಿ ಅವರು ಸೂಚಿಸಿದವರೆ ಅಧ್ಯಕ್ಷರಾಗಲಿ ಎನ್ನುವ ನಿರ್ಧಾರ ಮಾಡಿದ್ದರು

ಕಾರಟಗಿ: ಇಲ್ಲಿನ ಪುರಸಭೆ ಅಧ್ಯಕ್ಷರಾಗಿ ಮಂಜುನಾಥ ಮೇಗೂರು ಮತ್ತು ಉಪಾಧ್ಯಕ್ಷರಾಗಿ ಸುಜಾತ ಭಜೆಂತ್ರಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಮತ್ತೇ ಪುರಸಭೆ ಆಡಳಿತದ ಚುಕ್ಕಾಣಿ ಹಿಡಿದಿದೆ.

ಇಲ್ಲಿನ ಪುರಸಭೆಯಲ್ಲಿ ಶುಕ್ರವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಸಹಜ ಮತ್ತು ಸುಲಭವಾಗಿ ಅಧಿಕಾರದ ಗದ್ದುಗೆ ಹಿಡಿದರೆ ಬಿಜೆಪಿ ಮತ್ತೇ ಮುಖಭಂಗ ಅನುಭವಿಸಿತು.

ಅಧ್ಯಕ್ಷ ಸ್ಥಾನ ಬಿಸಿಎಂ(ಎ)ಗೆ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿಗೆ ಮೀಸಲಾಗಿತ್ತು. ಪುರಸಭೆಗೆ ಐದನೇ ಅಧ್ಯಕ್ಷರಾಗಿ ಆಯ್ಕೆ ಬಯಸಿ ಕಾಂಗ್ರೆಸ್‌ದಿಂದ ೧೦ನೇ ವಾರ್ಡ್‌ನ ಮಂಜುನಾಥ ಶಂಕ್ರಪ್ಪ ಮೇಗೂರು ಮತ್ತು ಬಿಜೆಪಿಯಿಂದ ೫ನೇ ವಾರ್ಡ್‌ನ ಮೋನಿಕಾ ಧನಂಜಯಕುಮಾರ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ದಿಂದ ೨೨ನೇ ವಾರ್ಡ್‌ನ ಸುಜಾತ ನಾಗರಾಜ ಭಜೆಂತ್ರಿ ಮತ್ತು ಬಿಜೆಪಿಯಿಂದ ೧೮ನೇ ವಾರ್ಡ್‌ನ ಆನಂದ ಎಂ.ಹನುಮಂತಪ್ಪ ಅಖಾಡಕ್ಕೆ ಇಳಿದಿದ್ದರು.

ಚುನಾವಣೆ ಪ್ರಾರಂಭವಾಗುತ್ತಿದ್ದಂತೆ ಮೊದಲು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಮಂಜುನಾಥ ಮೇಗೂರಿಗೆ ಕಾಂಗ್ರೆಸ್‌ನ ೧೧ ಸದಸ್ಯರು ಸೇರಿ ಸಂಸದ ಕೆ. ರಾಜಶೇಖರ ಹಿಟ್ನಾಳ ಮತ್ತು ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕೈ ಎತ್ತಿದ್ದರು. ಪ್ರತಿಸ್ಪರ್ಧಿ ಮೋನಿಕಾಗೆ ಬಿಜೆಪಿಯ ೮ ಮತ್ತು ಜೆಡಿಎಸ್‌ನ ಒಬ್ಬ ಸದಸ್ಯರು ಕೈ ಎತ್ತಿದರು.

ಅದೇ ರೀತಿ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿ ಸುಜಾತ ನಾಗರಾಜ ಭಜೆಂತ್ರಿಗೆ ಕಾಂಗ್ರೆಸ್‌ನ ೧೧ ಸದಸ್ಯರು ಮತ್ತು ಸಂಸದರು ಹಾಗೂ ಶಾಸಕರು ಸೇರಿ ಒಟ್ಟು ೧೩ ಜನರು ಕೈ ಎತ್ತಿ ಸಹಿ ಮಾಡಿದರೆ, ಪ್ರತಿಸ್ಪರ್ಧಿ ಅನಂದ ಎಂ. ಹನುಮಂತಪ್ಪಗೆ ಬಿಜೆಪಿಯ ೮ ಸದಸ್ಯರು ಮತ್ತು ಜೆಡಿಎಸ್‌ನ ಒಬ್ಬ ಸದಸ್ಯರು ಕೈ ಎತ್ತಿ ಸಹಿ ಮಾಡಿದರು. ಹೀಗಾಗಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಮಂಜುನಾಥ ಮೇಗೂರು ಮತ್ತು ಉಪಾಧ್ಯಕ್ಷರಾಗಿ ಸುಜಾತ ಭಜೆಂತ್ರಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಹಸೀಲ್ದಾರ್ ಎಂ. ಕುಮಾರಸ್ವಾಮಿ ಘೋಷಣೆ ಮಾಡಿದರು.

ಇಲ್ಲಿನ ಪುರಸಭೆಗೆ ಒಟ್ಟು ೨೩ ಸದಸ್ಯರ ಬಲವಿದ್ದು, ಕಾಂಗ್ರೆಸ್ ೧೧ ಜೆಡಿಎಸ್ ೧ ಮತ್ತು ಬಿಜೆಪಿಯ ೧೧ ಸದಸ್ಯರಿದ್ದಾರೆ. ಆ ಪೈಕಿ ೩ ಬಿಜೆಪಿಯಿಂದ ಆಯ್ಕೆಯಾದ ಎಚ್. ಈಶ್ವರಪ್ಪ, ಸುಪ್ರಿಯಾ ಅರಳಿ ಮತ್ತು ಜಿ. ಅರುಣಾದೇವಿ ಚುನಾವಣೆಯಿಂದ ದೂರ ಉಳಿದರು.

ಸಚಿವ ತಂಗಡಗಿ ಹಿಡಿತ: ಪುರಸಭೆ ಆಡಳಿತದಲ್ಲಿ ಕಾಂಗ್ರೆಸ್ ಬಹುಮತ ಹೊಂದಿದ್ದು, ೫೦-೫೦ ಅಧಿಕಾರ ಹಂಚಿಕೆ ಹಿನ್ನೆಲೆಯಲ್ಲಿ ಸಚಿವ ಶಿವರಾಜ ತಂಗಡಗಿ ಸೂಚನೆ ಮೇರೆ ಅಧ್ಯಕ್ಷೆ ರೇಖಾ ಆನೆಹೊಸೂರು ಮತ್ತು ದೇವಮ್ಮ ಚೆಲವಾದಿ ಮತ್ತು ೧೫ ತಿಂಗಳ ಅವಧಿಯ ಅಧಿಕಾರ ಪೂರೈಸಿ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದರು. ಹೀಗಾಗಿ ತೆರವಾದ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಿತು.

ಕಾಂಗ್ರೆಸ್‌ನಲ್ಲಿ ಒಟ್ಟು ಮೂವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿದ್ದರು. ಕಳೆದ ಗುರುವಾರ ರಾತ್ರಿ ನಡೆದ ಸದಸ್ಯರ, ಪಕ್ಷದ ಮುಖಂಡರ ಸಭೆಯಲ್ಲಿ ಸದಸ್ಯರೆಲ್ಲ ಒಕ್ಕೂರಲಿನಿಂದ ಸಚಿವ ಶಿವರಾಜ ತಂಗಡಗಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ಅಧಿಕಾರ ನೀಡಿ ಅವರು ಸೂಚಿಸಿದವರೆ ಅಧ್ಯಕ್ಷರಾಗಲಿ ಎನ್ನುವ ನಿರ್ಧಾರ ಮಾಡಿದ್ದರು. ಶುಕ್ರವಾರ ಬೆಳಗ್ಗೆ ಚುನಾವಣೆ ಪ್ರಕ್ರಿಯೆ ಪ್ರಾರಂಭದ ವೇಳೆ ಸಚಿವ ತಂಗಡಗಿ ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ ಮೇಗೂರು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸುಜಾತ ಭಜಂತ್ರಿ ಹೆಸರನ್ನು ಸೂಚಿಸಿದರು. ಆ ಪ್ರಕಾರವೇ ಕಾಂಗ್ರೆಸ್ ಸದಸ್ಯರೆಲ್ಲ ಒಗ್ಗೂಡಿ ಚುನಾವಣೆ ಎದುರಿಸಿದರು.

ಪುನಃ ಸಚಿವ ತಂಗಡಗಿ ಪುರಸಭೆ ತಮ್ಮ ಹಿಡಿತದಲ್ಲೀ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾದರು. ಬಹುಮತವಿಲ್ಲದೇ ಚುನಾವಣೆ ಪ್ರಕ್ರಿಯೆ ಎದುರಿಸಿದ ಬಿಜೆಪಿ ಪುನಃ ಮುಖಭಂಗ ಅನುಭವಿಸಿತು.

ಮೆರವಣಿಗೆ: ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ ಮೇಗೂರು ಮತ್ತು ಉಪಾಧ್ಯಕ್ಷೆ ಸುಜಾತ ಭಜಂತ್ರಿ ಇವರನ್ನು ಪುರಸಭೆಯಿಂದ ಸಚಿವ ಶಿವರಾಜ ತಂಗಡಗಿ ನಿವಾಸದವರೆಗೆ ಕಾಂಗ್ರೆಸ್ ಕಾರ್ಯಕರ್ತರು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಪಟಾಕಿ ಸಿಡಿಸಿ ಸಹಿ ಹಂಚಿ, ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು.