ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ಪಕ್ಷ ರಾಮರಾಜ್ಯದ ಪರಿಕಲ್ಪನೆ ಹೊಂದಿದೆ. ಬಸವಣ್ಣನವರ ತತ್ವ ಸಿದ್ಧಾಂತ, ಅಂಬೇಡ್ಕರ್ ಬರೆದ ಸಂವಿಧಾನದ ಆಶಯಗಳಿಗೆ ತಕ್ಕಂತೆ ನಮ್ಮ ಸರ್ಕಾರ ಕಾರ್ಯ ನಿರ್ವಹಿಸುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.ಗೋಕಾಕ ವಿಧಾನಸಭಾ ಕ್ಷೇತ್ರದ ಬೆಣಚಿನಮರಡಿ, ಮಮದಾಪುರ, ಹೂಲಿಕಟ್ಟಿ ಜಿಪಂ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಮತಯಾಚಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೂರದೃಷ್ಟಿಯ ಫಲವಾಗಿ ಅಧಿಕಾರಕ್ಕೆ ಬಂದ ಕೇವಲ 100 ದಿನಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇವುಗಳಿಗಾಗಿ ರಾಜ್ಯ ಸರ್ಕಾರ ವಾರ್ಷಿಕ ₹ 56 ಸಾವಿರ ಕೋಟಿ ಮೀಸಲಿರಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ, ನಾವು ತಂದ ಪಂಚ ಗ್ಯಾರಂಟಿ ಯೋಜನೆಗಳಿಗೆ ಸಿಕ್ಕ ಗೆಲುವು ಎಂದು ಹೇಳಿದರು.
ಕಳೆದ 25 ವರ್ಷಗಳಿಂದ ಒಂದೇ ಪಕ್ಷದ ಸಂಸದರನ್ನು ಗೆಲ್ಲಿಸಿದರೂ ಕ್ಷೇತ್ರಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಹೊರಗಿನ ಅಭ್ಯರ್ಥಿಗೆ ಬಿಜೆಪಿ ಮಣೆ ಹಾಕಲಾಗಿದೆ. ಅವಕಾಶವಾದಿ ರಾಜಕಾರಣಿಯಿಂದ ಕ್ಷೇತ್ರವನ್ನು ದೂರವಿಡಿ ಎಂದು ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು. ಶ್ರದ್ಧೆ, ಭಕ್ತಿಯಿಂದ ಕೆಲಸ ಮಾಡುವ ಮನಸ್ಥಿತಿ ಬೇಕು. ಕಳೆದ ಅವಧಿಯಲ್ಲಿ ನಾವು ವಿರೋಧ ಪಕ್ಷದಲ್ಲಿದ್ದರೂ ನಾನು ₹1800 ಕೋಟಿ ಅನುದಾನವನ್ನು ನನ್ನ ಗ್ರಾಮೀಣ ಕ್ಷೇತ್ರಕ್ಕೆ ತಂದೆ. ಇದೇ ಮಾದರಿಯಲ್ಲಿ ನನ್ನ ಮಗ ಕೂಡ ಕೆಲಸ ಮಾಡಲಿದ್ದಾನೆ ಎಂದು ಹೇಳಿದರು.ನನ್ನ ಮಗ ಯುವಕ ಅವನಿಗೆ ಚುನಾವಣೆ ಬೇಕಿತ್ತೇ ಎಂದು ಪ್ರಶ್ನಿಸಲಾಗುತ್ತಿದೆ. 18 ವಯಸ್ಸಿಗೆ ದೇಶದ ಗಡಿ ಕಾಯಲು ಯುವಕರನ್ನು ಕಳುಹಿಸುತ್ತೇವೆ. 18ನೇ ವಯಸ್ಸಿಗೆ ಮತದಾನದ ಹಕ್ಕು ನೀಡಲಾಗಿದೆ. ಶೆಟ್ಟರ್ ಯುವಕರಿದ್ದಾಗ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಅವರು ಸಿಎಂ ಆಗಿದ್ದು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಮಾತನಾಡಿ, ಬೆಳಗಾವಿ ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಕನಸು ಕಟ್ಟಿಕೊಂಡಿರುವೆ. ನಿಮ್ಮ ಸೇವೆ ಮಾಡಲು ನನ್ನಗೊಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಬೆಳಗಾವಿ ಜಿಲ್ಲೆಯ ಜನರ ನಾಡಿಮಿಡಿತ ಅರಿತಿದ್ದೇನೆ. ಕಳೆದ 25 ವರ್ಷಗಳಿಂದ ಒಂದೇ ಪಕ್ಷದ ಸಂಸದರಿದ್ದರೂ ಕ್ಷೇತ್ರಕ್ಕೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ನಮ್ಮ ಜಿಲ್ಲೆ ಹೇಳೋಕೆ ಎರಡನೇ ರಾಜಧಾನಿ, ಆದರೆ ಅಭಿವೃದ್ಧಿಯಲ್ಲಿ ಮಾತ್ರ ಶೂನ್ಯ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ನನ್ನ ತಾಯಿ ಲಕ್ಷ್ಮೀ ಹೆಬ್ಬಾಳಕರ್, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತಿದ್ದು, ಬೆಳಗಾವಿ ಮನೆ ಮಗನಾದ ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.ಚಂದ್ರಶೇಖರ್ ಕೊಣ್ಣೂರ ಮಾತನಾಡಿ, ನಮ್ಮ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಮದಾಪೂರ ಗ್ರಾಮದ ಮುಖಂಡ ಚಂದ್ರಶೇಖರ್ ಕೊಣ್ಣೂರ ಭವಿಷ್ಯ ನುಡಿದರು.
ಪ್ರಚಾರದಲ್ಲಿ ಮುಖಂಡರಾದ ಸಿದ್ದಲಿಂಗ ದಳವಾಯಿ, ಡಾ.ಮಹಾಂತೇಶ ಕಡಾಡಿ, ಅಶೋಕ್ ಪೂಜಾರಿ, ಗೋಕಾಕ್ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಡಾಂಗೆ ಸಚಿವರಿಗೆ ಸಾಥ್ ನೀಡಿದರು.