ಕಾಂಗ್ರೆಸ್ ಸರ್ಕಾರದ ಎರಡೂವರೆ ವರ್ಷದ ಆಡಳಿತ ಗೊಂದಲದಲ್ಲೇ ಮುಳುಗಿದ್ದು, ಅಭಿವೃದ್ಧಿ ವಿಷಯದಲ್ಲಿ ಶೂನ್ಯ ಸಾಧನೆ ಸಾಧಿಸಿದೆ. ರೈತರನ್ನು ಕಡೆಗಣಿಸಿದ್ದೇ ಈ ಸರ್ಕಾರದ ದೊಡ್ಡ ಸಾಧನೆ ಎಂದು ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾಂಗ್ರೆಸ್ ಸರ್ಕಾರದ ಎರಡೂವರೆ ವರ್ಷದ ಆಡಳಿತ ಗೊಂದಲದಲ್ಲೇ ಮುಳುಗಿದ್ದು, ಅಭಿವೃದ್ಧಿ ವಿಷಯದಲ್ಲಿ ಶೂನ್ಯ ಸಾಧನೆ ಸಾಧಿಸಿದೆ. ರೈತರನ್ನು ಕಡೆಗಣಿಸಿದ್ದೇ ಈ ಸರ್ಕಾರದ ದೊಡ್ಡ ಸಾಧನೆ ಎಂದು ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತರ ರಕ್ತಹೀರುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ರಾಜ್ಯಾದ್ಯಂತ ಈ ರೈತವಿರೋಧಿ ಭ್ರಷ್ಟ ಸರ್ಕಾರದ ವಿರುದ್ಧ ತಾಲೂಕುವಾರು ಹೋರಾಟವನ್ನು ಬಿಜೆಪಿ ರೈತ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದರು.

ಇದುವರೆಗೂ ಈ ಸರ್ಕಾರ ಬೆಳೆಹಾನಿ ಪರಿಹಾರ ಕೊಟ್ಟಿಲ್ಲ. 2025-26ನೇ ಸಾಲಿನಲ್ಲಿ ಮುಂಗಾರು ಅತಿವೃಷ್ಟಿ ಮಳೆಯಿಂದಾಗಿ ನಷ್ಟಕ್ಕೊಳಗಾದ ರೈತರು ಬೆಳೆದ ಏಕದಳ, ದ್ವಿದಳ ಹಾಗೂ ತೋಟಗಾರಿಕಾ ಬೆಳೆಗಳಿಗೆ ಎಸ್‌ಡಿಆರ್‌ಎಫ್, ಎನ್‌ಡಿಆಆರ್‌ಎಫ್‌ ನಿಯಮಕ್ಕೆ ಅನುಗುಣವಾಗಿ ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಕೂಡಲೇ ಪರಿಹಾರ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.

ಬಿಜೆಪಿ ಸರ್ಕಾರ ಇದ್ದಾಗ ಈ ಸರ್ಕಾರದ ಅರ್ಧದಷ್ಟು ಬಜೆಟ್ ಇದ್ದಾಗಲೂ ಸಹ ಹೆಕ್ಟೇರ್ ಒಂದಕ್ಕೆ ಖುಷ್ಕಿ ಬೆಳೆಗಳಿಗೆ ಬಿಜೆಪಿ ಸರ್ಕಾರ 16,800 ರು. ಪರಿಹಾರ ನೀಡಿತ್ತು. ಆಗ ಎನ್‌ಡಿಆರ್‌ಎಫ್ ಮಾನದಂಡ ಹೆಕ್ಟೇರ್‌ಗೆ 6,800 ಇತ್ತು. ಈಗ 8500 ಆಗಿದೆ. ಸಿದ್ಧರಾಮಯ್ಯನವರ ಸರ್ಕಾರ ಬಜೆಟ್ ಅನುಸಾರ ಬಿಜೆಪಿಗಿಂತ 2 ಪಟ್ಟು ಜಾಸ್ತಿ ನೀಡಬೇಕಿತ್ತು. ಆದರೆ, ಕೇವಲ 17000 ರು. ಗಳನ್ನು ಹೆಕ್ಟೇರ್‌ವೊಂದಕ್ಕೆ ನೀಡುತ್ತಿದೆ ಎಂದರು.

ಈ ಸಾಲಿನಲ್ಲಿ ಪ್ರವಾಹಪೀಡಿತ ಜಿಲ್ಲೆಯನ್ನು ಘೋಷಿಸಿಲ್ಲ, ಪರಿಹಾರ ನೀಡಿಲ್ಲ, ಮನೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡಿಲ್ಲ. ಬಿಜೆಪಿ ಅವಧಿಯಲ್ಲಿ ಒಟ್ಟು 1,25,795 ಹೆಕ್ಟೇರ್‌ಗೆ ಪರಿಹಾರ ನೀಡಲಾಗಿತ್ತು. ಹಾನಿಗೊಳಗಾದ ಮನೆಗಳಿಗೆ ಕೂಡ ಪರಿಹಾರ ನೀಡಲಾಗಿತ್ತು. ಈಗ ಮುಖ್ಯಮಂತ್ರಿಗಳು ರೈತರ ಮಕ್ಕಳಿಗೆ ಬಿಜೆಪಿ ಸರ್ಕಾರ ನೀಡುತ್ತಿದ್ದ ವಿದ್ಯಾನಿಧಿ ಯೋಜನೆಯನ್ನು ನಿಲ್ಲಿಸಿದ್ದಾರೆ. ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದ 6000 ಮತ್ತು ರಾಜ್ಯದ 4000 ಸೇರಿಸಿ, 10,000 ರು. ನೀಡುತ್ತಿದ್ದೇವು. ಈಗ ಆ 4000 ಹೆಚ್ಚುವರಿ ಹಣವನ್ನು ನಿಲ್ಲಿಸಿದ್ದಾರೆ. 1 ಗುಂಟೆಗೆ ಕೇವಲ 40 ರು. ಬೆಳೆ ಪರಿಹಾರವನ್ನು ಈ ನಿಗದಿಪಡಿಸಿದೆ. ಕೇಂದ್ರ ಸರ್ಕಾರ 2019 ರಿಂದ ಇಲ್ಲಿಯವರೆಗೆ 3 ಲಕ್ಷದ 75 ಸಾವಿರ ಕೋಟಿ ರು. ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡಿದ್ದಾರೆ. 5,11,886 ರೈತರಿಗೆ ಬೆಳೆವಿಮೆ ಪರಿಹಾರ ಸಿಕ್ಕಿದೆ. ಜಿಎಸ್‌ಟಿಯನ್ನು ಕೇಂದ್ರ ಇಳಿಸಿದ ನಂತರ ರೈತರ ಪರಿಕರಗಳ ಬೆಲೆ ಕಮ್ಮಿಯಾಗಿದೆ ಡಿಐಪಿ ಸೇರಿದಂತೆ ಹಲವು ಗೊಬ್ಬರಗಳಿಗೆ ಕೇಂದ್ರದ ಸಬ್ಸಿಡಿ ಈಗಾಗಲೇ ನೀಡಲಾಗಿದೆ. ಆದರೆ ರಾಜ್ಯ ಸರ್ಕಾರ ಇನ್ನೂ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತೆರೆದಿಲ್ಲ. ಕೇಂದ್ರ ಈಗಾಗಲೇ ಮೆಕ್ಕೆಜೋಳಕ್ಕೆ 2400 ರು. ಬೆಂಬಲಬೆಲೆ ನಿಗದಿಪಡಿಸಿದೆ ಎಂದರು.

ಶುಂಠಿಬೆಳೆಗೆ ಚುಕ್ಕಿರೋಗ ಬಂದಿದೆ. ಮಂಗಗಳ ಹಾವಳಿ ಹೆಚ್ಚಾಗಿದ್ದು ಬೆಳೆಹಾನಿಗೆ ಸೂಕ್ತ ಪರಿಹಾರ ಕೊಡಬೇಕಾಗಿದೆ. ರೈತರು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಎರಡೂವರೆ 3 ಲಕ್ಷದವರೆಗೆ ಹಣ ಕಟ್ಟುವ ಪರಿಸ್ಥಿತಿ ಇದೆ. ಈಗ ೬ನೇ ಗ್ಯಾರಂಟಿಯಾಗಿ ರೈತರಿಗೆ ಆತ್ಮಹತ್ಯೆ ಭಾಗ್ಯ ಈ ಸರ್ಕಾರ ಕರುಣಿಸಿದೆ ಎಂದರು.

ತುಂಗಭದ್ರಾ ಅಚ್ಚುಕಟ್ಟು ರೈತರಿಗೆ 2ನೇ ಬೆಳೆಗೆ ನೀರುಬಿಡದೆ ಅವರಿಗೆ ಬೆಳೆನಷ್ಟವಾಗಿದ್ದು, ಅದರ ಪರಿಹಾರ ನೀಡಬೇಕಾಗಿದೆ. ಕಬ್ಬು ಬೆಳೆಗೆ ಸರ್ಕಾರ 33000 ರು. ಬೆಲೆ ಘೋಷಿಸಿದ್ದು ಅದು ರಾಜ್ಯಾದ್ಯಂತ ಅನ್ವಯಿಸುವಂತೆ ಮಾಡಬೇಕು. ನೀರಾವರಿ ಸಂಬಂಧಿತ ಕಾವೇರಿ, ಕೃಷ್ಣ, ಮೇಕೆದಾಟು, ಎತ್ತಿನಹೊಳೆ ಮುಂತಾದ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದರು. ಸರ್ಕಾರದ ವಿರುದ್ಧ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು, ರೈತರು ಭಾಗವಹಿಸಲಿದ್ದಾರೆ ಎಂದರು.

ಮಾಜಿ ಶಾಸಕ ಜೀವರಾಜ್ ಮಾತನಾಡಿ, ಮಲೆನಾಡು ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಮಿತಿಮೀರಿದ್ದು, ಶೃಂಗೇರಿ ತಾಲೂಕಿನಲ್ಲೇ ೮ಜನ ಆನೆ ತುಳಿತಕ್ಕೆ, 3 ಜನಕ್ಕೆ ಕಾಡುಕೋಣ ತಿವಿದು ಮೃತಪಟ್ಟಿದ್ದಾರೆ. ಪರಿಹಾರ ನೀಡಿದರೆ ರೈತರ ಸಮಸ್ಯೆ ಬಗೆಹರಿಸುವುದಿಲ್ಲ. ಅವರ ಆತ್ಮರಕ್ಷಣೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. 17 ನೋಟೀಫಿಕೇಷನ್ ಆದ ನಂತರವಷ್ಟೇ ಅದು ಅರಣ್ಯ ಜಮೀನು ಎಂದಾಗುತ್ತದೆ ಎಂದರು.ಗೃಹಲಕ್ಷ್ಮೀ ಗ್ಯಾರೆಂಟಿ ಯೋಜನೆ ಪ್ರಕಾರ ಮಹಿಳೆಯರಿಗೆ ಒಟ್ಟು 30 ತಿಂಗಳಲ್ಲಿ 60,000 ಜಮಾ ಆಗಬೇಕಿತ್ತು. ಆದರೆ, ಕೇವಲ 30,000 ಆಗಿದೆ. 2000 ರು. ನೀಡಿ ಎಲ್ಲ ಅಗತ್ಯವಸ್ತುಗಳ ಬೆಲೆ ಏರಿಸಿ ನೇರವಾಗಿ ಸರ್ಕಾರ ಬಡವರ ಜೇಬಿಗೆ ಕನ್ನಹಾಕಿದೆ ಎಂದು ಹರಿಹಾಯ್ದರು.

ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಜಿಲ್ಲಾ ರೈತಮೋರ್ಚಾದ ಜಿಲ್ಲಾಧ್ಯಕ್ಷ ಸಿದ್ಧಲಿಂಗಪ್ಪ, ಪ್ರಮುಖರಾದ ಶಿವರಾಜು, ಹರಿಕೃಷ್ಣ, ಮಾಲತೇಶ್, ಗಣೇಶ್ ಬಿಳಿಕಿ, ಕುಮಾರ್‌ನಾಯ್ಡು, ಮಲ್ಲಿಕಾರ್ಜುನ್, ಸಂಜು ಕಬ್ಬಿನ ಕಂಚಿ, ನಾಗರಾಜ್, ಸಿಂಗನಹಳ್ಳಿ ಸುರೇಶ್, ಮಂಜುನಾಥ್, ಚಂದ್ರಶೇಖರ್, ಶರತ್, ದಿನೇಶ್ ಆಚಾರ್‍ಯ ಇದ್ದರು.