ಸಾರಾಂಶ
ಕಾಂಗ್ರೆಸ್ ವರ್ತನೆ ತೀವ್ರ ಗೊಂದಲದಲ್ಲಿ ಇದ್ದಂತಿದೆ. ಪೆಹಲ್ಗಾಮ್ ಹಿಂದೂ ನಾಗರಿಕರ ಹತ್ಯೆಗೆ ಕೇಂದ್ರದ ಭದ್ರತಾ ವೈಫಲ್ಯವೆಂದು ಆರಂಭದಲ್ಲಿ ದೂರಿದ ಕಾಂಗ್ರೆಸ್, ನಂತರ ಯುದ್ಧ ಬದಲು ಶಾಂತಿ ಮಂತ್ರ ಜಪಿಸಿ ಭಯೋತ್ಪಾದಕರ ಪರ ಮೃದು ನಿಲುವು ತಳೆದಿತ್ತು. ಸಿಎಂ ಸಿದ್ದರಾಮಯ್ಯ ಅವರಂತೂ ಯುದ್ಧ ಬೇಡ ಎಂದು ಪಾಕಿಸ್ತಾನ ಪರ ವಹಿಸಿದ್ದರು ಎಂದು ರಾಕೇಶ್ ಶೆಟ್ಟಿ ಕಿಡಿಕಾರಿದರು.
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಹಿಂದೂಗಳ ಹತ್ಯೆ, ದೇಶದ ಭದ್ರತೆ ಮತ್ತು ಭಯೋತ್ಪಾದಕರ ವಿರುದ್ಧದ ಕಠಿಣ ನಿರ್ಧಾರಗಳ ಕುರಿತು ಕಾಂಗ್ರೆಸ್ ಪಕ್ಷ ಗೋಸುಂಬೆ ರೀತಿ ವರ್ತಿಸುತ್ತಿದೆ. ಕಾಂಗ್ರೆಸ್ ಇನ್ನಾದರೂ ನರಿ ಬುದ್ಧಿ ಬಿಟ್ಟು ದೇಶದ ಭದ್ರತೆ, ರಕ್ಷಣೆ ವಿಚಾರದಲ್ಲಿ ಒಗ್ಗಟ್ಟಿನ ಸ್ಪಷ್ಟ ನಿಲುವು ಪ್ರಕಟಿಸಲಿ ಎಂದು ಕಾರ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಕುಕ್ಕುಂದೂರು ಹೇಳಿದ್ದಾರೆ.ಕಾಂಗ್ರೆಸ್ ವರ್ತನೆ ತೀವ್ರ ಗೊಂದಲದಲ್ಲಿ ಇದ್ದಂತಿದೆ. ಪೆಹಲ್ಗಾಮ್ ಹಿಂದೂ ನಾಗರಿಕರ ಹತ್ಯೆಗೆ ಕೇಂದ್ರದ ಭದ್ರತಾ ವೈಫಲ್ಯವೆಂದು ಆರಂಭದಲ್ಲಿ ದೂರಿದ ಕಾಂಗ್ರೆಸ್, ನಂತರ ಯುದ್ಧ ಬದಲು ಶಾಂತಿ ಮಂತ್ರ ಜಪಿಸಿ ಭಯೋತ್ಪಾದಕರ ಪರ ಮೃದು ನಿಲುವು ತಳೆದಿತ್ತು. ಸಿಎಂ ಸಿದ್ದರಾಮಯ್ಯ ಅವರಂತೂ ಯುದ್ಧ ಬೇಡ ಎಂದು ಪಾಕಿಸ್ತಾನ ಪರ ವಹಿಸಿದ್ದರು ಎಂದು ಅವರು ಕಿಡಿಕಾರಿದರು.
ಕಾಂಗ್ರೆಸ್ ಪಾರ್ಟಿ, ರಾಷ್ಟ್ರೀಯ ಭದ್ರತೆ, ಸೈನಿಕರ ಹಿತಾಸಕ್ತಿ ಅಥವಾ ಪ್ರಧಾನಿಯ ನಿರ್ಧಾರಗಳ ಬಗ್ಗೆ ಬೆಂಬಲ ನೀಡುವ ಬದಲು, ತಪ್ಪು ಪ್ರಶ್ನೆಗಳನ್ನು ಎತ್ತುವ, ಗೊಂದಲ ಹುಟ್ಟಿಸುವ ರಾಜಕಾರಣವನ್ನು ಮಾಡುತ್ತ ಬಂದಿದೆ. ದೇಶ ಭಯೋತ್ಪಾದಕರ ವಿರುದ್ಧ ನಿರ್ಧಾರಾತ್ಮಕ ಕ್ರಮ ಕೈಗೊಂಡಿರುವ ಸಂದರ್ಭದಲ್ಲೂ, ಕಾಂಗ್ರೆಸ್ ದೇಶದ ಬದಿಗೆ ನಿಲ್ಲದೆ ನರಿ ಬುದ್ಧಿಯಲ್ಲಿ ಮುಳುಗಿದೆ. ನಿಜಕ್ಕೂ ಜನತೆ ಈ ನಾಟಕವನ್ನು ಸಹಿಸಲಾರರು ಎಂದ ಅವರು, ಕಾಂಗ್ರೆಸ್ ಪಕ್ಷ ದ್ವಂದ್ವ ರಾಜಕಾರಣಕ್ಕೆ ಇತಿಶ್ರೀ ಹಾಡಿ ದೇಶ, ಕೇಂದ್ರ ಸರ್ಕಾರ, ಸೈನಿಕರ ಪರ ಒಗ್ಗಟ್ಟಿನ ಕ್ಷಮತೆ ಪಾಲಿಸಿ, ಸರ್ಕಾರದ ನಿರ್ಧಾರವನ್ನು ಬೆಂಬಲಿಸಲಿ ಎಂದು ಆಗ್ರಹಿಸಿದರು.