ಕಾಂಗ್ರೆಸ್ ಸರ್ಕಾರವು ಶಿರಸಿಯಲ್ಲಿ ಆಯೋಜಿಸಿದ್ದ ಮೋದಿ ಕಾರ್ಯಕ್ರಮವನ್ನು ವಿಫಲ ಮಾಡಲು ತಂತ್ರ ಹೂಡಿತ್ತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಆರೋಪಿಸಿದರು.

ಶಿರಸಿ: ಏ. 28ರಂದು ಶಿರಸಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ವಿಫಲ ಮಾಡಬೇಕು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಬೇಕು, ಗೊಂದಲ ಸೃಷ್ಟಿಯಾಗಬೇಕು, ಚುನಾವಣೆಗೆ ಸಮಸ್ಯೆ ಮಾಡಬೇಕು ಎಂದು ಪೊಲೀಸ್ ಇಲಾಖೆಯನ್ನು ಮುಂದಿಟ್ಟು ಕಾಂಗ್ರೆಸ್ ತಂತ್ರ ಹೆಣೆದಿತ್ತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಆರೋಪಿಸಿದರು.

ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರವು ಶಿರಸಿಯಲ್ಲಿ ಆಯೋಜಿಸಿದ್ದ ಮೋದಿ ಕಾರ್ಯಕ್ರಮವನ್ನು ವಿಫಲ ಮಾಡಲು ತಂತ್ರ ಹೂಡಿತ್ತು. ಇದೇ ಕಾರಣಕ್ಕೆ ವಿದ್ಯುತ್ ಅವ್ಯವಸ್ಥೆ, ಸಾರ್ವಜನಿಕರಿಗೆ ಕ್ರೀಡಾಂಗಣಕ್ಕೆ ಬರಲು ಕಿರಿಕಿರಿ ಸೇರಿದಂತೆ ವಿವಿಧ ಹಂತದಲ್ಲಿ ಸಮಸ್ಯೆ ಒಡ್ಡಿದ್ದಾರೆ. ‌ಕಾರ್ಯಕ್ರಮದಲ್ಲಿ ಎಸ್‌ಪಿಜಿ ತಂಡದವರು ಸಹಕಾರ ನೀಡಿದ್ದರೂ ಪೊಲೀಸ್ ಇಲಾಖೆ ಮಾತ್ರ ಅಸಹಕಾರ ತೋರಿತ್ತು. ಈ ಬಗ್ಗೆ ಪಕ್ಷದ ಚುನಾವಣಾ ನಿರ್ವಹಣಾ ಸಮಿತಿಯ ವಕೀಲರ ಮೂಲಕ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದರು.

ಶಾಸಕ ಶಿವರಾಮ ಹೆಬ್ಬಾರ್ ಅವರು ಪ್ರಧಾನಿ ಕಾರ್ಯಕ್ರಮದಲ್ಲಿ ಭಾಗಿಯಾಗದ ಕಾರಣ ಪಕ್ಷದ ಶಿಸ್ತು ಸಮಿತಿಗೆ ವರದಿ ನೀಡಲಾಗಿದೆ. ಸಂಸದ ಅನಂತಕುಮಾರ ಹೆಗಡೆ ಕಾರ್ಯಕ್ರಮಕ್ಕೆ ಬರದೆ ಇದ್ದರೂ ಅವರು ಸಂಘಟನೆ ಜತೆ ಯಾವತ್ತೂ ಇದ್ದಾರೆ ಎಂದ ಅವರು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದು, ಆನೆಬಲ ಬಂದಂತಾಗಿದೆ ಎಂದರು.

ಸಮಾವೇಶಕ್ಕೆ ಬರುವ ವಾಹನಗಳಿಗೆ ಪಾರ್ಕಿಂಗ್, ಸಾರ್ವಜನಿಕರಿಗೆ ಕುಡಿಯುವ ನೀರು ಸೇರಿದಂತೆ ಒಟ್ಟಾರೆ ವ್ಯವಸ್ಥೆ ಅಚ್ಚುಕಟ್ಟುತನದಿಂದ ಕೂಡಿತ್ತು. ಯಾರೊಬ್ಬರಿಗೂ ಸಮಸ್ಯೆಯಾಗದಂತೆ ಪಕ್ಷದ ಕಾರ್ಯಕರ್ತರು ಕಾರ್ಯ ನಿರ್ವಹಿಸಿದ್ದರು. ಮೋದಿ ಮೇಲಿನ ಅಭಿಮಾನ, ಪಕ್ಷದ ಮೇಲಿನ ನಿಷ್ಠೆ ಕಾರ್ಯಕ್ರಮ ಯಶಸ್ವಿಗೆ ಕಾರಣವಾಗಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ ಹೆಗಡೆ ಹರ್ತೆಬೈಲ್, ಪ್ರಶಾಂತ ನಾಯ್ಕ ಕುಮಟಾ, ಪ್ರಮುಖರಾದ ಶ್ರೀರಾಮ ನಾಯ್ಕ, ಡಾನಿ ಡಿಸೋಜಾ, ರವಿ ಶೆಟ್ಟಿ, ಶಿವಾಜಿ ನರಸಾನಿ, ಮಹಾಂತೇಶ ಹಾದಿಮನಿ, ನಾಗರಾಜ ನಾಯ್ಕ ಮತ್ತಿತರರು ಇದ್ದರು.