ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅಧಿಕಾರಕ್ಕಾಗಿ ಹೆಣಗಾಡುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಜಾತಿ ಗಣತಿ ಹೆಸರಿನಲ್ಲಿ ಅಹಿಂದವನ್ನು ಓಲೈಸುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಆರಂಭಿಸಿದ ಜಾತಿ ಸಮೀಕ್ಷೆ ಸಂಪೂರ್ಣ ಅವೈಜ್ಞಾನಿಕ ವಾಗಿದೆ. ಜನರಿಗೆ ಇದರಲ್ಲಿ ಆಸಕ್ತಿ ಇಲ್ಲ. ಕಾಂಗ್ರೆಸ್ ಸಚಿವರೇ ಈ ಸಮೀಕ್ಷೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯ ಹೈಕೋರ್ಟ್ ಕೂಡ ಈ ಸಮೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ಕಡ್ಡಾಯವಾಗಿ ಮಾಹಿತಿ ನೀಡುವ ಅವಶ್ಯಕತೆ ಇಲ್ಲ ಎಂದು ತೀರ್ಪು ನೀಡಿದೆ. ವಾಸ್ತವ ಹೀಗಿದ್ದಾಗ ಈ ಜಾತಿಗಣತಿ ಮಾಡಿ ಪ್ರಯೋಜನವೇನು ಎಂದು ಪ್ರಶ್ನಿಸಿದರು.
ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರಿಗೇ ಚುನಾವಣೆಯಲ್ಲಿ ಟಿಕೇಟ್ ನೀಡದೆ ಸಂಸತ್ ಒಳಗೆ ಪ್ರವೇಶಿಸದಂತೆ ಹೊರಗಿಟ್ಟಿತ್ತು. ಹಿಂದುಳಿದ ವರ್ಗಗಳ ಬಗ್ಗೆ ಕಾಕಾ ಕಾಲೇಕರ್ ವರದಿಯನ್ನು ಕಾಂಗ್ರೆಸ್ 40 ವರ್ಷಗಳ ಕಾಲ ಕತ್ತಲಲ್ಲಿಟ್ಟಿದ್ದು ಐತಿಹಾಸಿಕ ದ್ರೋಹ. ಊಳುವವನೇ ಒಡೆಯ ಎಂಬ ಕಾನೂನನ್ನು ತಂದು ಹಿಂದುಳಿದವರ ಉನ್ನತಿಗೆ ಕಾರಣರಾದ ಡಿ.ದೇವರಾಜ್ ಅರಸು ಅವರನ್ನೇ ಪಕ್ಷದಿಂದ ಹೊರಗೆ ಹಾಕಿದ್ದು ಯಾಕೆ ಎಂದು ಹರಿಹಾಯ್ದರು.ಮಾಜಿ ಮುಖ್ಯಂತ್ರಿ ಬಿ.ಎಸ್.ಯಡಿಯೂರಪ್ಪ ಎಲ್ಲ ಜಾತಿಯವರಿಗೂ ಸಮಾನವಾಗಿ ಆರ್ಥಿಕ ಸೌಲಭ್ಯ ನೀಡಿದ್ದರು. ಅವರ ಬಗ್ಗೆ ಮಾತನಾಡುವ ಯೋಗ್ಯತೆ ಸಚಿವ ಮಧುಗೆ ಇಲ್ಲ. ಮಡಿವಾಳ ಮಾಚೀದೇವ, ಉಪ್ಪಾರ, ಆರ್ಯವೈಶ್ಯ, ವಿಶ್ವಕರ್ಮ, ಅಂಬಿಗರ ಚೌಡಯ್ಯ, ಈಡಿಗ, ಸವಿತಾ ಸಮಾಜ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ ಅನುದಾನ ನೀಡಿದ ಬಿಎಸ್‌ವೈ ಸಂಗೋಳ್ಳಿ ರಾಯಣ್ಣ, ಕನಕದಾಸರ ಜನ್ಮಸ್ಥಳ ಬಾಡಾದ ಅಭಿವೃದ್ಧಿಗೆ ಅನುದಾನ ನೀಡಿದರೂ ಕಾಂಗ್ರೆಸ್ ಅದನ್ನು ಏಕೆ ಮಾಡಿರಲಿಲ್ಲ. ಬಿ.ಎಸ್. ಯಡಿಯೂರಪ್ಪನವರೇ ಬರಬೇಕಿತ್ತಾ ಎಂದು ತಿರುಗೇಟು ನೀಡಿದರು. ಸರ್ವಸ್ಪರ್ಶಿ ಸರ್ವರಿಗೆ ಸಮಪಾಲು-ಸಮಬಾಳು ಆಡಳಿತ ನೀಡಿದ ಯಡಿಯೂರಪ್ಪನವರು ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ. ಟವರ್ ಸಮಸ್ಯೆ ಬಗ್ಗೆ ಮೋದಿ ಸರ್ಕಾರ ಸುಮ್ಮನೆ ಕೂತಿಲ್ಲ. ಶಿವಮೊಗ್ಗ ಜಿಲ್ಲೆಗೆ ನೆಟ್‌ವರ್ಕ್ ಸಮಸ್ಯೆ ಇದ್ದಕಡೆ ನೂತನವಾಗಿ 90 ಟವರ್‌ಗಳನ್ನು ಈಗಾಗಲೇ ನೀಡಲಾಗಿದೆ ಮತ್ತು ಅವು ಕಾರ್ಯಾಚರಣೆ ಶುರುಮಾಡಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಪಕ್ಷದ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಕೆ.ಜಿ.ಕುಮಾರಸ್ವಾಮಿ, ಚಂದ್ರಶೇಖರ ಇದ್ದರು.ಕಾಂಗ್ರೆಸ್ ಪಕ್ಷದ ಮೇಲೆ ಸುಮೊಟೋ ಕೇಸ್ ದಾಖಲಿಸಬೇಕು
ಸಚಿವ ಮಧು ಬಂಗಾರಪ್ಪ ಜೆಡಿಎಸ್‌ನಿಂದ ಕಾಂಗ್ರೆಸ್ಸಿಗೆ ಹೋಗಿ ಹೇಗೋ ಮಂತ್ರಿಯಾದರು. ಅಹಿಂದ, ಗರೀಬಿ ಹಠಾವೊ ಕೇವಲ ಭಾಷಣಕ್ಕೆ ಸೀಮಿತವಾಗಬಾರದು. ಜನರ ತೆರಿಗೆ ದುಡ್ಡಿನ ಜೊತೆ ಚೆಲ್ಲಾಟವಾಡುವುದನ್ನು ಬಿಡಿ. ಪ್ರಜ್ಞಾವಂತ ಮತದಾರರಿಗೆ ಮುಜುಗುರವಾಗುವ ರೀತಿಯಲ್ಲಿ ಹಗುರವಾಗಿ ಮಾತನಾಡಬೇಡಿ ಎಂದು ಸಚಿವ ಮಧು ಬಂಗಾರಪ್ಪ ಅವರಿಗೆ ಸಂಸದ ಬಿ.ವೈ.ರಾಘವೇಂದ್ರ ಕಿವಿಮಾತು ಹೇಳಿದರು.ಜಾತಿಗಣತಿ ಬಗ್ಗೆ ಬಿಜೆಪಿಯವರ ಮೇಲೆ ಸುಮೊಟೋ ಕೇಸ್ ದಾಖಲು ಮಾಡಲು ಮಧುಬಂಗಾರಪ್ಪ ಹೇಳಿದ್ದಾರೆ. ಆದರೆ ವಾಲ್ಮೀಕಿ ನಿಗಮ ಹಗರಣ ಮತ್ತಿತರ ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ ಪಕ್ಷದ ಮೇಲೆ ಸುಮೊಟೋ ಕೇಸ್ ದಾಖಲಿಸಬೇಕು
ಟೋಲ್ ಗೇಟ್ ಪ್ರತಿಭಟನೆಗೆ ಬೆಂಬಲಶಿಕಾರಿಪುರ ಮತ್ತು ಸವಳಂಗದ ಸಮೀಪ ರಾಜ್ಯ ಸರ್ಕಾರ ಸ್ಥಾಪಿಸಿರುವ ಟೋಲ್ ಗೇಟ್ ವಿರುದ್ಧ ಅ.೯ರಂದು ಸ್ಥಳೀಯರು ಹಮ್ಮಿಕೊಂಡಿರುವ ಹೋರಾಟಕ್ಕೆ ತಮ್ಮ ಬೆಂಬಲವಿದೆ. ಜನರ ವಿರೋಧವಿದ್ದರೂ ಮತ್ತೆ ರಿ ಟೆಂಡರ್ ನೀಡಲಾಗಿದೆ. ಈ ಎರಡೂ ಟೋಲ್‌ಗಳನ್ನು ಕಿತ್ತೊಗೆಯಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಆಗ್ರಹಿಸಿದರು.