ಸಾರಾಂಶ
ಈಶ್ವರ್ ಶೆಟ್ಟರ್
ಕನ್ನಡಪ್ರಭ ವಾರ್ತೆ ಬಾಗಲಕೋಟೆಸ್ವಾತಂತ್ರ್ಯ ನಂತರದಲ್ಲಿ ನಡೆದ ಎಲ್ಲ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವಿನ ನಾಗಾಲೋಟ ಮುಂದುವರಿಸಿತ್ತು. 9ನೇ ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಬಾಗಲಕೋಟೆ ಮತಕ್ಷೇತ್ರದಲ್ಲಿ ಗೆಲವಿನ ನಗೆ ಬೀರುವಲ್ಲಿ ಯಶಸ್ವಿಯಾಗಿತ್ತು, ಆದರೆ, ಪಕ್ಷವು ಮತಗಳಿಕೆಯ ಪ್ರಮಾಣದಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿರುವ ಸೂಕ್ಷ್ಮತೆ ಈ ಚುನಾವಣೆಯಲ್ಲಿ ಮತದಾರ ಪ್ರಭು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದರು.
ಚುನಾವಣೆ ವೇಳೆ ರಾಷ್ಟ್ರ ಮಟ್ಟದ ರಾಜಕೀಯದಲ್ಲಿ ಅನೇಕ ಬದಲಾವಣೆಗಳಾದವು. ಆಡಳಿತ ನಡೆಸುತ್ತಿದ್ದ ಜನತಾ ಪಕ್ಷ ಎರಡು ಹೋಳಾಯಿತು. ಒಂದು ಬಣ ರಾಷ್ಟ್ರೀಯ ಮಟ್ಟದಲ್ಲಿ ಜನತಾದಳ ಸೇರಿದರೆ, ಇನ್ನೊಂದು ಬಣ ಜನತಾ ಪಕ್ಷವಾಗಿಯೇ ಮುಂದುವರೆಯಿತು. ರಾಷ್ಟ್ರ ಮಟ್ಟದಲ್ಲಿ ವಿ.ಪಿ.ಸಿಂಗ್ ಹಾಗೂ ಚಂದ್ರಶೇಖರ ಕ್ರಮವಾಗಿ ಆಯಾ ಪಕ್ಷದ ನಾಯಕರಾದರುರಾಜೀವ ಗಾಂಧಿ ನಾಯಕತ್ವ: ಇಂದಿರಾಗಾಂಧಿಯ ಹತ್ಯೆಯ ನಂತರ ರಾಷ್ಟ್ರ ರಾಜಕಾರಣದಲ್ಲಿ ರಾಜೀವ ಗಾಂಧಿಯವರ ನಾಯಕತ್ವದಲ್ಲಿ ಪಕ್ಷ ಮುನ್ನಡೆಯುತ್ತಿದ್ದ ಕಾಲವದು. ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆಗಳಾದವು. ಲಿಂಗಾಯತ ಸಮುದಾಯದ ವಿರೇಂದ್ರ ಪಾಟೀಲ ಅವರಿಗೆ 1988ರ ಲೋಕಸಭೆ ಚುನಾವಣೆಗೆ ಮುನ್ನ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆಯ ಜವಾಬ್ದಾರಿಯನ್ನು ರಾಜೀವ ಗಾಂಧಿಯವರು ನೀಡಿದರು. ನಂತರ ರಾಜ್ಯದ ರಾಜಕಾರಣದ ಚಿತ್ರಣವೇ ಬದಲಾಯಿತಲ್ಲದೆ ಬಾಗಲಕೋಟೆ ಲೋಕಸಭೆಗೆ ಅಂದು ಸಂಸದರಾಗಿದ್ದ ಎಚ್.ಬಿ.ಪಾಟೀಲ ಅವರಿಗೆ ಟಿಕೆಟ್ ನೀಡದೆ ತಮ್ಮ ಒಡನಾಡಿಯಾಗಿದ್ದ ಮುಧೋಳದ ಎಸ್.ಟಿ.ಪಾಟೀಲರಿಗೆ ಟಿಕೆಟ್ ನೀಡಿದ್ದು ವಿರೇಂದ್ರ ಪಾಟೀಲ.
1989ರ ಲೋಕಸಭೆ ಚುನಾವಣೆ ಜೊತೆಗೆ ರಾಜ್ಯ ವಿಧಾನಸಭೆಗೂ ಚುನಾವಣೆ ನಡೆದಿತ್ತು. ಬಾಗಲಕೋಟೆ ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 4 ಜನತಾದಳ, 4 ಕಾಂಗ್ರೆಸ್ ಪಕ್ಷದ ಶಾಸಕರು ಆಯ್ಕೆಯಾದರು. ಲೋಕಸಭೆಗೆ ಕಾಂಗ್ರೆಸ್ ಪಕ್ಷದ ಎಸ್.ಟಿ.ಪಾಟೀಲ ಆಯ್ಕೆಯಾದರು, ವಿಶೇಷವೆಂದರೆ ಜಿಲ್ಲೆಯ ಮುಧೋಳ ಮೀಸಲು ಕ್ಷೇತ್ರದಿಂದ ಪ್ರಥಮ ಬಾರಿಗೆ ಸ್ಪರ್ಧಿಸಿ ಗೆಲವು ಕಂಡ ಸದ್ಯದ ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪುರ ಅವರ ಸಕ್ರಿಯ ರಾಜಕಾರಣಕ್ಕೆ ಬರಲು ಅಂದಿನ ಸಂಸತ ಅಭ್ಯರ್ಥಿಯಾಗಿದ್ದ ಎಸ್.ಟಿ.ಪಾಟೀಲ ಎಂದರೆ ತಪ್ಪಾಗಲಾರದು.ಪ್ರಥಮ ಪ್ರವೇಶ: ಲೋಕಸಭೆ ಜೊತೆಗೆ ವಿಧಾನಸಭೆ ಚುನಾವಣೆ ನಡೆದಿದ್ದರಿಂದ 1989ರಲ್ಲಿ ಬಾಗಲಕೋಟೆ ಲೋಕಸಭೆಯ 8 ವಿಧಾನಸಭೆಗೆ ಆಯ್ಕೆಯಾದವರು ಪ್ರಥಮ ಬಾರಿಗೆ ವಿಧಾನಸೌಧದ ಮೆಟ್ಟಿಲು ಎರಿದ್ದು ವಿಶೇಷವೇ ಸರಿ. ಬಾಗಲಕೋಟೆಯಿಂದ ಅಜಯಕುಮಾರ ಸರನಾಯಕ, ಬೀಳಗಿಯಿಂದ ಜಿ.ಜಿ.ಯಳ್ಳಿಗುತ್ತಿ, ಜಮಖಂಡಿಯಿಂದ ಆರ್.ಎಂ.ಕಲೂತಿ, ಮುಧೋಳದಿಂದ ಆರ್.ಬಿ.ತಿಮ್ಮಾಪುರ, ಹುನಗುಂದದಿಂದ ಎಸ್.ಆರ್.ಕಾಶಪ್ಪನವರ, ಬಾದಾಮಿಯಿಂದ ಎಂ.ಕೆ.ಪಟ್ಟಣಶೆಟ್ಟರ, ಗುಳೇದಗುಡ್ಡದಿಂದ ಎಚ್.ವೈ.ಮೇಟಿ, ರೋಣದಿಂದ ಜಿ.ಎಸ್.ಪಾಟೀಲ ಆಯ್ಕೆಯಾಗುವ ಮೂಲಕ ರಾಜಕೀಯ ಮುನ್ನೆಲೆಗೆ ಬಂದು ಇಂದಿಗೂ ವಿವಿಧ ಪಕ್ಷಗಳಲ್ಲಿ ಸಕ್ರಿಯ ರಾಜಕಾರಣದಲ್ಲಿ ಇದ್ದಾರೆ, ಇವರಲ್ಲಿ ಆರ್.ಎಂ.ಕಲೂತಿ ಮತ್ತು ಎಸ್.ಆರ್.ಕಾಶಪ್ಪನವರ ನಿಧನ ಹೊಂದಿದ್ದಾರೆ.
ನಾಡಗೌಡರಿಗೆ ತಪ್ಪಿದ ಟಿಕೆಟ್: 1984ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡಿ ಕೇವಲ 10 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದ ಜನತಾದಳದ ಎಮ್.ಪಿ.ನಾಡಗೌಡ ಅವರಿಗೆ ಮತ್ತೊಮ್ಮೆ ಅವಕಾಶ ನೀಡುಬಹುದಾಗಿತ್ತು. ಆದರೆ ಅವರ ಬದಲಾಗಿ ಮುಧೋಳದ ಎಸ್.ಎಸ್.ಮಲಘಾಣ ಅವರಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾ ರಾಜಕಾರಣದಲ್ಲಿ ಜನತಾ ಪರಿವಾರದ ಮುಂಚೂಣಿ ನಾಯಕರುಗಳು ಆಡಿದ ರಾಜಕೀಯ ನಿಜಕ್ಕೂ ಅಂದು ಅಚ್ಚರಿ ಮೂಡಿಸಿತ್ತು.ಇಬ್ಬರೂ ಒಂದೇ ಗ್ರಾಮದವರು: 1989ರ ಚುನಾವಣೆಯ ವಿಶೇಷವೆಂದರೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಎಸ್.ಟಿ.ಪಾಟೀಲ ಹಾಗೂ ಜನತಾದಳದಿಂದ ಸ್ಪರ್ಧಿಸಿದ್ದ ಎಸ್.ಎಸ್.ಮಲಘಾಣ ಅವರು ಮುಧೋಳ ತಾಲೂಕಿನ ಮಂಟೂರು ಗ್ರಾಮದವರು. ನಂತರ ಇಬ್ಬರೂ ಸಹ ಮುಧೋಳವನ್ನು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಅಲ್ಲಿಯೇ ನೆಲೆಸಿದ್ದರು.
ರಾಮಕೃಷ್ಣ ಹೆಗಡೆಯವರ ಕಟ್ಟಾ ಅನುಯಾಯಿಯಾಗಿದ್ದ ಎಸ್.ಎಸ್.ಮಲಘಾಣ ಅವರು ಜನತಾದಳದಿಂದ ಸ್ಪರ್ಧೆಗೆ ಮುಂದಾದಾಗ ಮೂಲತ ಕಾಂಗ್ರೆಸ್ ನಲ್ಲಿದ್ದ ಎಸ್.ಟಿ.ಪಾಟೀಲರಿಗೆ ಟಿಕೆಟ್ ನೀಡಿ ಅವರ ಗೆಲವಿಗೆ ಕಾರಣರಾದವರು. ಅಂದಿನ ಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ವಿರೇಂದ್ರ ಪಾಟೀಲ. ಎಸ್.ಟಿ.ಪಾಟೀಲ ಹಾಗೂ ವಿರೇಂದ್ರ ಪಾಟೀಲ ಅವರ ರಾಜಕೀಯ ಸಂಬಂಧ ಒಂದೆಡೆಯಾದರೆ, ಕೈಗಾರಿಕೋದ್ಯಮಿಯಾಗಿದ್ದ ಎಸ್.ಟಿ.ಪಾಟೀಲ ವಿರೇಂದ್ರ ಪಾಟೀಲ ಅವರು ಕೈಗಾರಿಕಾ ಹಾಗೂ ಪೆಟ್ರೋಲಿಯಂ ಸಚಿವರಾಗಿದ್ದಾಗಿನಿಂದಲೂ ಉತ್ತಮ ಸ್ನೇಹಿತರಾಗಿದ್ದರು. ಹೀಗಾಗಿ ಹಾಲಿ ಸಂಸದರ ಟಿಕೆಟ್ ಬದಲಾಯಿಸಲು ಸಾದ್ಯವಾಗಿತ್ತು.ಬಿ.ಇ.ಪದವೀಧರರಾಗಿದ್ದ ಎಸ್.ಟಿ.ಪಾಟೀಲ ನೇರವಾದಿಯಾಗಿದ್ದರು. ಎಸ್.ಎಸ್.ಮಲಘಾಣ ಸೌಮ್ಯವಾದಿ, ರಾಜಕಾರಣದ ವಿಷಯದಲ್ಲಿ ಇಬ್ಬರು ಸಹ ಚಾಣಾಕ್ಷರೆ, ಇಬ್ಬರು ರೆಡ್ಡಿ ಸಮುದಾಯದವರಾಗಿದ್ದು ಸಹ ಚುನಾವಣೆಯ ವಿಶೇಷವಾಗಿತ್ತು.
ಚುನಾವಣೆಯಲ್ಲಿ 9 ಜನ ಸ್ಪರ್ಧಿಸಿದ್ದರು ಸಹ ಇವರಿಬ್ಬರ ನಡುವೆ ತೀವ್ರ ಹಣಾಹಣಿಯ ಚುನಾವಣೆ ನಡೆದಿತ್ತು. ಪ್ರಚಾರಕ್ಕೆ ಉಭಯ ಪಕ್ಷಗಳ ನಾಯಕರುಗಳಾದ ರಾಮಕೃಷ್ಣ ಹೆಗಡೆ, ವಿರೇಂದ್ರ ಪಾಟೀಲರಂತಹ ನಾಯಕರು ಲೋಕಸಭೆ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದ್ದರು. ಅಂದು ನಡೆದ ಚುನಾವಣೆಯಲ್ಲಿ 6,63,239ರಷ್ಟು ಒಟ್ಟು ಮತದಾನವಾಗಿತ್ತು, ಶೇಕಡಾ (69.36)ರಷ್ಟುಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಎಸ್.ಟಿ.ಪಾಟೀಲರವರು 3,06,990 ಮತಗಳನ್ನು ಪಡೆದು ಆಯ್ಕೆಯಾದರೆ, ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಅವರ ಸಮೀಪದ ಪ್ರತಿ ಸ್ಪರ್ಧಿ ಎಸ್.ಎಸ್.ಮಲಘಾಣ 2,74,752 ಮತಗಳನ್ನು ಪಡೆದಿದ್ದರು. ಗೆಲವಿನ ಅಂತರ 32,238 ಇತ್ತು.