ಕಾಂಗ್ರೆಸ್‌ vs ಕಾಂಗ್ರೆಸ್‌: ಸಚಿವ ಈಶ್ವರ ಖಂಡ್ರೆ ವಿರುದ್ಧ ಬಿ.ಆರ್. ಪಾಟೀಲ್ ಕಿಡಿ

| Published : Mar 10 2024, 01:33 AM IST / Updated: Mar 10 2024, 01:52 PM IST

Eshwar Khandre
ಕಾಂಗ್ರೆಸ್‌ vs ಕಾಂಗ್ರೆಸ್‌: ಸಚಿವ ಈಶ್ವರ ಖಂಡ್ರೆ ವಿರುದ್ಧ ಬಿ.ಆರ್. ಪಾಟೀಲ್ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸಚಿವ ಈಶ್ವರ ಖಂಡ್ರೆ ಅವರು ನನಗೆ ಎರಡನೇ ಬಾರಿ ಅವಮಾನ ಮಾಡಿದ್ದಾರೆ ಎಂದು ಖಂಡ್ರೆ ವಿರುದ್ಧ ಮುಖ್ಯಮಂತ್ರಿಯವರ ರಾಜಕೀಯ ಸಲಹೆಗಾರ, ಆಳಂದ ಶಾಸಕ ಬಿ.ಆರ್. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಸಚಿವ ಈಶ್ವರ ಖಂಡ್ರೆ ಅವರು ನನಗೆ ಎರಡನೇ ಬಾರಿ ಅವಮಾನ ಮಾಡಿದ್ದಾರೆ ಎಂದು ಖಂಡ್ರೆ ವಿರುದ್ಧ ಮುಖ್ಯಮಂತ್ರಿಯವರ ರಾಜಕೀಯ ಸಲಹೆಗಾರ, ಆಳಂದ ಶಾಸಕ ಬಿ.ಆರ್. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಬಸವಕಲ್ಯಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನನಗೆ ಮೊದಲನೇ ಸಾಲಿನಲ್ಲಿ ಆಸನದ ವ್ಯವಸ್ಥೆ ಇರಲಿಲ್ಲ. ಅವರೇ ಫೋನ್ ಮಾಡಿ ಕರೀತಾರೆ. ಮತ್ತೆ ಅವಮಾನ ಮಾಡ್ತಾರೆ. ಇನ್ಮೇಲೆ ಅವರ ಜೊತೆ ನಾನು ವೇದಿಕೆ ಹಂಚಿಕೊಳ್ಳುವದಿಲ್ಲ ಎಂದರು.

ನಾನು ಕೂಡಾ ಬೀದರ್ ಟಿಕೆಟ್ ಆಕಾಂಕ್ಷಿಯಿದ್ದೇನೆ. ಆದರೆ, ಪಾರ್ಟಿ ಯಾರಿಗೆ ಟಿಕೆಟ್ ಕೊಡುತ್ತದೆ ಅವರಿಗೆ ಬೆಂಬಲ ಕೊಡುತ್ತೇನೆ. ಈಶ್ವರ ಖಂಡ್ರೆ ಅವರ ಪುತ್ರನಿಗೆ ಟಿಕೆಟ್ ಕೊಟ್ಟರೂ ನಾನು ಬೆಂಬಲ ಕೊಡುತ್ತೇನೆ. ಏಕೆಂದರೆ, ವೈಯುಕ್ತಿಕ ಅಸಮಾಧಾನ ಬೇರೆ, ಪಕ್ಷದ ಅಗತ್ಯತೆ ಬೇರೆ ಎಂದರು.

ಈಶ್ವರ ಖಂಡ್ರೆ ವಿಷಾದ: ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಬಿ.ಆರ್‌.ಪಾಟೀಲ್‌ ಹಿರಿಯರಿದ್ದಾರೆ. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಮುಖ್ಯಮಂತ್ರಿ ಅಭಿನಂದನಾ ಕಾರ್ಯಕ್ರಮದಲ್ಲಿ ಅವರಿಗೆ ನೋವಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸ್ತೇನೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಇತ್ತೀಚೆಗೆ ಬಸವಕಲ್ಯಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಕುರ್ಚಿ ಸಿಗದೆ ವಾಪಸಾಗಿದ್ದ ಬಿ.ಆರ್‌.ಪಾಟೀಲ್‌, ಈಶ್ವರ ಖಂಡ್ರೆಯವರ ಕುರಿತು ಶನಿವಾರ ತೀವ್ರ ಕಿಡಿಕಾರಿದ್ದರು. 

ಇನ್ಯಾವತ್ತೂ ಖಂಡ್ರೆ ಅವರ ಜತೆಗೆ ವೇದಿಕೆ ಹಂಚಿಕೊಳ್ಳಲ್ಲ ಅಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಖಂಡ್ರೆ, ನಾನು ಒಂದು ದಿನ ಮುಂಚಿತವಾಗಿಯೇ ಹೋಗಿ ಅವರಿಗೆ ಶಿಷ್ಟಾಚಾರದ ಪ್ರಕಾರ ಮೊದಲ ಸಾಲಿನಲ್ಲೇ ಖುರ್ಚಿ ಹಾಕಿಸಿದ್ದೆ‌. ಅದಕ್ಕೆ ಅವರ ಹೆಸರು ಅಂಟಿಸಿದ್ದನ್ನು ನೋಡಿಕೊಂಡೇ ಬಂದಿದ್ದೆ ಎಂದರು.

ಮುಖ್ಯಮಂತ್ರಿ ಅವರನ್ನು ಸ್ವಾಗತಿಸಿ ಬರುವಾಗ ವಿಳಂಬ ಆಗಿದೆ. ಆ ಸಮಯದಲ್ಲಿ ಬಿ.ಆರ್‌. ಪಾಟೀಲ್‌ ಅವರು ಬಂದಿದ್ದು ನನ್ನ ಗಮನಕ್ಕೆ ಬಂದಿರಲಿಲ್ಲ. ಕೊನೆಗೂ ಅವರು ಕಾರ್ಯಕ್ರಮದ ವೇದಿಕೆಗೆ ಬರಲಿಲ್ಲ. 

ಕಾರ್ಯಕ್ರಮ ಆಯೋಜನೆ ಮಾಡಿದವರಿಂದ ಅಚಾತುರ್ಯ ಆಗಿದೆ. ಘಟನೆ ಕುರಿತು ನಾನು ಅತ್ಯಂತ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.

ಪಾಟೀಲರು ಮನಸ್ಸಿನಲ್ಲಿ ಯಾವುದನ್ನೂ ಇಟ್ಟುಕೊಳ್ಳಬಾರದು ಎಂದು ವಿನಂತಿ ಮಾಡುತ್ತೇನೆ. ಅವರ ಜೊತೆ ಈ ವಿಚಾರವಾಗಿ ನೇರವಾಗಿ ಮಾತನಾಡುತ್ತೇನೆ ಎಂದು ಖಂಡ್ರೆ ಪ್ರತಿಕ್ರಿಯಿಸಿದರು.