ಸಾರಾಂಶ
ಪ್ರಜ್ವಲ್ ರೇವಣ್ಣ ಪರ ಪ್ರಚಾರ । ರಾಜ್ಯ ಕಾಂಗ್ರೆಸ್ ಸರ್ಕಾರ ಆರುವ ದೀಪದಂತೆ ಉರಿಯುತ್ತಿದೆ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ‘ಕಾಂಗ್ರೆಸ್‌ನವರು ಪುಕ್ಸಟ್ಟೆ ಮತನಾಡುತ್ತ, ಗರೀಬಿ ಹಠಾವೋ ನಾಟಕ ಆಡಿದ ಕಾಂಗ್ರೆಸ್, ಈಗ ಗ್ಯಾರಂಟಿ ನಾಟಕ ಆಡುತ್ತಿದೆ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ’ ಎಂದು ಬಿಜೆಪಿ ರಾಜ್ಯಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ಬಿಜೆಪಿ ಬೆಂಬಲಿತ ಜೆಡಿಎಸ್ ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣೆ ಪ್ರಚಾರಕ್ಕಾಗಿ ಆಯೋಜನೆ ಮಾಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ‘ಮುಂದಿನ ಲೋಕಸಭಾ ಚುನಾವಣೆ ಯಾವುದೋ ಎರಡು ಜಾತಿ, ಅಥವಾ ರಾಜಕೀಯ ಪಕ್ಷಗಳ ನಡುವೆ ನಡೆಯುತ್ತಿರುವ ಚುನಾವಣೆಯಲ್ಲ. ದೇಶ ಇಂದು ವಿಶ್ವಖ್ಯಾತಿ ಗಳಿಸಿರುವ ಜತೆಗೆ ಅಭಿವೃದ್ಧಿ ಕಡೆ ನಡೆಯುತ್ತಿರುವುದಕ್ಕೆ ಮೋದಿ ಕಾರಣ’ ಎಂದು ಹೇಳಿದರು.‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ, ಆರುವ ದೀಪ ಜೋರಾಗಿ ಉರಿಯುತ್ತದೆ ಎನ್ನುತ್ತಾರೆ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ ಹಾಗಾಗಿದೆ. ಎಪ್ಪತ್ತು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಬಡವರ ಬಡತನ ನಿರ್ಮೂಲನೆ ಆಗಿಲ್ಲ, ಆದರೆ ಕಾಂಗ್ರೆಸ್ ಪಕ್ಷದ ಪುಡಾರಿಗಳ ಬಡತನ ನಿರ್ಮೂಲನೆ ಆಯ್ತು ಮತ್ತು ಬಡತನ ದೂರ ಮಾಡದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ’ ಎಂದು ಮೂದಲಿಸಿದರು.
‘ಗ್ಯಾರಂಟಿ ಅಂತ ಜನರ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ, ಮಹಿಳೆಯರಿಗೆ ೨ ಸಾವಿರ ರು. ಭಿಕ್ಷೆ ಕೊಡ್ತಿದ್ದಾರೆ, ಅದರಿಂದ ಅವರ ಬದುಕು ಹಸನಾಗಿಲ್ಲ, ರೈತರ ಬಗ್ಗೆ ಕಾಳಜಿ ಹಾಗೂ ಚಿಂತನೆ ಇಲ್ಲ, ಯಾವುದೇ ಜನಪರ ಅಭಿವೃದ್ಧಿ ಕೆಲಸಗಳಾಗಿಲ್ಲ, ಗ್ಯಾರಂಟಿ ಕೊಟ್ಟಿದ್ದೇವೆ ಎಂದು ಹೇಳುತ್ತ ಹೆಚ್ಚು ಸ್ಥಾನ ಗೆಲ್ಲುವ ಕನಸು ಕಾಣುತ್ತಿದ್ದಾರೆ’ ಎಂದು ಕುಟುಕಿದರು.‘ಇಡೀ ದೇಶದಲ್ಲಿ ಕಾಂಗ್ರೆಸ್ ಗೆಲ್ಲೋದು ೪೪ ಸ್ಥಾನಗಳು ಮಾತ್ರ, ಇಲ್ಲಿ ಕಾಂಗ್ರೆಸ್ ಗೆದ್ದರೆ ೪೪ ಜತೆಗೆ ಇನ್ನೊಂದು ಅಷ್ಟೆ, ಆದರೆ ಪ್ರಜ್ವಲ್ ರೇವಣ್ಣ ಅವರು ಗೆದ್ದು ನರೇಂದ್ರ ಮೋದಿ ಪರ ಕೈ ಎತ್ತುತ್ತಾರೆ. ಆದ್ದರಿಂದ ಪ್ರಜ್ವಲ್ ರೇವಣ್ಣರಿಗೆ ಮತ ನೀಡಬೇಕು’ ಎಂದು ಮನವಿ ಮಾಡಿದರು.
‘ಪಾಪ ಅವರು ಹತಾಶರಾಗಿದ್ದಾರೆ. ಕುಮಾರಸ್ವಾಮಿ ಅವರಿಗೆ ಆರೋಗ್ಯ ಸರಿಯಿಲ್ಲ, ಇನ್ನೇನು ರಾಜಕೀಯ ಮುಗಿದುಹೋಯಿತು ಎನ್ನುವ ಭ್ರಮೆಯಲ್ಲಿದ್ದರು. ಆದರೂ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಿಂದ ಲೋಕಸಭಾ ಚುನಾವಣೆಗೆ ನಿಂತಿದ್ದಾರೆ, ಗೆದ್ದ ನಂತರ ಸಚಿವರಾದರೆ ತಮ್ಮ ಅಸ್ಥಿತ್ವ ಇರೋದಿಲ್ಲ ಅನ್ನುವ ಭಯ ಡಿಕೆಶಿಗೆ ಕಾಡ್ತಾ ಇದೆ. ಆದ್ದರಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ನಾಮಪತ್ರ ಸಲ್ಲಿಸಿದ ವಿಚಾರದಲ್ಲಿ ಮಾತನಾಡಿ, ‘ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಮತ್ತು ಕ್ಷೇತ್ರದ ಮತದಾರರೂ ಕ್ರಮ ಕೈಗೊಳ್ಳುತ್ತಾರೆ, ಅವರು ಎಷ್ಟೆಷ್ಟು ಮಾತನಾಡುತ್ತಾರೆ ಅದರ ದುಪ್ಪಟ್ಟು ಮತಗಳು ರಾಘವೇಂದ್ರ ಅವರಿಗೆ ಬೀಳುತ್ತದೆ’ ಎಂದು ವಿಶ್ವಾಸದಿಂದ ನುಡಿದರು.
ಹಾಸನ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ‘ಕಾಂಗ್ರೆಸ್ ನೂರಕ್ಕೆ ನೂರು ಗೆಲ್ಲಲ್ಲ, ಕಾಂಗ್ರೆಸ್ ಗೆದ್ದರೆ ಪಂಚಾಯಿತಿಯಿಂದ ದೆಹಲಿವರೆಗೂ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗ್ತಾರೆ, ನಾಲ್ಕು ಬಾರಿ ರಾತ್ರಿ ಎಣ್ಣೆಯ ಬೆಲೆ ಏರಿಸಿದ್ದಾರೆ, ಗಂಡಂದಿರ ಹತ್ತಿರ ಕಿತ್ತುಕೊಂಡು, ಆ ದುಡ್ಡನ್ನೇ ಹೆಣ್ಣು ಮಕ್ಕಳಿಗೆ ಎರಡು ಸಾವಿರ ರು. ಕೊಡ್ತಿದ್ದಾರೆ. ಇದು ದೇಶದ ಚುನಾವಣೆ, ವೈಯಕ್ತಿ ಚುನಾವಣೆಯಲ್ಲ, ದೇಶ ಉಳಿಯಬೇಕು’ ಎಂದು ಹೇಳಿದರು.ಶಾಸಕರಾದ ಎ.ಮಂಜು, ಸಿಮೆಂಟ್ ಮುಂಜು, ಎಚ್.ಡಿ.ರೇವಣ್ಣ ಮತ್ತು ಬಿಜೆಪಿ ಮುಖಂಡ ಯೋಗ ರಮೇಶ್ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಬಿ.ವೈ.ವಿಜಯೇಂದ್ರ ಅವರು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಭವಾನಿ ರೇವಣ್ಣ, ಪುರಸಭೆ ಮಾಜಿ ಅಧ್ಯಕ್ಷೆ ಜ್ಯೋತಿ ಹಾಗೂ ವೀಣಾ, ಪುರಸಭಾ ಸದಸ್ಯರು ಇದ್ದರು.ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ, ಮಾಜಿ ಶಾಸಕ ಕೆ.ಬಿ.ಮಲ್ಲಪ್ಪನವರ ಪುತ್ರ ಸತೀಶ್, ಮುಖಂಡರಾದ ಪುಟ್ಟಸೋಮಪ್ಪ, ಚೌಡೇಗೌಡ, ಹೊನ್ನವಳ್ಳಿ ಸತೀಶ್, ಮುತ್ತಿಗೆ ರಾಜೇಗೌಡ, ವಕೀಲರಾದ ಮಂಜುನಾಥ್ ಹಾಗೂ ಕೆ.ಆರ್.ಸುನೀಲ್ ಕುಮಾರ್, ತಾಪಂ ಮಾಜಿ ಉಪಾಧ್ಯಕ್ಷ ಜವರೇಗೌಡ ಇದ್ದರು.
ಹೊಳೆನರಸೀಪುರದಲ್ಲಿ ತಾಲೂಕು ಜೆಡಿಎಸ್ ಪಕ್ಷದಿಂದ ಆಯೋಜನೆ ಮಾಡಿದ್ದ ಸಾರ್ವಜನಿಕ ಸಭೆಯನ್ನು ಬಿಜೆಪಿ ರಾಜ್ಯಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು.