ಸಾರಾಂಶ
ಚನ್ನಪಟ್ಟಣ: ಕಾಂಗ್ರೆಸ್ ಆಡಳಿತದ ವಿರುದ್ಧ ರಾಜ್ಯಾದ್ಯಂತ ವಿರೋಧಿ ಅಲೆ ಅಲ್ಲ ಪ್ರವಾಹವೇ ಬಂದಿದ್ದು, ಉಪಚುನಾವಣೆ ನಡೆಯುತ್ತಿರುವ ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಕೊಚ್ಚಿ ಹೋಗಲಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಒಂದು ಪಕ್ಷವಾಗಿ ಉಳಿದಿಲ್ಲ. ಹಲವು ಗುಂಪುಗಳಾಗಿ ವಿಗಂಡನೆಯಾಗಿದೆ. ಗುಂಪುಗಳ ನಾಯಕರ ಜತೆ ನಡೆದರೆ ಉಳಿಯುತ್ತಾರೆ. ಇಲ್ಲದಿದ್ದರೆ ಇಲ್ಲ. ಸರ್ಕಾರದ ಗ್ಯಾರಂಟಿಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಕಳೆದ ನಾಲ್ಕೈದು ತಿಂಗಳಿನಿಂದ ಯಾವ ಯೋಜನೆಯೂ ಸರಿಯಾಗಿ ಜನರಿಗೆ ತಲುಪುತ್ತಿಲ್ಲ. ಯುವನಿಧಿ ಯಾರಿಗೆ ಬಂದಿದೆ ಗೊತ್ತಿಲ್ಲ. ಶಕ್ತಿ ಯೋಜನೆ ನಿಲ್ಲಿಸಲು ಹುನ್ನಾರ ನಡೆದಿದೆ. ಆದರೆ, ಮಹಾರಾಷ್ಟ್ರ, ಹರಿಯಾಣ ಜತೆಗೆ ಉಪಚುನಾವಣೆಗಳು ನಡೆಯುತ್ತಿರುವುದರಿಂದ ಗೊಂದಲ ಮೂಡಿಸಬೇಡಿ ಸುಮ್ಮನಿರಿ ಎಂದು ಕಾಂಗ್ರೆಸ್ ದೆಹಲಿ ನಾಯಕರು ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಸರ್ಕಾರಕ್ಕೆ ದಲಿತ ಸಮುದಾಯದ ಕುರಿತು ಕಾಳಜಿ ಇಲ್ಲ ಎಂದು ಕಿಡಿಕಾರಿದರು.ಈ ವೇಳೆ ಸಂದರ್ಭದಲ್ಲಿ ಆರ್‌ಪಿಐ ರಾಷ್ಟ್ರೀಯ ಕಾರ್ಯಾಧ್ಯಕ್ಷ ವೆಂಕಟಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ವೆಂಕಟರಮಣ, ಕೋದಂಡರಾಮ ಇತರರಿದ್ದರು.
ಬಾಕ್ಸ್......ಷರತ್ತಿನ ಮೇಲೆ ಕಾಂಗ್ರೆಸ್ ಸೇರ್ಪಡೆ
ಯೋಗೇಶ್ವರ್ ತಾವು ಚುನಾವಣೆಯಲ್ಲಿ ಸೋತಲ್ಲಿ ಕಾಂಗ್ರೆಸ್‌ನಿಂದ ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಸಚಿವ ಸ್ಥಾನ ನೀಡಬೇಕು ಎಂದು ಷರತ್ತು ಹಾಕಿ ಕಾಂಗ್ರೆಸ್‌ಗೆ ಹೋಗಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.ಈ ಚುನಾವಣೆಯಲ್ಲಿ ಸೋತರು ಗೆದ್ದರೂ ಸಿಪಿವೈಗೆ ಯಾವುದೇ ನಷ್ಟವಿಲ್ಲ. ಏಕೆಂದರೆ ಅವರು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸೋತಲ್ಲಿ ತಮಗೆ ಮತ್ತೆ ಕಾಂಗ್ರೆಸ್‌ನಿಂದ ಎಂಎಲ್‌ಸಿ ಸ್ಥಾನ ನೀಡಬೇಕು ಎಂಬ ಷರತ್ತು ವಿಧಿಸಿಯೇ ಹೋಗಿದ್ದಾರೆ ಎಂದರು. ಬಿಜೆಪಿಯಿಂದ ಅವರಿಗೆ ಬಿ ಫಾರಂ ನೀಡಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಬಂಡವಾಳ ಇಲ್ಲದ ಕಾರಣ ಅವರು ಕಾಂಗ್ರೆಸ್‌ಗೆ ಹಾರಿದ್ದಾರೆ. ಕಾಂಗ್ರೆಸ್ ಅವರ ಪೂರ್ತಿ ಚುನಾವಣೆಯನ್ನು ನೋಡಿಕೊಳ್ಳಲಿದೆ ಎಂದರು. ಪೊಟೋ೫ಸಿಪಿಟಿ೫: ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿದರು.