ಸಾರಾಂಶ
ಹೊಸಪೇಟೆ: ಈ ಬಾರಿ ಕಾಂಗ್ರೆಸ್ ಗೆದ್ದರೆ ನಿಜವಾದ ರಾಮ ರಾಜ್ಯ ನಿರ್ಮಾಣವಾಗುತ್ತದೆ. ದೇಶವನ್ನು ಕೆಟ್ಟ ಸ್ಥಿತಿಗೆ ಒಯ್ದಿರುವ ಕೋಮುವಾದಿ ಬಿಜೆಪಿಯನ್ನು ಸೋಲಿಸಬೇಕು ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.
ವಿಜಯನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಗರದ ಸಾಯಿಲೀಲಾ ರಂಗಮಂದಿರದಲ್ಲಿ ಬುಧವಾರ ನಡೆದ ವಿಜಯನಗರ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಳ್ಳಾರಿ-ವಿಜಯನಗರ ಜಿಲ್ಲೆಗಳಲ್ಲಿ ಯಾರು ಹೆಚ್ಚು ಲೀಡ್ ಕೊಡುತ್ತಾರೆ ಅಂತ ಪೈಪೋಟಿ ಏರ್ಪಟ್ಟಿದೆ. ನನ್ನ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಮಧ್ಯೆ ಸಹೋದರರ ಸವಾಲ್ ಬಿದ್ದಿದೆ. ನಾವಿಬ್ಬರು ಸಣ್ಣ ಬುಲೆಟ್‌ಗಳಂತೆ ಇದ್ದರೂ ಸಾಮಾನ್ಯವಲ್ಲ. ನಮ್ಮ ಜೊತೆ ದೊಡ್ಡವರಿದ್ದಾರೆ. ಈ ಬಾರಿ ಒಂದಾಗಿ ಬಳ್ಳಾರಿಯಲ್ಲಿ ಕಾಂಗ್ರೆಸ್ ೨.೫ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದೆ ಎಂದರು.ಈ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರ ಗೆಲುವು ಶತಸಿದ್ಧ. ಧರ್ಮದ ಪರವಾಗಿರುವ ಪಾಂಡವರಾದ ಕಾಂಗ್ರೆಸ್‌ನವರಾದ ನಾವು ಕೌರವರಾದ ಬಿಜೆಪಿಯನ್ನು ಸೋಲಿಸಿ, ಗೆಲುವು ಸಾಧಿಸುತ್ತೇವೆ. ಸೂರ್ಯ ಚಂದ್ರ ಉದಯಿಸುವುದು ಎಷ್ಟು ಸತ್ಯವೋ ಕಾಂಗ್ರೆಸ್ ಗೆಲುವು ಕೂಡ ಅಷ್ಟೇ ಸತ್ಯ ಎಂದರು.
ಜಮೀರ್ ಅಹಮದ್ ಖಾನ್ ಮಾಯ, ಮಂತ್ರ ಏನೋ ಮಾಡಿ ಗೆಲ್ಲಿಸುತ್ತಾರೆ. ಕೇಂದ್ರ ಸರ್ಕಾರ ಬಂದರೆ ನಮ್ಮ ಡಬಲ್ ಎಂಜಿನ್ ಸರ್ಕಾರ ಯಾವ ರೀತಿ ಅಭಿವೃದ್ಧಿ ಮಾಡಲಿದೆ ನೋಡುತ್ತೀರಿ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇದ್ದರೆ ಬದಿಗೊತ್ತಿ, ಬಡವರ ಪರ ಇರುವ ಪಕ್ಷದ ಗೆಲುವಿಗಾಗಿ ನಮ್ಮಲ್ಲಿನ ವ್ಯತ್ಯಾಸವನ್ನು ಬದಿಗಿಟ್ಟು ಕೆಲಸ ಮಾಡಬೇಕು ಎಂದರು.ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಮಾತನಾಡಿ, ಸರ್ವ ಜನಾಂಗದ ಶಾಂತಿಯ ತೋಟದಂತೆ ಸಮೃದ್ಧ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕು. ದೇಶದ ಇತಿಹಾಸ ಗೊತ್ತಿಲ್ಲದ ಅಸಮರ್ಥ ಬಿಜೆಪಿಯನ್ನು ಮನೆಗೆ ಕಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ, ಕೂಡ್ಲಿಗಿ ಭಾಗದ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾದರು.ವೇದಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಮ ಮಾತನಾಡುತ್ತಿದ್ದ ವೇಳೆ ಸಚಿವರಾದ ಜಮೀರ್ ಅಹಮದ್ ಖಾನ್, ನಾಗೇಂದ್ರ ಮತ್ತು ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ ಪಕ್ಷದಲ್ಲಿನ ಒಳಜಗಳದ ಬಗ್ಗೆ ಗುಸುಗುಸು ಚರ್ಚೆ ನಡೆಸುತ್ತಿದ್ದರು.
ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ, ಶಾಸಕರಾದ ಎಚ್.ಆರ್.ಗವಿಯಪ್ಪ, ಡಾ.ಎನ್.ಟಿ.ಶ್ರೀನಿವಾಸ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಂಯುಕ್ತಾರಾಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿರಾಜ್ ಶೇಖ್, ಮಾಜಿ ಎಂಎಲ್ಸಿ ಕೆ.ಎಸ್.ಎಲ್.ಸ್ವಾಮಿ, ಬಳ್ಳಾರಿ ನಗರ ಸಮಿತಿ ಅಧ್ಯಕ್ಷ ರಫೀಕ್, ಗ್ರಾಮೀಣ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಕುರಿ ಶಿವಮೂರ್ತಿ, ಮುಖಂಡರಾದ ಗುಜ್ಜಲ ನಾಗರಾಜ, ಸಿ. ಖಾಜಾ ಹುಸೇನ್, ವಿನಾಯಕ್ ಶೆಟ್ಟರ್, ನಿಂಬಗಲ್ ರಾಮಕೃಷ್ಣ, ಮುರಳಿಕೃಷ್ಣ, ವಿದ್ಯಾ, ಸಂಗೀತಾ ಸಿಂಗ್, ವಿಜಯಕುಮಾರ, ಕೆ.ಎಂ. ಹಾಲಪ್ಪ, ಪಿ.ಎಚ್. ದೊಡ್ಡ ರಾಮಣ್ಣ, ಡಿ. ವೆಂಕಟರಮಣ, ಕೆ. ರಘುಕುಮಾರ, ಮಹೇಶ್ ಕುಮಾರ ಮತ್ತಿತರರಿದ್ದರು.