ರಾಜ್ಯದಲ್ಲಿ ಕಾಂಗ್ರೆಸ್‌ಗೆ 22 ಸ್ಥಾನಗಳಲ್ಲಿ ಗೆಲುವು: ದೇಶಪಾಂಡೆ ವಿಶ್ವಾಸ

| Published : Mar 25 2024, 12:50 AM IST

ರಾಜ್ಯದಲ್ಲಿ ಕಾಂಗ್ರೆಸ್‌ಗೆ 22 ಸ್ಥಾನಗಳಲ್ಲಿ ಗೆಲುವು: ದೇಶಪಾಂಡೆ ವಿಶ್ವಾಸ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಬಲ ನಾಯಕತ್ವದಲ್ಲಿ ರಾಜ್ಯ ಸರ್ಕಾರವು ಅತ್ಯುತ್ತಮವಾದ ಜನಪರ ಆಡಳಿತವನ್ನು ನಡೆಸುತ್ತಿದೆ.

ಹಳಿಯಾಳ: ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 22 ಸ್ಥಾನಗಳನ್ನು ಗೆಲ್ಲಲಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪರ ವಾತಾವರಣವಿದೆ. ನಾವು ಬಿಜೆಪಿಗರಂತೆ ಸುಳ್ಳು ಘೋಷಣೆ ಮಾಡುವುದಿಲ್ಲ. ಭಾವನಾತ್ಮಕವಾಗಿ ಕೆರಳಿಸುವುದಿಲ್ಲ. ಬಿಜೆಪಿ ನೀಡಿರುವ ಘೋಷಣೆಗಳಲ್ಲಿ ಅನುಷ್ಠಾನಕ್ಕೆ ತಂದಿದಾದರೂ ಏನೂ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ಗೆ ಅತಿ ಹೆಚ್ಚು ಸ್ಥಾನ: ಕಾಂಗ್ರೆಸ್ ನುಡಿದಂತೆ ನಡೆದಿದೆ. ಅಧಿಕಾರಕ್ಕೇರಿದ ನಂತರ ಘೋಷಿಸಿದ ಎಲ್ಲ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ನಮ್ಮ ಪಂಚ ಗ್ಯಾರಂಟಿ ಯೋಜನೆಗಳು ಎಲ್ಲ ಧರ್ಮ, ಎಲ್ಲ ಜಾತಿ, ಎಲ್ಲ ವರ್ಗದವರಿಗೆ ಸೇರಿವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಬಲ ನಾಯಕತ್ವದಲ್ಲಿ ರಾಜ್ಯ ಸರ್ಕಾರವು ಅತ್ಯುತ್ತಮವಾದ ಜನಪರ ಆಡಳಿತವನ್ನು ನಡೆಸುತ್ತಿದೆ. ಡಿ.ಕೆ .ಶಿವಕುಮಾರ ಅವರ ಸಮರ್ಥ ಮುಂದಾಳತ್ವದಲ್ಲಿ ಕಾಂಗ್ರೆಸ್ ಬಲಿಷ್ಠವಾಗುತ್ತಿದೆ ಎಂದರು.

ಅಂಜಲಿ ಆಯ್ಕೆ ನಿಶ್ಚಿತ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ದಿಂದ ಖಾನಾಪುರ ಕ್ಷೇತ್ರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಸ್ಪರ್ಧಿಸಲಿದ್ದಾರೆ. ಅವರು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಎರಡನೇ ಮಹಿಳಾ ಅಭ್ಯರ್ಥಿ ಆಗಿದ್ದಾರೆ ಎಂದರು.

ರಾಜಕೀಯ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಹೊಂದಿರುವ ನಿಂಬಾಳ್ಕರ್ ಅವರು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಮರ್ಥವಾಗಿ ಧ್ವನಿಯೆತ್ತಲಿದ್ದು, ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕ್ಷೇತ್ರದ ಸಮಸ್ಯೆಗಳು, ಬೇಕು ಬೇಡಗಳಿಗೆ ಸ್ಪಂದಿಸಲಿದ್ದಾರೆ. ಉತ್ತರ ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ವಾತಾವರಣವಿದೆ. ಡಾ. ಅಂಜಲಿ ನಿಂಬಾಳ್ಕರ್ ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆ: ಮಾ. 25ರಂದು ಶಿರಸಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ ಅವರು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಹಾಗೂ ಲೋಕಸಭಾ ಚುನಾವಣಾ ತಯಾರಿ ಸಭೆಯನ್ನು ಕರೆದಿದ್ದಾರೆ. ಈ ಸಭೆಯಲ್ಲಿ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಮಯೂರ ಜಯಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹಾಗೂ ಎಲ್ಲ ಶಾಸಕರು, ಜಿಲ್ಲಾ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ನಾನು ಸಹ ಪಾಲ್ಗೊಳ್ಳಲಿದ್ದೇನೆ ಎಂದರು.