ಸಾರಾಂಶ
ಕಾಂಗ್ರೆಸ್ ಕಚೇರಿ ಮುಂದೆ ಪಟಾಕಿ ಸಿಡಿಸಿ ಕೈ ಮುಖಂಡರು, ಕಾರ್ಯಕರ್ತರು ಸಂತಸ । ರಾಜ್ಯ ಕಾಂಗ್ರೆಸ್ ಸರ್ಕಾರದ ಪರ ಘೋಷಣೆ
ಕನ್ನಡಪ್ರಭ ವಾರ್ತೆ ಯಳಂದೂರುಕಾಂಗ್ರೆಸ್ ಪಕ್ಷ ರಾಜ್ಯದ ಮೂರು ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲೂ ಜಯಗಳಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಗಾಂಧಿ ಸರ್ಕಲ್ ಬಳಿ ಇರುವ ಕಾಂಗ್ರೆಸ್ ಕಚೇರಿಯ ಮುಂಭಾಗ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕಂದಹಳ್ಳಿ ನಂಜುಂಡಸ್ವಾಮಿ ಮಾತನಾಡಿ, ರಾಜ್ಯದ ಚೆನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. ಇದಕ್ಕೆ ರಾಜ್ಯದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು, ಜನಪರ ಆಡಳಿತ ಡಿ.ಕೆ.ಶಿವಕುಮಾರ್ ಅವರ ಚಾಣಾಕ್ಷತನ ಈ ಗೆಲುವಿಗೆ ಕಾರಣವಾಗಿದೆ ಎಂದು ಹೇಳಿದರು.ಇದರೊಂದಿಗೆ ಪ್ರತಿಷ್ಠೆಯ ಕಣವಾಗಿದ್ದ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ಸಚಿವರು, ಸ್ಥಳೀಯ ಶಾಸಕರು, ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿರವರೂ ಕೂಡ ಅನೇಕ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮತಯಾಚನೆ ಮಾಡಿದ್ದರು. ಈಗ ಫಲಿತಾಂಶ ಹೊರಬಂದಿದ್ದು ೨೫ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ಸಿ.ಪಿ.ಯೋಗೇಶ್ವರ್ ಜಯಗಳಿಸಿದ್ದಾರೆ. ರಾಜ್ಯದ ಮತದಾರರು ಪ್ರಬುದ್ಧರಾಗಿದ್ದಾರೆ. ಅವರು ಜನಪರ ಆಡಳಿತವನ್ನು ಮೆಚ್ಚಿ ಮತದಾನ ಮಾಡಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಅನ್ನಪೂರ್ಣ ತುಕರಾಂ ಹಾಗೂ ಶಿಗ್ಗಾಂವಿ ಕ್ಷೇತ್ರದಲ್ಲೂ ನಮ್ಮ ಪಕ್ಷದ ಯಾಸೀರ್ ಪಠಾಣ್ ಅಹಮ್ಮದ್ ಖಾನ್ ಜಯಗಳಿಸಿದ್ದಾರೆ. ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಮುಖಂಡರಾದ ವೈ.ಕೆ.ಮೋಳೆ ದೊಡ್ಡಯ್ಯ, ಗುಂಬಳ್ಳಿ ರಾಜಣ್ಣ, ಮಲ್ಲು, ವಿಶ್ವ, ಮಾದೇಶ್, ರಂಗರಾಮು, ರೇವಣ್ಣ, ನಾರಾಯಣ, ಮಹದೇವಸ್ವಾಮಿ, ಗೋವಿಂದರಾಜು, ಜಾನಿ, ರಾಚಶೆಟ್ಟಿ, ಸೋಮಣ್ಣ, ಮಹೇಶ ಸೇರಿ ಅನೇಕರು ಇದ್ದರು.