ನಾಪೋಕ್ಲು: ಬಿರುಸಿನ ಮಳೆಯಿಂದಾಗಿ ನಾಪೋಕ್ಲು ಕಂದಾಯ ವ್ಯಾಪ್ತಿಯ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿ, ತೊರೆಗಳು ಉಕ್ಕಿ ಹರಿಯುತ್ತಿದ್ದು ತಗ್ಗು ಪ್ರದೇಶದ ಬಹುತೇಕ ರಸ್ತೆಗಳು, ಗದ್ದೆ ತೋಟಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ.

ಸಮೀಪದ ಬಲಮುರಿಯ ಕಿರು ಸೇತುವೆ, ಪೆರಿಯಪರಂಬು-ಕಲ್ಲು ಮೊಟ್ಟೆ ರಸ್ತೆ ಮುಳುಗಡೆಯಾಗಿದೆ. ನಾಪೋಕ್ಳು-ಮೂರ್ನಾಡು ಸಂಪರ್ಕ ರಸ್ತೆಯ ಹುದ್ದೂರು ಗ್ರಾಪಂನ ಬೊಲಿಬಾಣೆ ಬಳಿ ರಸ್ತೆ ಪ್ರವಾಹದಿಂದ ಮುಳುಗಡೆಯಾಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಪೊಲೀಸರು ಎಚ್ಚರಿಕೆ ಫಲಕ ಅಳವಡಿಸಿದ್ದಾರೆ.

ನಾಪೋಕ್ಲು-ಮಡಿಕೇರಿ ಮುಖ್ಯ ಸಂಪರ್ಕ ರಸ್ತೆಯ ಕೊಟ್ಟಮುಡಿಯಲ್ಲಿ ಪ್ರವಾಹ ಹೆಚ್ಚುತ್ತಿದೆ.