ಸಾರಾಂಶ
ಔರಾದ್: ಸರ್ಕಾರಿ ನೌಕರರ ಸಂಘದ ಔರಾದ್ ಮತ್ತು ಕಮಲನಗರ ಎರಡು ತಾಲೂಕಿನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇಲ್ಲದೆ ಒಮ್ಮತದಿಂದ ಪದಾಧಿಕಾರಿಗಳು ಆಯ್ಕೆ ಮಾಡಿರುವುದು ವಿಧಾನಸಭೆ ಕ್ಷೇತ್ರದ ಸೌಭಾಗ್ಯ ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು.ತಾಲೂಕಿನ ಬೊಂತಿ ತಾಂಡದಲ್ಲಿ ಆಯೋಜಿಸಲಾದ ಕಮಲನಗರ ಹಾಗೂ ಔರಾದ್ ತಾಲೂಕಿನ ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರು ಸಂಘದ ಚುನಾವಣೆಯಲ್ಲಿ ಎರಡು ಗುಂಪುಗಳಾಗಿ ದ್ವೇಷ ಭಾವನೆ ಹೆಚ್ಚಾಗಿ ಅಧಿಕಾರಿಗಳಲ್ಲಿ ಒಮ್ಮತ ಕಾಣ್ತಿರಲಿಲ್ಲ. ಈ ಬಾರಿ ಎರಡು ತಾಲೂಕಿನ ಅಧಿಕಾರಿಗಳು ಒಮ್ಮತ ತೋರಿಸಿ ಅವಿರೋಧ ಆಯ್ಕೆಯಾಗಿರುವುದು ಕ್ಷೇತ್ರದಲ್ಲಿ ಮತ್ತಷ್ಟು ಚುರುಕಿನಿಂದ ಅಭಿವೃದ್ಧಿ ಮಾಡಲು ಸಾಧ್ಯವಾಗಲಿದೆ ಎಂದರು.ಅಧಿಕಾರಿಗಳಲ್ಲಿ ಒಮ್ಮತ ಮೂಡಿಸಿದ ಎಲ್ಲಾ ಪದಾಧಿಕಾರಿಗಳ ಪಾತ್ರವೂ ಮುಖ್ಯವಾಗಿದ್ದು, ವಿಶೇಷವಾಗಿ ಔರಾದ್ ತಾಲೂಕಿನ ನಿಕಟ ಪೂರ್ವ ಅಧ್ಯಕ್ಷರಾದ ಶಿವಕುಮಾರ್ ಘಾಟೆ ಅವರು ನಾಮಪತ್ರ ವಾಪಸ್ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಇದೇ ರೀತಿ ಸಂಘ ಸಂಸ್ಥೆಗಳ ಚುನಾವಣೆಗಳು ನಡೆಯಬೇಕು ಎಂದು ಸಲಹೆ ನೀಡಿದರು.ಇದೇ ವೇಳೆ ಔರಾದ್ ತಾಲೂಕಿನ ನೂತನ ಅಧ್ಯಕ್ಷ ಪಂಢರಿ ಅಡೆ, ಖಜಾಂಚಿ ಅಬ್ದುಲ್ ಖಲೀಲ್, ರಾಜ್ಯ ಪರಿಷತ್ ಸದಸ್ಯ ಸಂದೀಪ, ಕಮಲನಗರ ತಾಲೂಕಿನ ಅಧ್ಯಕ್ಷ ಸುನೀಲ್ ಕಸ್ತೂರೆ, ಖಜಾಂಚಿ ವಿದ್ಯಾಸಾಗರ ಹಾಗೂ ರಾಜ್ಯ ಪರಿಷತ್ ಸದಸ್ಯ ಚಂದ್ರಕಾಂತ ಚಾಂಡೆಸೂರೆ ಅವರನ್ನು ಶಾಸಕರು ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ಶಿವಾಜಿ ರಾವ್ ಪಾಟೀಲ್ ಮುಂಗನಾಳ, ಚಂದ್ರಕಾಂತ ನಿರ್ಮಳೆ, ಶಿವಕುಮಾರ್ ಘಾಟೆ, ಸಂಗಮೇಶ ಕುಡಲೆ, ವಿಠ್ಠಲ್ ಘಾಟೆ, ಸಂಗಮೇಶ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.