ಸಾರಾಂಶ
ದಾಂಡೇಲಿ: ಭೂಮಿಗೆ ಕಾಡು ಭೂಷಣ, ಕಾಡಿಗೆ ವನ್ಯ ಜೀವಿ, ಸಸ್ಯ ಸಂಕುಲವೇ ಭೂಷಣ. ಇಂತಹ ವನ, ವನ್ಯ ಸಂಪತ್ತನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.ನಗರದಲ್ಲಿ ಬುಧವಾರ ನಡೆದ ೭೦ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ, ಮನುಷ್ಯನಿಗೆ ಆಸೆ ಇರಬೇಕು, ಆದರೆ ದುರಾಸೆ ಇರಬಾರದು. ಮಾನವನ ಬದುಕಿಗೆ ಆಧಾರವಾಗಿರುವ ಅರಣ್ಯ ನಾಶ, ಒತ್ತುವರಿ ಮಾಡಬಾರದು ಎಂದರು.
ಇಡೀ ದೇಶದ ಹವಾಮಾನದ ಮೇಲೆ ಪರಿಣಾಮ ಬೀರಿ, ಮಳೆ ಉತ್ತಮವಾಗಿ ಬೀಳಲು ಪಶ್ಚಿಮ ಘಟ್ಟಗಳನ್ನು ಎಲ್ಲರೂ ಜತನವಾಗಿ ಕಾಪಾಡಿ ಮುಂದಿನ ಪೀಳಿಗೆಗೆ ನೀಡಬೇಕು. ತಾವು ದಾಂಡೇಲಿ ಸಮೀಪದ ಕೆಳಾಪಾನಿ ಪ್ರದೇಶಕ್ಕೆ ಭೇಟಿ ನೀಡಿದಾಗ, ಉಂಟಾದ ಆನಂದ ಅಪರಿಮಿತ. ಇದು ಅತ್ಯಂತ ರಮಣೀಯ, ಅತ್ಯದ್ಭುತ ತಾಣ. ಪ್ರವಾಸಿಗರ ಸ್ವರ್ಗ ಎಂದು ಬಣ್ಣಿಸಿದರು.೭- ೮ ದಶಕಗಳ ಹಿಂದೆ ಕೆಲವರು ವನ್ಯಜೀವಿಗಳನ್ನು ಕೊಂದು ಮೃತ ಪ್ರಾಣಿಯ ಜತೆ ಫೋಟೋ ತೆಗೆಸಿಕೊಂಡು ಮನೆಯಲ್ಲಿ ತೂಗುಹಾಕುತ್ತಿದ್ದರು. ಮೋಜಿಗಾಗಿ ಬೇಟೆ ಆಡುತ್ತಿದ್ದರು. ಆದರೆ ೧೯೭೨ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ ಜಾರಿಗೆ ತಂದ ಬಳಿಕ ಇಂತಹ ಬೇಟೆ, ಕಳ್ಳ ಬೇಟೆ ನಿಗ್ರಹವಾಗಿದೆ ಎಂದರು.
ಜಿಲ್ಲೆಯಲ್ಲಿ ಶೇ. ೮೦ರಷ್ಟು ಅರಣ್ಯವಿದೆ. ವನ, ವನ್ಯಜೀವಿಗಳ ಜತೆ ಸಹಬಾಳ್ವೆ ನಡೆಸುವುದರಲ್ಲಿ ಜಿಲ್ಲೆಯ ಜನರ ಪಾತ್ರ ಮಹತ್ವದ್ದಾಗಿದ್ದು, ಇಷ್ಟು ಬೃಹತ್ ಪ್ರಮಾಣದಲ್ಲಿ ಅರಣ್ಯ ಸಂರಕ್ಷಣೆ ಮಾಡಿರುವ ಎಲ್ಲರೂ ಅಭಿನಂದನಾರ್ಹರು ಎಂದರು.ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಹಾಕಿರುವವರ ಯಾವುದೇ ಅರ್ಜಿ ಪುನರ್ ಪರಿಶೀಲನೆಯಲ್ಲಿದ್ದರೆ ಅಂಥವರ ಒತ್ತುವರಿ ತೆರವು ಮಾಡಿಸದಂತೆ ಸೂಚಿಸಲಾಗಿದೆ. ಕಳೆದ ವಿಧಾನಮಂಡಲದ ಅಧಿವೇಶನದಲ್ಲಿ ಅರಣ್ಯ ಹಕ್ಕು ಕಾಯಿದೆ ಜಾರಿಗೆ ೨೫ ವರ್ಷಕ್ಕಿಂತ ಹಿಂದೆ ಅರಣ್ಯದಲ್ಲಿದ್ದವರಿಗೆ ಹಕ್ಕು ನೀಡಬೇಕು ಎಂದು ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಜಿಲ್ಲೆಯಲ್ಲಿ ಹತ್ತಾರು ಎಕರೆ ಒತ್ತುವರಿ ಮಾಡಿದವರು ಯಾರೂ ಇಲ್ಲ. ಜೀವಿನೋಪಾಯಕ್ಕೆ ೧ ಎಕರೆ ಅರಣ್ಯ ಜಮೀನು ಒತ್ತುವರಿ ಮಾಡಿದ ಬಡವರಿದ್ದಾರೆ. ಅವರ ಜೀವನೋಪಾಯಕ್ಕೆ ತೊಂದರೆ ನೀಡದಂತೆ ಕ್ರಮವಹಿಸಬೇಕು ಎಂದರು.ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಿದ ಸರ್ಕಾರಕ್ಕೆ ಮತ್ತು ಅರಣ್ಯ ಸಚಿವರಿಗೆ ಧನ್ಯವಾದ ಅರ್ಪಿಸಿದ ಅವರು, ನಮ್ಮ ಭಾಗದಲ್ಲಿ ಶೇ. ೮೦ರಷ್ಟು ಅರಣ್ಯ ಪ್ರದೇಶವಿದ್ದು, ನಮ್ಮ ಜನರೇ ಇದನ್ನು ಸಂರಕ್ಷಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ-ಕಾಲೇಜು ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದಕ್ಕೂ ಮುನ್ನ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅನುಮೋದಿತ ಕಾರ್ಯಯೋಜನೆಯ ಪ್ರಕಾರ ಅರಣ್ಯ ಪ್ರದೇಶಗಳಲ್ಲಿ ಬಿದ್ದ ಮರವನ್ನು ಹೊರತೆಗೆಯುವ ಪ್ರಾತ್ಯಕ್ಷಿಕೆ ವೀಕ್ಷಿಸಿದರು. ಬಳಿಕ ದಾಂಡೇಲಿಯ ಸರ್ಕಾರಿ ಟಿಂಬರ್ ಡಿಪೋದಲ್ಲಿ ನಾಟಾ ಸಂಗ್ರಹ ಮತ್ತು ಇ- ಹರಾಜು ಪ್ರಕ್ರಿಯೆಯನ್ನು ಪರಿಶೀಲಿಸಿದರು.ಅರಣ್ಯ ಇಲಾಖೆಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕರಿ ಕುಮಾರ ಪುಷ್ಕರ, ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ವಸಂತ ರೆಡ್ಡಿ, ಕಾಳಿ ಹುಲಿ ಸಂರಕ್ಷಿತ ಪ್ರದೇಶ ದಾಂಡೇಲಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿಂದೆ ನಿಲೇಶ ದೆವಬಾ, ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕುಮಾರ ಕೆ.ಸಿ. ಇಲಾಖೆಯ ಎಸಿಎಫ್, ಆರ್‌ಎಫ್‌ಒಗಳು, ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.