ಸಾರಾಂಶ
ಗಜೇಂದ್ರಗಡ: ಪಟ್ಟಣದಲ್ಲಿ ನಡೆಯುತ್ತಿರುವ ಅಮೃತ್-೨ ಯೋಜನೆ ನಿಲ್ಲಿಸಿ ಎಂದು ಶಾಸಕ ಜಿ.ಎಸ್. ಪಾಟೀಲ ಸೂಚನೆ ಲೆಕ್ಕಿಸಿದೆ ಗುತ್ತಿಗೆದಾರರು ಕೆಲಸ ನಡೆಸುತ್ತಾರೆ ಎಂದರೆ ಹೇಗೆ ಎಂದು ಪುರಸಭೆ ಸದಸ್ಯ ಮುರ್ತುಜಾ ಡಾಲಾಯತ ಅಧಿಕಾರಿಗಳಿಗೆ ತರಾಟೆಗೆ ತಗೆದುಕೊಂಡರು.
ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಬುಧವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಚೇರಮನ್ ಆಯ್ಕೆ ಹಾಗೂ ಒಳ ಚರಂಡಿ ಕಾಮಗಾರಿ ಕುರಿತ ಚರ್ಚೆ ವೇಳೆ ಕನ್ನಡಪ್ರಭ ವರದಿ ಪ್ರಸ್ತಾಪಿಸಿ ಮಾತನಾಡಿದರು.ಪಟ್ಟಣದಲ್ಲಿ ನಡೆಯುತ್ತಿರುವ ಕಾಮಗಾರಿ ವೈಜ್ಞಾನಿಕ ಮಾದರಿಯಲ್ಲಿ ನಡೆಯುತ್ತಿಲ್ಲ ಎನ್ನುವ ಆರೋಪ ಹಾಗೂ ಆಯಾ ವಾರ್ಡಿನಲ್ಲಿ ಕಾಮಗಾರಿಯ ಬಗ್ಗೆ ಸದಸ್ಯರ ಗಮನಕ್ಕೆ ಬರಬೇಕು ಎನ್ನುವ ಉದ್ಧೇಶದಿಂದ ಶಾಸಕ ಜಿ.ಎಸ್. ಪಾಟೀಲ ಪುರಸಭೆ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಅಮೃತ್-೨ ಯೋಜನೆಯ ಗುತ್ತಿಗೆದಾರರು ಪುರಸಭೆಯ ಸಭೆಗೆ ಆಗಮಿಸಿ ಕಾಮಗಾರಿಯ ಸಮಗ್ರ ಮಾಹಿತಿ ನೀಡುವವರೆಗೆ ಕಾಮಗಾರಿ ನಿಲ್ಲಿಸಿ ಎಂದಿದ್ದರು. ಏಕೆಂದರೆ ಕಾಮಗಾರಿ ಸುದೀರ್ಘ ಕಾಲ ಬಾಳಿಕೆ ಬರಬೇಕಿದೆ ಎನ್ನುವ ಉದ್ಧೇಶ ಸೂಚನೆಯ ಹಿಂದಿದೆ ಹೊರತು ಬೇರೆನಿಲ್ಲ. ಆದರೆ ಗುತ್ತಿಗೆದಾರರು ಶಾಸಕರ ಸೂಚನೆ ಕಡೆಗಣಿಸಿ ಕೆಲಸ ಮಾಡುತ್ತಾರೆ ಎಂದರೆ ಪುರಸಭೆ ಅಧಿಕಾರಿಗಳು ನೀವು ಮೇಲುಸ್ತುವಾರಿ ನಡೆಸುತ್ತಿಲ್ಲವೇ ಎಂದು ಹರಿಹಾಯ್ದರು.
ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಪುರಸಭೆ ಸಿಬ್ಬಂದಿ ಪಿ.ಎನ್. ದೊಡ್ಡಮನಿ, ಪಟ್ಟಣದ ೧೧-೧೨ನೇ ವಾರ್ಡಿನಲ್ಲಿ ನಡೆಯುತ್ತಿರುವ ಅಮೃತ್-೨ ಯೋಜನೆ ಕಾಮಗಾರಿ ಬಗ್ಗೆ ಪರಿಶೀಲಿಸಿ ನಿಲ್ಲಿಸುವಂತೆ ಮುಖ್ಯಾಧಿಕಾರಿಗಳು ಸೂಚಿಸಿದ ತಕ್ಷಣವೇ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಉತ್ತರ ನೀಡಿದರು. ಅವರಿಗೆ ಕೆಲಸ ಮಾಡಬೇಡಿ ಎಂದು ಸೂಚನೆ ಇದ್ದರೂ ನಡೆಸುತ್ತಾರೆ ಎಂದರೆ ನೀವು ಏನು ಪುರಸಭೆ ಅಧ್ಯಕ್ಷರು, ಸದಸ್ಯರ ಮಾತಿಗೆ ಗೌರವವಿಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿ ಮುಂದೆ ಹೀಗಾಗಬಾರದು ಎಂದರು.ಪಟ್ಟಣದಲ್ಲಿ ಒಳಚರಂಡಿ ಯೋಜನೆಗಾಗಿ ಜಮೀನು ಖರೀದಿ ವಿಷಯ ಪ್ರಸ್ತಾಪಿಸಿದಾಗ ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ ಒಳಚರಂಡಿ ಯೋಜನೆಗೆ ಎಲ್ಲಿ ಜಾಗ ಹಿಡಿಯಲು ಯೋಜನೆ ಹಾಕಿಕೊಂಡಿದ್ದೀರಿ. ಯೋಜನೆ ಅನುಷ್ಠಾನಕ್ಕೆ ಅನುದಾನ ಎಲ್ಲಿಂದ ಬರುತ್ತದೆ ಹಾಗೂ ಎಷ್ಟು ಎಕರೆ ಜಮೀನು ಬೇಕಾಗುತ್ತದೆ ಎನ್ನುವ ಪ್ರಶ್ನೆಗಳಿಗೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಪಟ್ಟಣದಲ್ಲಿ ೫ ಎಕರೆ ಜಮೀನು ಖರೀದಿಸಬೇಕಿದೆ. ಯೋಜನೆ ಅನುಷ್ಠಾನಕ್ಕೆ ಅಂದಾಜು ₹ ೬ ಕೋಟಿ ೪೨ ಲಕ್ಷ ಅನುದಾನ ಬರಲಿದ್ದು ಪಟ್ಟಣದಲ್ಲಿ ಜಮೀನು ಹುಡುಕಾಟ ನಡೆಸಲಾಗುತ್ತದೆ ಎಂದಾಗ ಒಂದು ಎಕರೆ ಜಮೀನಿಗೆ ಎಸ್ಸಾರ್ ವಾಲಿವೇಷನ್ ಎಷ್ಟಿದಿದೆ ಎಂದು ಜಮೀನು ಕೊಡುವವರು ಕೇಳುತ್ತಾರೆ. ಪಟ್ಟಣದಲ್ಲಿ ಒಂದು ಪ್ಲಾಟ್‌ಗೆ ₹೨೦ ಲಕ್ಷವಿದೆ. ಹೀಗಾಗಿ ಮೊದಲು ಅದನ್ನು ಸ್ಪಷ್ಟಪಡಿಸಿ ಇಲ್ಲದಿದ್ದರೆ ಸಭೆಗೆ ಯೋಜನೆ ಸಿಮೀತವಾಗಲಿದೆ ಎಂದಾಗ ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಧಿಕಾರಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಉಪಾಧ್ಯಕ್ಷ ಸವಿತಾ ಬಿದರಳ್ಳಿ, ಸದಸ್ಯರಾದ ಶಿವರಾಜ ಘೋರ್ಪಡೆ, ಮುರ್ತುಜಾ ಡಾಲಾಯತ, ವೆಂಕಟೇಶ ಮುದಗಲ್, ರಾಜು ಸಾಂಗ್ಲೀಕರ, ಯು.ಆರ್. ಚನ್ನಮ್ಮನವರ, ಲಕ್ಷ್ಮೀ ಮುಧೋಳ, ದ್ರಾಕ್ಷಾಯಿಣಿ ಚೋಳಿನ, ಬಸವರಾಜ ಹೂಗಾರ, ಉಮೇಶ ರಾಠೋಡ ಸೇರಿ ಇತರರು ಇದ್ದರು.