ಸಮಾಜ, ಧರ್ಮ ವಿಷಯಗಳಲ್ಲಿ ಸಮಷ್ಠಿಪ್ರಜ್ಞೆ ಮುಖ್ಯ

| Published : Apr 01 2024, 12:52 AM IST

ಸಮಾಜ, ಧರ್ಮ ವಿಷಯಗಳಲ್ಲಿ ಸಮಷ್ಠಿಪ್ರಜ್ಞೆ ಮುಖ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜ, ಧರ್ಮದ ವಿಷಯ ಬಂದಾಗ ಎಲ್ಲರೂ ಸಮಷ್ಠಿಪ್ರಜ್ಞೆ ಮೆರೆಯಬೇಕು. ಇಲ್ಲದಿದ್ದರೆ ಮುಂದೆ ದುರಂತದ ದಿನಗಳು ಬರಲಿವೆ. ಪ್ರಸ್ತುತ ವಾತಾವರಣದಲ್ಲಿ ಪ್ರತಿಯೊಬ್ಬರೂ ಸಮಾಜ, ಧರ್ಮ ವಿಚಾರವಾಗಿ ಒಂದಾಗಬೇಕು. ಇಲ್ಲದಿದ್ದರೆ ಅಪಾಯದ ದಿನಗಳ ಎದುರಿಸಬೇಕಾಗುತ್ತದೆ. ಗುರುವಿಗೆ ನೀಡುವ ಗೌರವವನ್ನು ಲಿಂಗ ಹಾಗೂ ಪ್ರತಿ ಜಂಗಮನಿಗೂ ಕೊಡಬೇಕು. ಗುರು-ಲಿಂಗ-ಜಂಗಮರಲ್ಲಿ ಯಾವುದೇ ತಾರತಮ್ಯ ಇರಬಾರದು ಎಂದು ಉಜ್ಜಯಿನಿ ಜಗದ್ಗುರು ಪೀಠದ ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ದಾವಣಗೆರೆಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ ಸಮಾಜ, ಧರ್ಮದ ವಿಷಯ ಬಂದಾಗ ಎಲ್ಲರೂ ಸಮಷ್ಠಿಪ್ರಜ್ಞೆ ಮೆರೆಯಬೇಕು. ಇಲ್ಲದಿದ್ದರೆ ಮುಂದೆ ದುರಂತದ ದಿನಗಳು ಬರಲಿವೆ ಎಂದು ಉಜ್ಜಯಿನಿ ಜಗದ್ಗುರು ಪೀಠದ ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.

ನಗರದ ಕೆ.ಬಿ. ಬಡಾವಣೆಯ ಸಿದ್ದಮ್ಮ ಪಾರ್ಕ್ ಸಮೀಪ ಭಾನುವಾರ ಶ್ರೀ ವೀರಮಾಹೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಪ್ರಸ್ತುತ ವಾತಾವರಣದಲ್ಲಿ ಪ್ರತಿಯೊಬ್ಬರೂ ಸಮಾಜ, ಧರ್ಮ ವಿಚಾರವಾಗಿ ಒಂದಾಗಬೇಕು. ಇಲ್ಲದಿದ್ದರೆ ಅಪಾಯದ ದಿನಗಳ ಎದುರಿಸಬೇಕಾಗುತ್ತದೆ ಎಂದರು.

ಗುರುವಿಗೆ ನೀಡುವ ಗೌರವವನ್ನು ಲಿಂಗ ಹಾಗೂ ಪ್ರತಿ ಜಂಗಮನಿಗೂ ಕೊಡಬೇಕು. ಗುರು-ಲಿಂಗ-ಜಂಗಮರಲ್ಲಿ ಯಾವುದೇ ತಾರತಮ್ಯ ಇರಬಾರದು. ಹತ್ತಿಪ್ಪತ್ತು ವರ್ಷಗಳ ಹಿಂದೆ ಶ್ರಾವಣ ಮಾಸ, ಹಬ್ಬ ಹರಿದಿನದ ಸಂದರ್ಭ ಭಕ್ತರು ಜಂಗಮ ಅಥವಾ ಮಠಸ್ಥನನ್ನು ಮನೆಗೆ ಕರೆದು ಕಂಬಳಿ ಹಾಸಿ ಗೌರವಿಸಿ ಪ್ರಸಾದ ಉಣಬಡಿಸಿ, ದಕ್ಷಿಣೆ ಕೊಡುತ್ತಿದ್ದರು. ಕಾಲ ಕ್ರಮೇಣ ಈ ಸಂಸ್ಕೃತಿ, ಪರಂಪರೆ ಮರೆಯಾಗಲೂ ನಮ್ಮಲ್ಲಿರುವ ಲೋಪವೇನು ಎಂಬುದರ ಆತ್ಮಾವಲೋಕನ ಮಾಡಿಕೊಳ್ಳಬೇಕು. ವೃತ್ತಿಯಿಂದ ಎಷ್ಟೇ ಎತ್ತರಕ್ಕೂ ಬೆಳೆದರೂ ಪ್ರವೃತ್ತಿಯಿಂದ ಧರ್ಮ, ಆಚಾರ ಸಂಸ್ಕಾರ, ಜಂಗಮತ್ವವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು ಎಂದು ತಿಳಿಸಿದರು.

ಯಾರಿಗೂ ಕೇಡು ಬಯಸದವನೇ ನಿಜವಾದ ವೀರಶೈವನಾಗಿದ್ದಾನೆ. ಆದರೆ, ಇತ್ತೀಚಿನ ದಿನಗಳಲ್ಲಿ ನಮ್ಮನಮ್ಮವರೇ ಪರಸ್ಪರ ಟೀಕೆ ಮಾಡುತ್ತಿರುವುದು, ಒಬ್ಬರ ಕಾಲು ಒಬ್ಬರು ಎಳೆಯುತ್ತಿರುವುದು ದುರಂತದ ಸಂಗತಿ. ಇನ್ನೊಬ್ಬರನ್ನು ತುಳಿದು ಬೆಳೆಯುವವನು ನಾಯಕ ಆಗಲಾರ. ತನ್ನಂತೆ, ತನ್ನಷ್ಟೇ ಎತ್ತರಕ್ಕೆ ಇತರ ಹತ್ತು ಜನರನ್ನು ಬೆಳೆಸುವವನು ಮಾತ್ರ ನಿಜವಾದ ನಾಯಕ. ಜಗತ್ತಿಗೆ ಬುದ್ಧಿ ಹೇಳುವ ಜಂಗಮರ ಮತ್ತೊಬ್ಬರಲ್ಲಿ ಪಂಚಾಯಿತಿಗೆ ಹೋಗುತ್ತಿರುವುದು ವಿಪರ್ಯಾಸದ ಸಂಗತಿ ಎಂದರು.

ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ, ಸೊಸೈಟಿ ಅಧ್ಯಕ್ಷ ತ್ಯಾವಣಿಗಿ ವೀರಭದ್ರಸ್ವಾಮಿ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ ನೂತನ ಕಟ್ಟಡ ಉದ್ಘಾಟಿಸಿದರು. ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್, ಸೊಸೈಟಿ ನಿರ್ದೇಶಕರು, ಸದಸ್ಯರು, ಇತರರು ಭಾಗವಹಿಸಿದ್ದರು.

- - - -31ಕೆಡಿವಿಜಿ37ಃ:

ದಾವಣಗೆರೆಯಲ್ಲಿ ಶ್ರೀ ವೀರಮಾಹೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಉಜ್ಜಯಿನಿ ಪೀಠದ ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ನೆರವೇರಿಸಿದರು.