ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ ಯುವಕನ ಹತ್ಯೆಗೆ ಸಂಚು

| Published : Apr 03 2025, 12:32 AM IST

ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ ಯುವಕನ ಹತ್ಯೆಗೆ ಸಂಚು
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ಅಪ್ರಾಪ್ತ ಪುತ್ರಿಯನ್ನು ಪ್ರೀತಿಸುತ್ತಿದ್ದ ಯುವಕನ ಹತ್ಯೆಗೆ ಸಂಚು ರೂಪಿಸಿದ್ದ ಆಕೆಯ ತಂದೆ ಮತ್ತು ಸಹೋದರರು ಸೇರಿದಂತೆ 20 ಮಂದಿಯ ಗುಂಪು ಯುವಕನ ರಕ್ಷಣೆಗೆ ಧಾವಿಸಿದ ಸಂಬಂಧಿಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಪಟ್ಟಣದ ನಗರಕೆರೆ ರಸ್ತೆಯ ಕೆಮ್ಮಣ್ಣುನಾಲೆ ಸರ್ಕಲ್ ಬಳಿ ಮಂಗಳವಾರ ರಾತ್ರಿ ಜರುಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಮ್ಮ ಅಪ್ರಾಪ್ತ ಪುತ್ರಿಯನ್ನು ಪ್ರೀತಿಸುತ್ತಿದ್ದ ಯುವಕನ ಹತ್ಯೆಗೆ ಸಂಚು ರೂಪಿಸಿದ್ದ ಆಕೆಯ ತಂದೆ ಮತ್ತು ಸಹೋದರರು ಸೇರಿದಂತೆ 20 ಮಂದಿಯ ಗುಂಪು ಯುವಕನ ರಕ್ಷಣೆಗೆ ಧಾವಿಸಿದ ಸಂಬಂಧಿಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಪಟ್ಟಣದ ನಗರಕೆರೆ ರಸ್ತೆಯ ಕೆಮ್ಮಣ್ಣುನಾಲೆ ಸರ್ಕಲ್ ಬಳಿ ಮಂಗಳವಾರ ರಾತ್ರಿ ಜರುಗಿದೆ.

ಮಾರಕಾಸ್ತ್ರಗಳನ್ನು ಹಿಡಿದ ಯುವಕರ ಗುಂಪು ಪರಸ್ಪರ ಹೊಡೆದಾಡುತ್ತಿರುವುದನ್ನು ಕಂಡ ಸಾರ್ವಜನಿಕರು ಭಯಭೀತಗೊಂಡು ಪರಾರಿಯಾಗಿದ್ದು, ಇದರಿಂದ ಸ್ಥಳದಲ್ಲಿ ಉದ್ರಿಕ್ತ ಪರಿಸ್ಥಿತಿ ಉಂಟಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಗುಂಪು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಘಟನೆಯಲ್ಲಿ ಯುವಕನ ಸಂಬಂಧಿಗಳಾದ ಸಿದ್ಧಾರ್ಥ ನಗರದ ರಘು (38) ಮತ್ತು ಜೋಗಿ (21) ಗಂಭೀರವಾಗಿ ಗಾಯಗೊಂಡಿದ್ದು, ಮದ್ದೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲದೆ ನಿರಂಜನ್, ಶ್ರೀಧರ, ನಂದೀಶ್ ಹಾಗೂ ಅರ್ಜುನ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಘಟನೆ ಸಂಬಂಧ ಅಪ್ರಾಪ್ತೆಯ ತಂದೆ ವೀರಸ್ವಾಮಿ, ಆತನ ಮಕ್ಕಳಾದ ವಿಷ್ಣು ಮತ್ತು ನವೀನ ಸೇರಿದಂತೆ 20 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಘಟನೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದು, ಪ್ರಮುಖ ಆರೋಪಿ ವೀರಸ್ವಾಮಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಉಳಿದ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರಿದಿದೆ.ಘಟನೆಗೆ ಕಾರಣವೇನು? :

ಪ್ರಮುಖ ಆರೋಪಿ ವೀರಸ್ವಾಮಿ ಅವರ 17 ವರ್ಷದ ಅಪ್ರಾಪ್ತ ಪುತ್ರಿಯನ್ನು ಗೋಬಿ ಮಂಚೂರಿ ವ್ಯಾಪಾರ ಮಾಡುತ್ತಿದ್ದ ಯೋಗಾನಂದ ಬಹಳ ದಿನಗಳಿಂದ ಪ್ರೀತಿಸುತ್ತಿದ್ದನು. ಈ ಹಿನ್ನೆಲೆಯಲ್ಲಿ ಯೋಗಾನಂದ ಮತ್ತು ವೀರಸ್ವಾಮಿ ಕುಟುಂಬದ ನಡುವೆ ಕಳೆದ ಒಂದು ತಿಂಗಳ ಹಿಂದೆ ವಿವಾದ ಏರ್ಪಟ್ಟು ಪೊಲೀಸ್ ಠಾಣೆ ಮೆಟ್ಟಿಲೇರಿದ ನಂತರ ರಾಜೀ ಪಂಚಾಯಿತಿ ಮೂಲಕ ಬಗೆಹರಿದಿತ್ತು.

ಆದರೂ ಸಹ ಯುವಕ ಯೋಗಾನಂದ ಅಪ್ರಾಪ್ತೆಯೊಂದಿಗೆ ಸಲುಗೆಯಿಂದ ವರ್ತನೆ ಮಾಡುತ್ತಿರುವುದು ಮುಂದುವರಿದಿತ್ತು . ಇದನ್ನು ಕಂಡ ಅಪ್ರಾಪ್ತೆಯ ತಂದೆ ವೀರಸ್ವಾಮಿ, ಆತನ ಮಕ್ಕಳಾದ ವಿಷ್ಣು, ನವೀನನೊಂದಿಗೆ ಯೋಗಾನಂದನ ಕೊಲೆಗೆ ಸಂಚು ರೂಪಿಸಿದ್ದರು.

ಮಂಗಳವಾರ ರಾತ್ರಿ ಯೋಗಾನಂದನನ್ನು ಕೊಲೆ ಮಾಡಲು ಹುಡುಕಾಟ ನಡೆಸುತ್ತಿದ್ದಾಗ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಆತನ ಸಂಬಂಧಿಗಳಾದ ರಘು ಮತ್ತು ಜೋಗಿ ಎಂಬುವರ ಮೇಲೆ ವೀರಸ್ವಾಮಿ, ಆತನ ಮಕ್ಕಳು ಹಾಗೂ 20 ಮಂದಿ ಯುವಕರ ಗುಂಪು ಡ್ರ್ಯಾಗನ್, ಲಾಂಗ್ ಮತ್ತು ಬೀರ್ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ.

ಮಾರಕಾಸ್ತ್ರಗಳನ್ನು ಹಿಡಿದ ಯುವತಿಯ ಪೋಷಕರ ಮತ್ತು ಬೆಂಬಲಿಗರ ಗುಂಪು ಹಲ್ಲೆ ನಡೆಸುತ್ತಿರುವ ದೃಶ್ಯ ಕೆಮ್ಮಣ್ಣು ಕಾಲುವೆ ಸರ್ಕಲ್ ಬಳಿ ಇರುವ ಅಪ್ಪು ಬಾರ್ ಮತ್ತು ಅಕ್ಕ ಪಕ್ಕದ ಅಂಗಡಿಗಳ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

-----------

ಕಾನೂನು ಸುವ್ಯವಸ್ಥೆ ಹದಗೆಟ್ಟ ಆತಂಕ

ಮದ್ದೂರು: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ ಎಂಬ ಆತಂಕ ನಾಗರಿಕರನ್ನು ಕಾಡುತ್ತಿದೆ.

ಬೀದಿ ಬೀದಿಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಯುವಕರ ಗುಂಪು ಕಂಡ ಕಂಡವರ ಹಲ್ಲೆ ನಡೆಸುತ್ತಿರುವುದು, ಅಕ್ರಮ ಜೂಜಾಟ, ಮರಳು ಮತ್ತು ಕೆರೆಗಳಲ್ಲಿ ಮಣ್ಣು ಬಗೆಯುವ ದಂಧೆ, ಮನೆಗಳಲ್ಲಿ ಕಳ್ಳತನ ಮತ್ತು ಸರಗಳ್ಳತನ ಪ್ರಕರಣ ಎಗ್ಗಿಲ್ಲದೆ ನಡೆಯುತ್ತಿದ್ದರೂ ಸಹ ಇದಕ್ಕೆ ಕಡಿವಾಣ ಹಾಕುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಪೇಟೆ ಬೀದಿ ಕಿರಿದಾದ ರಸ್ತೆಗಳಲ್ಲಿ ವಾಹನಗಳ ಸವಾರರು ತಮ್ಮ ವಾಹನಗಳನ್ನು ಅಡ್ಡಾದಿಡಿಯಾಗಿ ನಿಲ್ಲಿಸಿ ಪಾದಚಾರಿಗಳ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿದ್ದರೂ ಸಹ ಸಂಚಾರಿ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಸಾಮಾನ್ಯ ಆರೋಪವಾಗಿದೆ.

ರಾಜಕಾರಣಿಗಳ ಒತ್ತಡದಿಂದಾಗಿ ಹೊಡೆದಾಟ ಮತ್ತಿತರೆ ಪ್ರಕರಣಗಳಲ್ಲಿ ಆರೋಪಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಹಿಂಜರಿಯುತ್ತಿರುವ ಪರಿಸ್ಥಿತಿ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.

ತಾಲೂಕಿನ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ನಡೆಯುತ್ತಿರುವ ಜೂಜಾಟ ಪ್ರಕರಣಗಳನ್ನು ತಡೆಗಟ್ಟುವಲ್ಲಿ ವಿಫಲರಾಗಿರುವ ಠಾಣೆಗಳ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಬೇಸತ್ತಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಬೇರೆ ಠಾಣೆಯ ಅಧಿಕಾರಿಗಳನ್ನು ಕಳುಹಿಸಿ ಜೂಜಾಟ ಕೇಂದ್ರಗಳ ಮೇಲೆ ದಾಳಿ ನಡೆಸಿದ ನಂತರ ಎಚ್ಚೆತ್ತುಕೊಂಡಿರುವ ಠಾಣೆಗಳ ಪೊಲೀಸ್ ಅಧಿಕಾರಿಗಳು ಸಣ್ಣಪುಟ್ಟ ಆರೋಪಿಗಳನ್ನು ಹಿಡಿದು ತಂದು ಪ್ರಕರಣ ದಾಖಲಿಸುವ ಮೂಲಕ ಮೇಲಾಧಿಕಾರಿಗಳ ಶಿಸ್ತು ಕ್ರಮದ ಶಿಕ್ಷೆಯಿಂದ ಪಾರಾಗಲು ಯತ್ನಿಸುತ್ತಿದ್ದಾರೆ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದಾರೆ.