ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ತಪ್ಪು ಮಾಡಿಲ್ಲ. ಕೋಮುವಾದಿಗಳು ಅವರ ಗೌರವಕ್ಕೆ ಧಕ್ಕೆ ತರಲು ಪಿತೂರಿ ನಡೆಸಿದ್ದಾರೆ ಎಂದು ಸಮಾಜಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಹೇಳಿದರು.ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಶಾಸಕರು, ಮಂತ್ರಿಗಳು ಹಾಗೂ ಹೈಕಮಾಂಡ್ ಸಿದ್ದರಾಮಯ್ಯ ಪರ ಇದ್ದಾರೆ, ಸಿದ್ದರಾಮಯ್ಯ ಯಾವ ತಪ್ಪು ಕೂಡ ಮಾಡಿಲ್ಲ. ಜೆಡಿಎಸ್, ಬಿಜೆಪಿ ರಾಜಭವನವನ್ನು ರಾಜಕೀಯ ಅಂಗಳ ಮಾಡಿಕೊಂಡಿವೆ. ಸಂವಿಧಾನ ಉಲ್ಲಂಘನೆ ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯ. ಪ್ರಾಮಾಣಿಕ ರಾಜಕಾರಣಿ ಸಿದ್ದರಾಮಯ್ಯ ಮೇಲೆ ಕಳಂಕ, ಗೌರವಕ್ಕೆ ಧಕ್ಕೆ ತರಲು ಕೋಮುವಾದಿಗಳು, ಮತೀಯವಾದಿಗಳಿಂದ ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಿದರು.
ಮುಡಾ ಪ್ರಕರಣದಲ್ಲಿ ಹಣಕಾಸಿನ ಅವ್ಯವಹಾರ ಆಗಿಲ್ಲ, ಸ್ವಜನ ಪಕ್ಷಪಾತ ಆಗಿಲ್ಲ, ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಗ್ಯಾರಂಟಿ ಕಾರ್ಯಕ್ರಮಗಳಿಂದ ಬಡವರಿಗೆ ವರಮಾನ ಬರುತ್ತಿದೆ, ಇದನ್ನು ಕಂಡು ಬಡವರ ಪರ ಕೆಲಸ ಮಾಡಬಾರದೆಂದು ಸರ್ಕಾರದ ವಿರುದ್ಧ ಕೇಂದ್ರ ಸರ್ಕಾರ, ಬಿಜೆಪಿ, ಜೆಡಿಎಸ್‌ಗೆ ಸಹಿಸಲು ಆಗುತ್ತಿಲ್ಲ ಎಂದು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ಜನರು 135 ಜನರನ್ನು ಆರಿಸಿ ಕಳುಹಿಸಿರುವುದು ರಾಜೀನಾಮೆ ಕೊಡುವುದಕ್ಕೇ? ರಾಜೀನಾಮೆ ಕೊಡಲು ಏನಾಗಿದೆ? ವಿಜಯೇಂದ್ರ ಹೇಳಿದ ತಕ್ಷಣ ರಾಜೀನಾಮೆ ಕೊಡಕ್ಕಾಗತ್ತಾ, ಅವರೆಲ್ಲ ಏನೇನು ಮಾಡಿದ್ದಾರೆ. ಬಿಎಸ್‌ವೈ, ವಿಜಯೇಂದ್ರ, ನಿರಾಣಿ, ಜನಾರ್ದನ ರೆಡ್ಡಿ ಏನೇನ್ ಮಾಡಿದ್ದಾರೆ, ಅವರೆಲ್ಲರ ಮೇಲೂ ಕೇಸ್‌ಗಳಿದೆಯಲ್ಲಾ, ಪ್ರಾಸಿಕ್ಯೂಷನ್ ಇದೆಯಲ್ಲಾ ಅದನ್ನು ಅವರು ಶುದ್ಧಿ ಮಾಡಿಕೊಳ್ಳಲಿ, ಅವರ ಮನೆಯನ್ನು ಮೊದಲು ಸ್ವಚ್ಛವಾಗಿಟ್ಟುಕೊಳ್ಳಲಿ ಎಂದು ತಿರುಗೇಟು ನೀಡಿದರು.