ನಿರಂತರ ಮಳೆ, ಬೆಳೆಗೆ ರೋಗ

| Published : Jul 29 2024, 12:45 AM IST

ಸಾರಾಂಶ

ಜೂನ್‌ ಎರಡನೇ ವಾರದಲ್ಲಿ ಬಿತ್ತನೆ ಮಾಡಿದ ಹೆಸರುಕಾಳು ಬೆಳೆಗೆ ಮುಟಿಗಿ ರೋಗ ಸಹ ಆವರಿಸುತ್ತಿದ್ದು, ಪೋಷಕಾಂಶಗಳ ಕೊರತೆಯಿಂದ ಬೆಳೆಗಳಿಗೆ ರೋಗ ಹೆಚ್ಚಾಗುತ್ತಿದೆ. ಬೆಳವಣಿಗೆ ಸೇರಿದಂತೆ ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ.

ಶಿವಾನಂದ ಅಂಗಡಿ

ಹುಬ್ಬಳ್ಳಿ:

ಕಳೆದ 7-8 ದಿನಗಳಿಂದ ಬಿಟ್ಟುಬಿಡದೇ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಧಾರವಾಡ ಜಿಲ್ಲೆಯಲ್ಲಿ ಪ್ರಮುಖ ಬೆಳೆಗಳಾದ ಹೆಸರುಕಾಳು, ಸೋಯಾಬಿನ್‌, ಮೆಕ್ಕೆಜೋಳ, ಶೇಂಗಾ ಬೆಳೆಗಳಿಗೆ ವಿವಿಧ ರೋಗಗಳು ಆವರಿಸುತ್ತಿವೆ. ರೈತರು ಬಿಸಲನ್ನು ಎದುರು ನೋಡುತ್ತಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಜು. 21ರಿಂದ 27ರ ವರೆಗೆ ವಾಡಿಕೆ ಮಳೆ 34.6 ಮಿಮೀ ಇದ್ದು, ಆದರೆ 80.3 ಮಿಮೀ ಮಳೆ ಸುರಿದಿದೆ. ಕಲಘಟಗಿ, ಧಾರವಾಡ, ಅಳ್ನಾವರ ತಾಲೂಕು ಅರೆಮಲೆನಾಡು ಪ್ರದೇಶವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದಿದೆ. ಅಣ್ಣಿಗೇರಿ, ನವಲಗುಂದ ಹಾಗೂ ಹುಬ್ಬಳ್ಳಿ, ಕುಂದಗೋಳ ತಾಲೂಕುಗಳಲ್ಲಿ ಮುಂಗಾರಿಗೆ ಹೆಸರುಕಾಳು, ಶೇಂಗಾ, ಮೆಣಸಿನಕಾಯಿ ಪ್ರಮುಖ ಬೆಳೆಗಳಾಗಿವೆ. ಕಲಘಟಗಿ ಹಾಗೂ ಧಾರವಾಡ ತಾಲೂಕಿನಲ್ಲಿ ಕಬ್ಬು, ಸೋಯಾಬಿನ್‌, ಮೆಕ್ಕೆಜೋಳ ಬೆಳೆಯುತ್ತಾರೆ. ಇತ್ತೀಚೆಗೆ ಕುಂದಗೋಳ ತಾಲೂಕಿನಲ್ಲಿ ಸೋಯಾಬಿನ್‌ ಸಹ ಬೆಳೆಯುತ್ತಿದ್ದಾರೆ. ಉತ್ತಮ ಮಳೆಯಿಂದಾಗಿ ಈ ಬಾರಿ ಸಕಾಲದಲ್ಲಿ ಬಿತ್ತನೆಯಾಗಿದ್ದು ಹೆಸರು ಬೆಳೆ ಸುಲಿಗಾಯಿ ಹಂತದಲ್ಲಿದೆ. ಈಗ ಸುರಿಯುತ್ತಿರುವ ಮಳೆಯಿಂದಾಗಿ ಹೊಲಗಳಲ್ಲಿ ನೀರು ನಿಲ್ಲುತ್ತಿದ್ದು, ಎಂಟತ್ತು ದಿನಗಳಿಂದ ಬಿಸಿಲು ಬೀಳದೆ ಇರುವುದರಿಂದ ತೇವಾಂಶ ಹೆಚ್ಚಾಗಿ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿವೆ. ಕೆಲವೆಡೆ ಬೂದು ರೋಗ ಸಹ ಆ‍ವರಿಸಿದೆ.

ಜೂನ್‌ ಎರಡನೇ ವಾರದಲ್ಲಿ ಬಿತ್ತನೆ ಮಾಡಿದ ಹೆಸರುಕಾಳು ಬೆಳೆಗೆ ಮುಟಿಗಿ ರೋಗ ಸಹ ಆವರಿಸುತ್ತಿದ್ದು, ಪೋಷಕಾಂಶಗಳ ಕೊರತೆಯಿಂದ ಬೆಳೆಗಳಿಗೆ ರೋಗ ಹೆಚ್ಚಾಗುತ್ತಿದೆ. ಬೆಳವಣಿಗೆ ಸೇರಿದಂತೆ ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ.

ಅಣ್ಣಿಗೇರಿ ಹಾಗೂ ನವಲಗುಂದ ತಾಲೂಕಿನಲ್ಲಿ ಎರೆ (ಕಪ್ಪು ಭೂಮಿ) ಹೊಲಗಳಲ್ಲಿ ಸಣ್ಣೇರೆ ಮಣ್ಣು ಇದ್ದು, ಈ ಪ್ರದೇಶದಲ್ಲಿ ಜಾಸ್ತಿ ಮಳೆಯಾದರೆ ಭೂಮಿ ತಡೆಯುವುದಿಲ್ಲ. ಹೀಗಾಗಿ ಬೆಳೆಗಳಿಗೆ ಬೇಗ ರೋಗ ತಗಲುತ್ತದೆ. ಮಣ್ಣು ಸಹ ಬೂದಿ ಮಿಶ್ರಿತವಾಗುತ್ತದೆ. ವರುಣದೇವ ಬಿಡುವು ನೀಡಬೇಕು, ಇಲ್ಲದಿದ್ದರೆ ಮತ್ತೆ ನಮಗೆ ಸಂಕಷ್ಟ ಕಾದಿದೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಈ ಭಾಗದ ರೈತರು.

ಜಿಲ್ಲೆಯಲ್ಲಿ ವಾಣಿಜ್ಯ ಬೆಳೆ ಮೆಣಸಿನಕಾಯಿ ಬೆಳೆಗೆ ಸದ್ಯಕ್ಕೆ ಯಾವುದೇ ರೋಗದ ಬಾಧೆ ಕಂಡು ಬಂದಿಲ್ಲ. ಗೋವಿನಜೋಳಕ್ಕೆ ತುಕ್ಕುರೋಗ, ಸೈನಿಕ ಹುಳು ಬಾಧೆ, ಸೋಯಾಬಿನ್‌ಗೆ ತುಕ್ಕುರೋಗ, ಎಲೆ ತಿನ್ನುವ ಕೀಡೆ ಕಂಡು ಬಂದಿದ್ದು, ಕಳೆದ ವರ್ಷದ ಬರದಿಂದ ಕೆಂಗೆಟ್ಟಿರುವ ಅನ್ನದಾತರು ಮಳೆಯಿಂದ ಮುಕ್ತಿ ಸಿಗಲಿ ಎನ್ನುತ್ತಿದ್ದಾರೆ.

ಹೊಲ, ಒಡ್ಡುಗಳಲ್ಲಿ ನಿಂತಿರುವ ಹೆಚ್ಚುವರಿ ನೀರನ್ನು ಹರಿ ಮಾಡಿ ಹೊರಗೆ ಹಾಕಬೇಕು, ನೀರು ನಿಂತಾಗ ಯೂರಿಯಾ ಗೊಬ್ಬರ ಬಳಕೆ ಮಾಡಬಾರದು, ಇದರಿಂದ ರೋಗಬಾಧೆ ಹೆಚ್ಚಾಗುವುದು ಎನ್ನುತ್ತಾರೆ ಕೃಷಿ ತಜ್ಞರು.

ಮಳೆ ಹೆಚ್ಚಾದಾಗ ಪೋಷಕಾಂಶ ಕೊರತೆಯಿಂದಾಗಿ ಬೆಳೆಗಳಿಗೆ ರೋಗ ತಗುಲುತ್ತವೆ. ರೋಗಕ್ಕೆ ಅನುಗುಣವಾಗಿ ಕಾರ್ಬನ್‌ಡೈಜಿಮ್‌ ಅಥವಾ ಮ್ಯಾಂಕೋಜೆಬ್‌, ಹೆಕ್ಸಾಕೋನೋಜೋಲ್‌ ಬಳಕೆ ಮಾಡಬೇಕು ಎಂದು ಧಾರವಾಡ ಜಂಟಿ ಕೃಷಿ ನಿರ್ದೇಶಕ ಕಿರಣಕುಮಾರ ಎಂ. ಹೇಳಿದರು.ನಿರಂತರ ಮಳೆಯಿಂದಾಗಿ ನಮ್ಮ ಹೊಲದಲ್ಲಿ ಹೆಸರುಕಾಳು ಬೆಳೆಗೆ ಎಲೆರೋಗ, ಬೂದಿರೋಗ ಕಂಡು ಬಂದಿದೆ. ಬಿಸಿಲು ಬೀಳದೇ ಇರುವುದರಿಂದ ಹಳದಿ ರೋಗ ಆವರಿಸಿದೆ. ಮೇ ತಿಂಗಳಲ್ಲಿ ಬಿತ್ತನೆ ಮಾಡಿದ ಹೆಸರುಕಾಳು ಈಗ ಬುಡ್ಡಿ ಆಗಿದೆ. ಮುಂದಿನ 20 ದಿನಗಳಲ್ಲಿ ಇದು ಕೊಯ್ಲಿಗೆ ಬರಲಿದ್ದು, ಮಳೆ ನಿಲ್ಲದಿದ್ದರೆ ಬುಡ್ಡಿ ನಾಶವಾಗುತ್ತದೆ ಎಂದು ಅಣ್ಣಿಗೇರಿ ರೈತ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಭಗವಂತಪ್ಪ ಪುಟ್ಟಣ್ಣವರ ಹೇಳಿದರು.