ಕ್ಷೇತ್ರದ ಜನರೊಂದಿಗಿನ ಸಂಬಂಧ ನಿರಂತರ -ಸಂಸದ ಬೊಮ್ಮಾಯಿ

| Published : Jul 20 2024, 12:47 AM IST

ಸಾರಾಂಶ

ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ, ಶಿಗ್ಗಾಂವಿ ಸವಣೂರು ಕ್ಷೇತ್ರದ ಜನರೊಂದಿಗಿನ ಸಂಬಂಧ ನಿರಂತರ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಸವಣೂರು: ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ, ಶಿಗ್ಗಾಂವಿ ಸವಣೂರು ಕ್ಷೇತ್ರದ ಜನರೊಂದಿಗಿನ ಸಂಬಂಧ ನಿರಂತರ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಶಿಗ್ಗಾಂವಿ-ಸವಣೂರು ಕ್ಷೇತ್ರದಲ್ಲಿ ಆರಂಭಿಸಿರುವ ಮತದಾರರಿಗೆ ಧನ್ಯವಾದ ಯಾತ್ರೆಯಲ್ಲಿ ಪಾಲ್ಗೊಂಡು ಶುಕ್ರವಾರ ತವರಮೆಳಹಳ್ಳಿ, ಹೊಸ-ಹಳೆ ಹಲಸೂರ, ಮನ್ನಂಗಿ, ಮನ್ನಂಗಿ ಪ್ಲಾಟ್, ಕುರಬೂರ ಮಲ್ಲೂರ, ಕಲ್ಮಡವು, ಬರದೂರ, ಚಳ್ಳಾಳ ಹಾಗೂ ಮಾವೂರ ಜನತೆಗೆ ಧನ್ಯವಾದ ಅರ್ಪಿಸಿ ಮಾತನಾಡಿದರು.ನಾನು ರಾಜಕಾರಣ ಮಾಡಲು ಬಂದಿಲ್ಲ, ತಮಗೆಲ್ಲರಿಗೂ ಕೃತಜ್ಞತೆ ಹಾಗೂ ಅಭಿನಂದನೆ ಸಲ್ಲಿಸಲು ಬಂದಿದ್ದೇನೆ. ನನ್ನನ್ನು ನಾಲ್ಕು ಬಾರಿ ಶಾಸಕನನ್ನಾಗಿ ಆಯ್ಕೆ ಮಾಡಿ ಪ್ರೀತಿ ವಿಶ್ವಾಸ ತೋರಿಸಿದ್ದೀರಿ, ಆ ಪ್ರೀತಿ ವಿಶ್ವಾಸವನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗಬೇಕು. ನಾನು ಈಗ ಶಾಸಕನಲ್ಲದಿದ್ದರೂ ನಿಮ್ಮ ಕೆಲಸ ಕಾರ್ಯ ಮಾಡಲು ಶಕ್ತಿ ಇಲ್ಲ ಅಂತಲ್ಲ, ನೀವು ನನಗೆ ಶಾಸಕನನ್ನಾಗಿ ಮಾಡಿ ಸಹಕಾರ, ಜಲಸಂಪನ್ಮೂಲ, ಗೃಹ ಇಲಾಖೆ, ಕಾನೂನು ಸಂಸದೀಯ ವ್ಯವಹಾರದಂತ ಖಾತೆಗಳನ್ನು ನಿಭಾಯಿಸುವ ಶಕ್ತಿ ನೀಡಿದ್ದು, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ, ನಿಮ್ಮ ನನ್ನ ನಡುವಿನ ಸಂಬಂಧಕ್ಕೆ ರಾಜೀನಾಮೆ ಇಲ್ಲ ಎಂದು ಹೇಳಿದರು.