ಸಾರಾಂಶ
ಚನ್ನಗಿರಿ ತಾಲೂಕಿನಲ್ಲಿ ಸುಮಾರು 70-80 ವರ್ಷಗಳಿಂದ ಭೂ ರಹಿತರು ಮತ್ತು ಬಡ ರೈತ ಕೃಷಿ ಕಾರ್ಮಿಕರು ಕಂದಾಯ ಹಾಗೂ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿದ್ದು ಬಹುಪಾಲು ರೈತರು ಇದರಿಂದಲೇ ತಮ್ಮ ಜೀವನ ನಡೆಸುತ್ತಿದ್ದು ಸರ್ಕಾರ ಕೂಡಲೇ ಈ ಎಲ್ಲಾ ರೈತರಿಗೆ ಸಾಗುವಳಿ ಪತ್ರಗಳ ಮಂಜೂರು ಮಾಡಿಕೊಡಬೇಕು.
ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಲು ಕೂಡಲೇ ಭೂ ಮಂಜೂರಾತಿ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಸಂಘಟನೆ ಜಿಲ್ಲಾಧ್ಯಕ್ಷ ಮಧು ತೊಗಲೇರಿ ಮಾತನಾಡಿ ತಾಲೂಕಿನಲ್ಲಿ ಸುಮಾರು 70-80 ವರ್ಷಗಳಿಂದ ಭೂ ರಹಿತರು ಮತ್ತು ಬಡ ರೈತ ಕೃಷಿ ಕಾರ್ಮಿಕರು ಕಂದಾಯ ಹಾಗೂ ಅರಣ್ಯ ಭೂಮಿ ಸಾಗುವಳಿ ಮಾಡುತ್ತಿದ್ದು ಬಹುಪಾಲು ರೈತರು ಇದರಿಂದಲೇ ತಮ್ಮ ಜೀವನ ನಡೆಸುತ್ತಿದ್ದು ಸರ್ಕಾರ ಕೂಡಲೇ ಈ ಎಲ್ಲಾ ರೈತರಿಗೆ ಸಾಗುವಳಿ ಪತ್ರಗಳ ಮಂಜೂರು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಇಲ್ಲಿಯವರೆಗೆ ಬಗರ್ ಹುಕುಂ ಸಾಗುವಳಿದಾರರ ಸುಮಾರು 12ಲಕ್ಷ ಕ್ಕಿಂತಲೂ ಹೆಚ್ಚು ಅರ್ಜಿಗಳು ಸರ್ಕಾರದ ಮುಂದೆ ಇದ್ದರೂ ಈ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ ಇನ್ನು ಲಕ್ಷಾಂತರ ಭೂ ರಹಿತರು ಹಕ್ಕುಪತ್ರ ಪಡೆಯಲು ಅರ್ಜಿ ಹಾಕಬೇಕು ಎಂದು ಕಾಯುತ್ತಿದ್ದರೂ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳದಿರುವುದರಿಂದ ಬಗರ್ ಹುಕುಂ ಸಾಗುವಳಿದಾರ ರೈತರು ಮತ್ತಷ್ಟು ಆತಂಕದಲ್ಲಿದ್ದು ಕೂಡಲೇ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡು ಅರಣ್ಯ ಮತ್ತು ಕಂದಾಯ ಭೂಮಿಗಳ ಸಾಗುವಳಿ ಮಾಡಿದ ಎಲ್ಲಾ ರೈತರಿಗೆ ಹಕ್ಕುಪತ್ರಗಳ ವಿತರಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಘಟನೆ ಪ್ರಮುಖರಾದ ನಾಗಸ್ಮೀತಾ, ಬಸವರಾಜಪ್ಪ ನೀರ್ಥಡಿ, ಮಂಜುನಾಥರೆಡ್ಡಿ, ರಾಜು, ಸೋಮಶೇಖರ್, ಹಾಲೇಶಪ್ಪ, ಮಹಂತೇಶ್ ಸೇರಿ ಮುಂತಾದವರಿದ್ದರು.