ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಎಲ್ಲ ವಯೋಮಾನದವರ ಉಚಿತ ಕಣ್ಣಿನ ತಪಾಸಣೆ ನಡೆಸಿ ದೃಷ್ಟಿ ದೋಷ ನಿವಾರಣೆ ಉದ್ದೇಶ ಹೊಂದಿರುವ ಸರ್ಕಾರದ ಮಹತ್ವಾಕಾಂಕ್ಷೆಯ ‘ಆಶಾಕಿರಣ-ನಿಮ್ಮ ಮನೆ ಬಾಗಿಲಿಗೆ ಕಣ್ಣಿನ ಆರೈಕೆ’ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾವೇರಿಯಲ್ಲಿ ಭಾನುವಾರ ಚಾಲನೆ ನೀಡಲಿದ್ದಾರೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ , ಸುಮಾರು 2.45 ಲಕ್ಷ ಮಂದಿಗೆ ಕನ್ನಡಕ ವಿತರಿಸುವ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರು ಭಾನುವಾರ ಅಪರಾಹ್ನ 3 ಗಂಟೆಗೆ ಚಾಲನೆ ನೀಡಲಿದ್ದಾರೆ ಎಂದರು.ಯೋಜನೆಯಡಿ ಮೊದಲ ಹಂತದಲ್ಲಿ ಹಾವೇರಿ, ಕಲಬುರಗಿ, ಚಾಮರಾಜನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳು, ಎರಡನೇ ಹಂತದಲ್ಲಿ ಚಿತ್ರದುರ್ಗ, ಮಂಡ್ಯ, ರಾಯಚೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮನೆ ಮನೆಗೆ ತೆರಳಿ ಕಣ್ಣಿನ ಆರೋಗ್ಯ ತಪಾಸಣೆ ನಡೆಸುವ ಉದ್ದೇಶ ಹೊಂದಲಾಗಿದೆ. ಅದರಂತೆ ಮೊದಲ ಹಂತದಲ್ಲಿ ಆಶಾ ಕಾರ್ಯಕರ್ತೆಯರು ಹಾವೇರಿ, ಕಲಬುರಗಿ, ಚಾಮರಾಜನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಒಟ್ಟು 56,59,036 ಜನರನ್ನು ಪ್ರಾಥಮಿಕ ತಪಾಸಣೆಗೆ ಒಳಪಡಿಸಿದ್ದಾರೆ. ಅವರಲ್ಲಿ 8,28,884 ಜನರಿಗೆ ನೇತ್ರ ಸಂಬಂಧಿ ತೊಂದರೆಗಳು ಕಂಡುಬಂದಿದ್ದು, ದ್ವಿತೀಯ ಹಂತದ ಚಿಕಿತ್ಸೆಗೆ ಒಳಪಡಿಸಿದಾಗ 2,45,588 ಮಂದಿಗೆ ದೃಷ್ಟಿದೋಷ ಇರುವುದು ಪತ್ತೆಯಾಗಿದೆ. ಆ 2,45,588 ಜನರಿಗೂ ಉಚಿತ ಕನ್ನಡಕ ಒದಗಿಸುವ ಕಾರ್ಯ ಭಾನುವಾರದಿಂದ ಆರಂಭವಾಗಲಿದೆ. ಅಲ್ಲದೆ, 39,336 ಜನರಿಗೆ ಕಣ್ಣಿನ ಪೊರೆ ತೊಂದರೆ ಕಂಡು ಬಂದಿದ್ದು, ಅವರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುವುದು. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರ ಕಣ್ಣಿನ ತಪಾಸಣೆಯನ್ನು ಆರೋಗ್ಯ ಇಲಾಖೆ ಜನರ ಮನೆಬಾಗಿಲಿಗೆ ಹೋಗಿ ನಡೆಸಿದೆ ಎಂದರು.
ಆಶಾಕಿರಣ ಯೋಜನೆ ದೃಷ್ಟಿದೋಷ ಹೊಂದಿದ ಅನೇಕ ಜನಸಾಮಾನ್ಯರ ಪಾಲಿಗೆ ಬೆಳಕಾಗಲಿದ್ದು, ಯೋಜನೆಯನ್ನು ಹಂತ ಹಂತವಾಗಿ ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ ಎಂದರು.