ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರುತಾಲೂಕಿನ ಮದ್ದೂರು ಮತ್ತು ಯರಿಯೂರು ಗ್ರಾಪಂ ವ್ಯಾಪ್ತಿಯಲ್ಲಿ ಗುರುವಾರ ಸಂವಿಧಾನ ಜಾಗೃತಿ ಜಾಥಾ ನಡೆಯಿತು. ಮದ್ದೂರಿನಲ್ಲಿ ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ವೆಂಕಟರಮಣ, ಇತರೆ ಸದಸ್ಯರು ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಜಾಥಾ ಬರಮಾಡಿಕೊಂಡರು. ಗ್ರಾಮೀಣ ಕಲೆಯಾದ ದೊಣ್ಣೆ ವರಸೆಯನ್ನು ಗ್ರಾಮಸ್ಥರು ಪ್ರದರ್ಶಿಸಿದರು. ಮುಳ್ಳಿನ ಚಂಡು ಸುತ್ತುವುದು, ಬಾಕು, ಪಿಚ್ಚುಕೊಳ್ಳಿ, ಕತ್ತಿವರಸೆ, ಪ್ರದರ್ಶನ ಮಾಡಿದರು. ಹುಲಿವೇಷ, ಮಂಗಳವಾದ್ಯ, ನಗಾರಿ, ತಮಟೆ, ಡೊಳ್ಳುಗಳ ನಾದದೊಂದಿಗೆ ಜಾಥಾ ಸಾಗಿತು. ಶಾಲಾ ವಿದ್ಯಾರ್ಥಿಗಳು ರಾಷ್ಟ್ರನಾಯಕರ ವೇಷ ಭೂಷಣಗಳನ್ನು ಧರಿಸಿ ಗಮನ ಸೆಳೆದರು. ರಸ್ತೆ ಉದ್ದಕ್ಕೂ ಯುವಕರು ಮಾರಿಕುಣಿತ ಕುಣಿದು ಕುಪ್ಪಳಿಸಿದರು. ಶಾಲಾ ವಿದ್ಯಾರ್ಥಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಜಾಥಾದಲ್ಲಿ ಪಾಲ್ಗೊಂಡರು. ಗ್ರಾಮಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ವೇದಿಕೆ ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಲಿಖಿತ ಮಾತನಾಡಿ ಭಾರತ ಸಂವಿಧಾನ ಇತರೆ ರಾಷ್ಟ್ರಗಳ ಸಂವಿಧಾನಕ್ಕಿಂತ ವಿಶೇಷವಾಗಿದೆ. ನಮ್ಮ ಸಂವಿಧಾನ 395 ಮೂಲವಿಧಿಗಳನ್ನು ಒಳಗೊಂಡು ವಿಶ್ವದಲ್ಲಿಯೇ ಬೃಹತ್ ಸಂವಿಧಾನವಾಗಿದೆ. ಸರ್ವರು ಸಮಾನರಾಗಿ ಬಾಳಬೇಕೆಂಬ ಉದ್ದೇಶವನ್ನು ಸಂವಿಧಾನ ಇಟ್ಟುಕೊಂಡಿದೆ ಎಂದರು.ರಾಜಕೀಯ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಕಾಣಬೇಕೆಂಬ ಕನಸನ್ನು ಅಂಬೇಡ್ಕರ್ ಹೊಂದಿದ್ದರು. ಸಂವಿಧಾನದ ಅರಿವು ಹೆಚ್ಚಾದಷ್ಟು ಕೋಮುಗಲಭೆ, ಅನಿಷ್ಟ ಪದ್ದತಿಗಳು ನಾಶಗೊಳ್ಳುತ್ತವೆ. ರಾಜ್ಯ ಸರ್ಕಾರ ನಾಡಿನ ಜನರಿಗೆ ಸಂವಿಧಾನದ ಅರಿವು ಮೂಡಿಸಲು ಸಂವಿಧಾನ ಜಾಗೃತಿ ಮೂಡಿಸುವಂತಹ ಕಾರ್ಯಕ್ಕೆ ಮುಂದಾಗಿರುವುದು ಮೆಚ್ಚುಗೆಯ ವಿಷಯವಾಗಿದೆ ಎಂದು ಲಿಖಿತ ತಿಳಿಸಿದರು. ಯರಿಯೂರು ಗ್ರಾಮ ಪಂಚಾಯತಿಯಲ್ಲೂ ಸಂವಿಧಾನ ಜಾಗೃತಿ ಜಾಥಾಗೆ ಸಂಭ್ರಮದ ಸ್ವಾಗತ ದೊರೆಯಿತು. ಸತ್ತಿಗೆ ಸೂರಪನಿ, ಡೊಳ್ಳು, ತಮಟೆ, ಅಲಂಕೃತ ಎತ್ತಿನಗಾಡಿಗಳು ಮೆರವಣಿಗೆಯಲ್ಲಿ ಸಾಗಿದವು. ಹೆಣ್ಣು ಮಕ್ಕಳು ಕಳಶ ಹಿಡಿದು ಪಾಲ್ಗೊಂಡರು. ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ದೊಡ್ಡಮ್ಮ ನಂಜುಂಡಸ್ವಾಮಿ ವಹಿಸಿದ್ದರು. ಉಪಾಧ್ಯಕ್ಷ ಮಹೇಶ್, ಇತರೆ ಸದಸ್ಯರು, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಯೋಗೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ಇತರೆ ಅಧಿಕಾರಿಗಳು, ಗ್ರಾಮದ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು, ಉಪಸ್ಥಿತರಿದ್ದರು. ಉಪನ್ಯಾಸಕಾರದ ಶ್ರೀಕಾಂತ್ ಅವರು ಸಂವಿಧಾನ ಕುರಿತು ಮುಖ್ಯ ಭಾಷಣ ಮಾಡಿದರು. ಪುಸ್ತಕ ಜೋಳಿಗೆಗೆ ಊರಿನ ಗ್ರಾಮಸ್ಥರು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಸಂವಿಧಾನ ಕುರಿತು ನಡೆಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.