ಮಂಡ್ಯ ನಗರಸಭೆಯಲ್ಲಿ ಸಂವಿಧಾನ ದಿನಾಚರಣೆ

| Published : Nov 27 2024, 01:03 AM IST

ಸಾರಾಂಶ

ಮಹತ್ವದ ಸಂವಿಧಾನವನ್ನು ಕೊಡುಗೆಯಾಗಿ ನೀಡಿರುವ ಅಂಬೇಡ್ಕರ್ ಅವರನ್ನು ವಿಶ್ವಜ್ಞಾನಿ ಎಂದು ಬಣ್ಣಿಸಲಾಗಿದೆ. ಸಮಾಜದ ಎಲ್ಲ ಜನರ ಕಷ್ಟಗಳನ್ನು ಅರಿತಿದ್ದ ಅಂಬೇಡ್ಕರ್ ಯಾರೊಬ್ಬರಿಗೂ ಅನ್ಯಾಯವಾಗದ ರೀತಿಯಲ್ಲಿ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರಸಭೆಯಿಂದ ಮಂಗಳವಾರ ಕಾರ್ಯಾಲಯದ ಆವರಣದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಸಂವಿಧಾನ ದಿನವನ್ನು ಆಚರಿಸಿದರು.

ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್) ಮಾತನಾಡಿ, ಭಾರತದ ಸಂವಿಧಾನ ಇಡೀ ಜಗತ್ತಿಗೆ ಮಾದರಿಯಾಗಿದೆ. ಹಲವಾರು ದೇಶಗಳು ಸಂವಿಧಾನ ಮೆಚ್ಚಿಕೊಂಡಿವೆ. ಎಲ್ಲರಿಗೂ ಸಮಾನವಾದ ಹಕ್ಕುಗಳು, ಕಾನೂನು ರಕ್ಷಣೆ ದೊರಕಿಸಿರುವ ಸಂವಿಧಾನವನ್ನು ವಿಶ್ವದ ಬೇರಾವ ರಾಷ್ಟ್ರದಲ್ಲೂ ಕಾಣಲಾಗುವುದಿಲ್ಲ ಎಂದರು.

ಮಹತ್ವದ ಸಂವಿಧಾನವನ್ನು ಕೊಡುಗೆಯಾಗಿ ನೀಡಿರುವ ಅಂಬೇಡ್ಕರ್ ಅವರನ್ನು ವಿಶ್ವಜ್ಞಾನಿ ಎಂದು ಬಣ್ಣಿಸಲಾಗಿದೆ. ಸಮಾಜದ ಎಲ್ಲ ಜನರ ಕಷ್ಟಗಳನ್ನು ಅರಿತಿದ್ದ ಅಂಬೇಡ್ಕರ್ ಯಾರೊಬ್ಬರಿಗೂ ಅನ್ಯಾಯವಾಗದ ರೀತಿಯಲ್ಲಿ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಸಂವಿಧಾನ ವ್ಯವಸ್ಥೆ ಹೇಗಿರಬೇಕೆಂಬ ಪರಿಕಲ್ಪನೆಯನ್ನಿಟ್ಟುಕೊಂಡು ಅದನ್ನು ಅಷ್ಟೇ ಪರಿಣಾಮಕಾರಿಯಾಗುವಂತೆ ರಚಿಸಿ ಅನುಷ್ಠಾನಗೊಳಿಸಿದರು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಎಂ.ಪಿ.ಅರುಣ್‌ಕುಮಾರ್, ಆಯುಕ್ತೆ ಪಂಪಾಶ್ರೀ, ಸದಸ್ಯರಾದ ನಾಗೇಶ, ಶಿವಪ್ರಕಾಶ್, ಕಂದಾಯಾಧಿಕಾರಿ ರಾಜಶೇಖರ್, ಕಂದಾಯ ನಿರೀಕ್ಷಕ ನಾಗರಾಜು ಹಾಗೂ ಇನ್ನಿತರ ಅಧಿಕಾರಿ, ಸಿಬ್ಬಂದಿ ಇದ್ದರು.ಸಂವಿಧಾನ ದಿನ ಅರ್ಥಪೂರ್ಣ ಆಚರಣೆ

ಮದ್ದೂರು:ಭಾರತ ಸಂವಿಧಾನ ದಿನಾಚರಣೆ ಅಂಗವಾಗಿ ಪುರಸಭೆಯ ಜನಪ್ರತಿನಿಧಿಗಳು ಮಂಗಳವಾರ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸಂವಿಧಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಪುರಸಭೆ ಆವರಣದ ಡಾ.ಅಂಬೇಡ್ಕರ್ ಪುತ್ಥಳಿಗೆ ಪುರಸಭಾಧ್ಯಕ್ಷೆ ಕೋಕಿಲ ಅರುಣ್ ಮಾಲಾರ್ಪಣೆ ಮಾಡಿ ಭಾರತ ಸಂವಿಧಾನದ ಮೌಲ್ಯಗಳನ್ನು ಬಿತ್ತರಿಸಿ ಪ್ರತಿಜ್ಞಾವಿಧಿ ಬೋಧಿಸಿದರು.ಬಳಿಕ ಮಾತನಾಡಿದ ಅಧ್ಯಕ್ಷ ಕೋಕಿಲ ಅರುಣ್, ಭಾರತ ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ. ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ ಪೀಠಿಕೆ ಮತ್ತು ಆಶಯಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಪುರಸಭೆ ಉಪಾಧ್ಯಕ್ಷ ಟಿ. ಆರ್. ಪ್ರಸನ್ನ ಕುಮಾರ್, ಮಾಜಿ ಅಧ್ಯಕ್ಷ ಸುರೇಶ್ ಕುಮಾರ್, ಸದಸ್ಯರಾದ ವನಿತಾ, ಲತಾ ರಾಮು, ರತ್ನ ತಿಮ್ಮಯ್ಯ, ಬಸವರಾಜು, ಪ್ರಮೀಳಾ, ಪುರಸಭೆಯ ಪ್ರಭಾರ ವ್ಯವಸ್ಥಾಪಕಿ ಉಮಾ ಹಾಗೂ ಸಿಬ್ಬಂದಿ ಇದ್ದರು.