ಸಾರಾಂಶ
ಹೊಸಪೇಟೆ: ದೇಶ ಉಳಿಸುವ ಮಹಾಯಾನದ ಭಾಗವಾಗಿ ಏ. 26ರಂದು ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ ನಡೆಯಲಿದ್ದು, ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ರೈತ ಮುಖಂಡ ಜೆ.ಎಂ. ವೀರಸಂಗಯ್ಯ ಕೋರಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಲೆ ಏರಿಕೆ ಹಾಗೂ ಅವೈಜ್ಞಾನಿಕ ನೀತಿಯಿಂದ ಜನರು ತತ್ತರಿಸಿದ್ದಾರೆ. ಕಾರ್ಪೊರೇಟ್ ಹಾಗೂ ಮನುವಾದಿ ಶಕ್ತಿಗಳು ಸಂಯುಕ್ತ ಮಾಫಿಯಾ ರೀತಿ ಕೆಲಸ ಮಾಡುತ್ತಿವೆ. ಅಧಿಕಾರಕ್ಕೆ ಬರಲು ದೇಶವನ್ನು ಧರ್ಮ ಮತ್ತು ಜಾತಿಗಳ ಆಧಾರದ ಮೇಲೆ ಛಿದ್ರಗೊಳಿಸಲಾಗುತ್ತಿದೆ. ಅಮಾಯಕರ ಬದುಕನ್ನು ಬಲಿ ತೆಗೆದುಕೊಳ್ಳಲಾಗುತ್ತಿದೆ. ಯುವಜನರನ್ನು ಧರ್ಮಾಂಧರನ್ನಾಗಿಸಿ ನೆತ್ತರ ರಾಜಕಾರಣವನ್ನು ಪ್ರಚೋದಿಸಲಾಗುತ್ತಿದೆ ಎಂದರು.ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬಲ್ಲ, ಆಳುವವರನ್ನು ಪ್ರಶ್ನಿಸಬಲ್ಲ, ಆಳ್ವಿಕೆಯನ್ನು ಬದಲಿಸಬಲ್ಲ ನಾಗರಿಕ ಶಕ್ತಿಯಾಗಿ ತಳಮಟ್ಟದಿಂದ ದೇಶ ಮಟ್ಟದ ತನಕ ನಮ್ಮನ್ನು ನಾವು ಕಟ್ಟಿಕೊಳ್ಳಬೇಕಿದೆ. ಈ ಗುರಿಯೊಂದಿಗೆಯೇ ಪ್ರತಿ ಊರು, ಕೇರಿ, ಹಾಡಿ, ಬೀದಿಗಳಲ್ಲಿ ಸಂವಿಧಾನ ಸಂರಕ್ಷಕರ ಪಡೆ ಹೆಸರಿನಲ್ಲಿ ದೇಶಪ್ರೇಮಿ ತಂಡ ಕಟ್ಟುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಒಂದು ಲಕ್ಷ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಪ್ರಕ್ರಿಯೆಗೆ ರಾಜ್ಯ ಮಟ್ಟದಲ್ಲಿ ಚಾಲನೆ ನೀಡಲು ಏ. 26ರಂದು ದಾವಣಗೆರೆಯಲ್ಲಿ ಸಂವಿಧಾನ ಸಂರಕ್ಷಕರ ಸಮಾವೇಶ ಆಯೋಜಿಸಲಾಗುತ್ತಿದೆ. ಸಮಾವೇಶದಲ್ಲಿ ಹತ್ತು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ದೊಡ್ಡ ಸಂಖ್ಯೆಯಲ್ಲಿ ಯುವಕ, ಯುವತಿಯರು ಸಮಾವೇಶದಲ್ಲಿ ಜತೆಗೂಡುತ್ತಿದ್ದಾರೆ ಎಂದರು.
ಮುಖಂಡರಾದ ಕರಿಯಪ್ಪ ಗುಡಿಮನಿ, ಚಂದ್ರಶೇಖರ, ಗಂಟೆ ಸೋಮಶೇಖರ, ಶಿವಕುಮಾರ, ರವಿಕುಮಾರ, ಕುಮಾರ ಸಮತಳ, ವಿಶಾಲ್, ನೀಲಪ್ಪ, ಪೀರ್ ಬಾಷಾ ಮತ್ತಿತರರಿದ್ದರು.)
;Resize=(128,128))
;Resize=(128,128))
;Resize=(128,128))