ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ದೇಶದ ಎಲ್ಲಾ ವರ್ಗದವರೂ ಸಂವಿಧಾನದಿಂದ ಅಧಿಕಾರ ಪಡೆಯುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್ ಹೇಳಿದರು.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕ, ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ನಗರ ಕಾಂಗ್ರೆಸ್ ಸಮಿತಿಗಳು ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಹಿಂದೆ ರಾಜ ಮನೆತನದವರು ಮಾತ್ರ ಆಡಳಿತ ನಡೆಸುತ್ತಿದ್ದರು. ಆದರೆ, ಇಂದು ಎಲ್ಲಾ ವರ್ಗದವರು ಆಡಳಿತ ನಡೆಸಲು ಸಂವಿಧಾನ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂವಿಧಾನ ಉಳಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ಹೇಳಿದರು.ದೇಶದಲ್ಲಿ ಶ್ರೀಮಂತರಿರಲಿ, ಬಡವರಿರಲಿ ಸಂವಿಧಾನ ಎಲ್ಲರಿಗೂ ಒಂದೇ ಎಂಬ ಅಡಿಯಲ್ಲಿ ಅಂಬೇಡ್ಕರ್ ಅವರು ರಚನೆ ಮಾಡಿದ್ದಾರೆ. ಬಿಜೆಪಿ ಸಂವಿಧಾನ ಬದಲಿಸಲು ಹೊರಟಿದ್ದು, ಸಂವಿಧಾನವನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲರೂ ಕಾರ್ಯೋನ್ಮುಖರಾಗುವಂತೆ ಮನವಿ ಮಾಡಿದರು.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಭಾರತ ಸಂವಿಧಾನ ಅಳವಡಿಸಿಕೊಂಡು ಇಂದಿಗೆ 75 ವರ್ಷ. ಪ್ರತಿ ವರ್ಷ ನವೆಂಬರ್ 26 ರಂದು ರಾಷ್ಟ್ರೀಯ ಸಂವಿಧಾನ ದಿನವನ್ನಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದರು. ಅಂಬೇಡ್ಕರ್ ಬರೆದಿರುವ ಸಂವಿಧಾನವನ್ನು ಜಗತ್ತಿನಲ್ಲಿ ಯಾರಿಂದಲೂ ಅಳಿಸಲು ಮತ್ತು ಬದಲಾಯಿಸಲು ಸಾಧ್ಯವಿಲ್ಲ. ಅವರ ಆದರ್ಶ ಮೌಲ್ಯಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರೇಖಾ ಹುಲಿಯಪ್ಪಗೌಡ ಮಾತನಾಡಿ, ಅಂಬೇಡ್ಕರ್ ಅವರು 30 ಸಾವಿರಕ್ಕೂ ಹೆಚ್ಚಿನ ಪುಸ್ತಕಗಳನ್ನು ಓದಿದ್ದಾರೆ. ಪ್ರಪಂಚದ ಎಲ್ಲಾ ದೇಶಗಳ ಸಂವಿಧಾನಗಳನ್ನು ಓದಿ ನಮ್ಮ ದೇಶಕ್ಕೆ ಯಾವುದು ಅವಶ್ಯಕವಾಗಿ ಬೇಕಾಗಿದೆ ಎಂಬುದನ್ನು ಮನಗಂಡು ಸಂವಿಧಾನವನ್ನು ರಚನೆ ಮಾಡಿದ್ದಾರೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ಸಂವಿಧಾನ ಉಳಿಸುವುದು ಮತ್ತು ಕಾಪಾಡುವುದು ಕಾಂಗ್ರೆಸ್ ಪಕ್ಷದಿಂದ ಸಾಧ್ಯ. ದೀನ ದಲಿತರ ಮತ್ತು ಶೋಷಿತರ ಪರವಾದ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದ್ದು, ತುಳಿತಕ್ಕೆ ಒಳಗಾದವರ ಪರವಾಗಿ ನಾವೆಲ್ಲರೂ ನಿಲ್ಲಬೇಕು ಎಂದು ಹೇಳಿದರು.ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕ ಜಿಲ್ಲಾಧ್ಯಕ್ಷ ಎಂ.ಮಲ್ಲೇಶ್ ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದಲಾಯಿತು. ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ತನೋಜ್ ಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಸೈಯದ್ ಹನೀಫ್, ಮುಖಂಡರಾದ ಹಿರೇಮಗಳೂರು ರಾಮಚಂದ್ರ, ಪ್ರಸಾದ್ ಅಮಿನ್, ಪರಮೇಶ್ ರಾಜ್ ಅರಸ್, ರಾಘವೇಂದ್ರ, ನೇತ್ರಾವತಿ, ಕುಸುಮಾ ಭರತ್, ಶೋಭಾ, ಮಂಜುನಾಥ್, ಬಾಣೂರು ಈಶ್ವರಪ್ಪ, ಹೇಮಾವತಿ, ಮಲ್ಲಪ್ಪ, ಶಾಂತಕುಮಾರ್, ವೆಂಕಟೇಶ್ ಉಪಸ್ಥಿತರಿದ್ದರು.