ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಸಂವಿಧಾನವನ್ನು ಪ್ರತಿಯೊಬ್ಬರು ಗೌರವಿಸಬೇಕು. ಸಂವಿಧಾನ ನಮ್ಮ ಹೆಮ್ಮೆಯಾಗಿದ್ದು, ಅದನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕೆಲಸವಾಗಬೇಕು. ಸಂವಿಧಾನ ಇದ್ದರೆ ನಮ್ಮೆಲರ ಏಳಿಗೆ ಸಾಧ್ಯ. ಇಲ್ಲದಿದ್ದರೆ ಅಧೋಗತಿ ತಲುಪಬೇಕಾಗುತ್ತದೆ ಎಂದು ವಿಧಾನಪರಿಷತ್ತು ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಎಚ್ಚರಿಸಿದರು.ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಚಾರ್ವಾಕ ಸೋಷಿಯಲ್ ಅಂಡ್ ಕಲ್ಚರಲ್ ಟ್ರಸ್ಟ್, ದೇವರತ್ನ ಫೌಂಡೇಶನ್ ಸಹಯೋಗದೊಂದಿಗೆ ಸೋಮವಾರ ಆಯೋಜಿಸಿದ್ದ ಸಂವಿಧಾನ ಉತ್ಸವ- 75ನೇ ವರ್ಷಗಳ ವಜ್ರಮಹೋತ್ಸವ ಅಂಗವಾಗಿ ಗಿರೀಶ್ ಮಾಚಳ್ಳಿ ಅವರ ರಚನೆ ಮತ್ತು ನಿರ್ದೇಶನದ ‘ಮನುಸ್ಮೃತಿ ವರ್ಸಸ್ ಭಾರತ ಸಂವಿಧಾನ’ ನಾಟಕ ಪ್ರದರ್ಶನ ಹಾಗೂ ಸಂವಿಧಾನ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಸಂವಿಧಾನದ ಮೂಲಕ ಅಧಿಕಾರಕ್ಕೆ ಬಂದವರು, ಸಂವಿಧಾದನ ಸೌಧದ ಇಟ್ಟಿಗೆ ಕೆಡುವ ಕೆಲಸ ನಡೆಸುತ್ತಿದ್ದಾರೆ. ಯಾವ ದೇಶದಲ್ಲಿ ಧರ್ಮದ ಹೆಸರಲ್ಲಿ ರಾಜಕಾರಣ ನಡೆಯುತ್ತದೆಯೋ, ಅಂತಹ ದೇಶ ಉಳಿಯುವುದಿಲ್ಲ. ನಾವೆಲ್ಲರೂ ಈಗಲೇ ಎಚ್ಚೆತ್ತುಕೊಳ್ಳಬೇಕು. ಸಂವಿಧಾನದ ಪ್ರಜ್ಞೆ ಮೂಡಿಸಿಕೊಳ್ಳಬೇಕು. ಸಂವಿಧಾನ ಉಳಿಸುವ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.ಧರ್ಮದಲ್ಲಿ ಒಳ್ಳೆಯದು, ಕೆಟ್ಟದು ಎರಡೂ ಇದೆ. ಎಲ್ಲಾ ಧರ್ಮದ ಮೂಲ ಆಧ್ಯಾತ್ಮಿಕ ಬೋಧನೆ. ಆದರೆ, ಧರ್ಮದ ಹೆಸರಿನಲ್ಲಿ ಧಾರ್ಮಿಕ ವಿಚಾರ ತಂದು ಶೋಷಣೆ ಮಾಡುವ ಕೆಲಸ ಆಗುತ್ತಿದೆ. ಧರ್ಮದ ಕಟ್ಟುಪಾಡು ಮೂಲಕ ದಬ್ಬಾಳಿಕೆ ನಡೆಸಲಾಗುತ್ತಿದೆ. ಇದು ಸರಿಯಲ್ಲ ಎಂದರು.ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಈ ನಾಟಕ ಸಂದೇಶ ಪೂರ್ಣವಾಗಿದೆ. ಮನುಧರ್ಮದ ಶಾಸ್ತ್ರ ಹಾಗೂ ಸಂವಿಧಾನದ ನೀತಿಯನ್ನು ವಿವರಣಾತ್ಮಾಕವಾಗಿ ನೀಡಿದ್ದಾರೆ. ಇಂತಹ ನಾಟಕ ಬೀದಿಯಲ್ಲಿ, ಜನ ಇರುವಲ್ಲಿ ನಡೆಸಬೇಕು ಎಂದು ಹೇಳಿದರು.ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಿಗೆ ಸಂವಿಧಾನ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗೌತಮಿ ಫೌಂಡೇಶನ್ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಜೀವನ ವೃತ್ತಾಂತ ಕುರಿತ ಛಾಯಾಚಿತ್ರ ಪ್ರದರ್ಶಿಸಲಾಯಿತು. ನಂತರ ‘ಮನುಸ್ಮೃತಿ ವರ್ಸಸ್ ಭಾರತ ಸಂವಿಧಾನ’ ನಾಟಕ ಪ್ರದರ್ಶನವಾಯಿತು.ಸಾಹಿತಿ ಪ್ರೊ.ಕೆ.,ಎಸ್. ಭಗವಾನ್, ಚಿಂತಕ ಪ್ರೊ. ಕಾಳೇಗೌಡ ನಾಗವಾರ, ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ವಕೀಲ ಶಿವಪ್ರಸಾದ್ ಎಂ.ಸಿ. ಹುಂಡಿ, ನಾಟಕದ ನಿರ್ದೇಶಕ ಗಿರೀಶ್ ಮಾಚಳ್ಳಿ ಮೊದಲಾದವರು ಇದ್ದರು.----ಕೋಟ್...ಸಂವಿಧಾನ ಜಾರಿಗೆ ಬಂದು 75 ವರ್ಷ ಕಳೆದರೂ ಪಟ್ಟಭದ್ರ ಹಿತಾಶಕ್ತಿ, ಮೇಲ್ವರ್ಗದವರಿಗೆ ಇನ್ನೂ ಅಸಮಾಧಾನ ಹೋಗಿಲ್ಲ. ಅಂಬೇಡ್ಕರ್ ಎಲ್ಲಾ ಸಮುದಾಯಕ್ಕೂ ಸಮಾನ ಅವಕಾಶ ಕೊಟ್ಟಿದ್ದಾರೆ. ಸಾಮಾಜಿಕ ನ್ಯಾಯ ಎತ್ತಿ ತೋರಿಸಿದ್ದು, ಪ್ರಾತಿನಿಧ್ಯ ದೊರಕಿಸಿದ್ದಾರೆ. ಇದರ ಅರಿವಿನ ಕೊರತೆ ಕಾಣುತ್ತಿದೆ.- ಡಾ. ಬಂಜಗೆರೆ ಜಯಪ್ರಕಾಶ್, ಚಿಂತಕ