ಮೀಸಲಾತಿ ವ್ಯವಸ್ಥೆಯು ಸಾಮಾಜಿಕ ನ್ಯಾಯ ಸಾಧಿಸಲು ಅಗತ್ಯವಾಗಿದ್ದು, ಇದು ಭಾರತದಲ್ಲಷ್ಟೇ ಅಲ್ಲದೆ ಅನೇಕ ದೇಶಗಳಲ್ಲಿ ವಿವಿಧ ರೂಪಗಳಲ್ಲಿ ಜಾರಿಯಲ್ಲಿದೆ. ಸಮಾಜದಲ್ಲಿ ಹಿಂದುಳಿದ ವರ್ಗಗಳಿಗೆ ಅವಕಾಶ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಸಂತೋಷ ಲಾಡ್‌ ಹೇಳಿದರು.

ಧಾರವಾಡ:

ಡಾ. ಬಿ.ಆರ್‌. ಅಂಬೇಡ್ಕರ್ ಶ್ರೇಷ್ಠ ಸಂವಿಧಾನ ರಚಿಸುವ ಮೂಲಕ ದೇಶದ ಸಮಾನತೆ ಮತ್ತು ನ್ಯಾಯ ವ್ಯವಸ್ಥೆಗೆ ಬಲವಾದ ಅಡಿಪಾಯ ಹಾಕಿಕೊಟ್ಟಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಂಯುಕ್ತವಾಗಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್‌ ಅವರ 135ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೀಸಲಾತಿ ವ್ಯವಸ್ಥೆಯು ಸಾಮಾಜಿಕ ನ್ಯಾಯ ಸಾಧಿಸಲು ಅಗತ್ಯವಾಗಿದ್ದು, ಇದು ಭಾರತದಲ್ಲಷ್ಟೇ ಅಲ್ಲದೆ ಅನೇಕ ದೇಶಗಳಲ್ಲಿ ವಿವಿಧ ರೂಪಗಳಲ್ಲಿ ಜಾರಿಯಲ್ಲಿದೆ. ಸಮಾಜದಲ್ಲಿ ಹಿಂದುಳಿದ ವರ್ಗಗಳಿಗೆ ಅವಕಾಶ ಕಲ್ಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದ ಅವರು, ಅಂಬೇಡ್ಕರ್‌ ಎದುರಿಸಿದ ಕಷ್ಟಗಳು ಅಪಾರ. ಸಮಾಜದ ಅನ್ಯಾಯ ಮತ್ತು ಅಸಮಾನತೆ ನಡುವೆಯೇ ಅವರು ಉನ್ನತ ಶಿಕ್ಷಣ ಪಡೆದು, ಸಾಕಷ್ಟು ಅಧ್ಯಯನ ನಡೆಸಿ ಸಂವಿಧಾನ ರಚಿಸಿದ್ದಾರೆ ಎಂದರು.

ಯುವಕರು ಅಂಬೇಡ್ಕರ್ ವಿಚಾರ ಅರಿತುಕೊಂಡು, ಸಂವಿಧಾನದ ಮೌಲ್ಯಗಳನ್ನು ಸಮಾಜದಲ್ಲಿ ಪ್ರಚಾರ ಮಾಡುವ ಜವಾಬ್ದಾರಿ ಹೊತ್ತುಕೊಳ್ಳಬೇಕು. ಸಮಾನತೆ, ನ್ಯಾಯ ಮತ್ತು ಸಹಬಾಳ್ವೆಯ ಆಶಯ ಅಳವಡಿಸಿಕೊಂಡಾಗ ಮಾತ್ರ ದೇಶದಲ್ಲಿ ಸಾಮರಸ್ಯ, ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.ಸಂವಿಧಾನ ಉಳಿಬೇಕಾದರೆ ಸಂವಿಧಾನ, ಅಂಬೇಡ್ಕರ್‌ ಬದುಕು ಅರಿತುಕೊಳ್ಳಬೇಕು. ಸಂವಿಧಾನ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಪ್ರಜಾಸತ್ತಾತ್ಮಕ ವ್ಯವಸ್ಥೆ ಕೇವಲ ಚುನಾವಣೆಗಳಿಗೆ ಸೀಮಿತವಾಗಿಲ್ಲ, ಅದು ಸಮಾಜದ ಪ್ರತಿಯೊಂದು ಸಂಸ್ಥೆಯಲ್ಲೂ, ವೈವಿಧ್ಯತೆಯ ಗೌರವದಲ್ಲೂ ಪ್ರತಿಫಲಿಸಬೇಕು. ಶಿಕ್ಷಣವೇ ಅತ್ಯಂತ ದೊಡ್ಡ ಶಕ್ತಿಯಾಗಿದ್ದು, ವಿದ್ಯಾರ್ಥಿಗಳು ಅಡೆ-ತಡೆ ದಾಟಿ ಸಾಧನೆ ಮಾಡುವುದರಿಂದ ಅಂಬೇಡ್ಕರ್ ಅವರ ಕನಸು ಸಾಕಾರಗೊಳ್ಳುತ್ತದೆ ಎಂದರು.

ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ಸಂವಿಧಾನದ ಮಹತ್ವವನ್ನು ಶಾಲೆ, ಕಾಲೇಜು ಮತ್ತು ಮನೆ-ಮನೆಗಳಲ್ಲಿ ಬೋಧಿಸುವುದು ಅಗತ್ಯ. ಇದರ ಅರಿವು ಮೂಡಿದಾಗ ಮಾತ್ರ ನಾಗರಿಕರು ಜವಾಬ್ದಾರಿಯುತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಉಪನ್ಯಾಸಕಿ ಮಲ್ಲಮ್ಮ ಯಾಟಗಲ್ ಅಂಬೇಡ್ಕರ್ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ ಹೆಬ್ಬಳ್ಳಿ ಸ್ವಾಗತಿಸಿದರು. ಎಡಿಸಿ ಗೀತಾ ಸಿ.ಡಿ ಸಂವಿಧಾನದ ಪೂರ್ವ ಪೀಠಿಕೆ ಬೋಧಿಸಿದರು. ಪ್ರವೀಣ ಮಸಕಿ ಕಾರ್ಯಕ್ರಮ ನಿರೂಪಿಸಿದರು. ಎಂ.ಬಿ. ಸನ್ನೇರಿ ವಂದಿಸಿದರು. ಬೌದ್ಧ ಬಿಕ್ಕುಗಳಿಂದ ಬೌದ್ಧ ನಮನ ಮತ್ತು ಪ್ರಾರ್ಥನೆ ಜರುಗಿತು.ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಅಡಿವೇಶ ಗಿರೆಪ್ಪಾ ಇಟಗಿ, ಹುಡಾ ಅಧ್ಯಕ್ಷ ಶಾಕೀರ ಸನದಿ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಮಹಾನಗರ ಸಮಿತಿ ಅಧ್ಯಕ್ಷ ಪ್ರಕಾಶ ಹಳಿಯಾಳ, ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮತ್ತು ಜಿಪಂ ಸಿಇಒ ಭುವನೇಶ ಪಾಟೀಲ, ಎಸ್ಪಿ ಗುಂಜನ ಆರ್ಯ, ಎಸಿ ಶಾಲಂ ಹುಸೇನ್, ತಹಸೀಲ್ದಾರ್‌ ಡಾ. ಡಿ.ಎಚ್. ಹೂಗಾರ, ತಾಪಂ ಇಒ ಗಂಗಾಧರ ಕಂದಕೂರ ಸೇರಿದಂತೆ ಹಲವರು ಇದ್ದರು ವಿವಿಧ ಕ್ಷೇತ್ರಗಳ ಸಾಧಕರಿಗೆ, ಎಸ್ಸೆಸ್ಸೆಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.