ಸಾರಾಂಶ
ಅಂಬೇಡ್ಕರ್ ಜಯಂತಿ । ಸಮ ಸಮಾಜ ನಿರ್ಮಾಣದ ಹರಿಕಾರ
ಕನ್ನಡಪ್ರಭ ವಾರ್ತೆ ಅರಕಲಗೂಡುಸಂವಿಧಾನ ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿ ಹಿಡಿಯುವ ಅತ್ಯಂತ ಪವಿತ್ರ ಹಾಗೂ ಶಾಶ್ವತ ಗ್ರಂಥವಾಗಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಎಸ್.ಧರ್ಮಪಾಲ್ ತಿಳಿಸಿದರು.ತಾಲೂಕು ಆಡಳಿತ ಭಾನುವಾರ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 133 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಶ್ರೇಷ್ಠ ಸಂವಿಧಾನ ನೀಡಿದ ಅಂಬೇಡ್ಕರ್ ಸಮ ಸಮಾಜ ನಿರ್ಮಾಣದ ಹರಿಕಾರರಾಗಿದ್ದು ಇವರ ಆದರ್ಶಗಳು ನಮಗೆ ಮಾರ್ಗದರ್ಶಿಯಾಗಿದೆ’ ಎಂದು ಹೇಳಿದರು.
ಶಾಸಕ ಎ.ಮಂಜು ಮಾತನಾಡಿ, ಅಂಬೇಡ್ಕರ್ ದೇಶಕ್ಕೆ ನೀಡಿರುವ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ. ಅಂಬೇಡ್ಕರ್ ಇಂತಹ ಉತ್ತಮವಾದ ಸಂವಿಧಾನ ನೀಡದಿದ್ದರೆ ಸಮ ಸಮಾಜ ನಿರ್ಮಾಣ ಸಾಧ್ಯವಿರಲಿಲ್ಲ. ಇವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಪಾಲನೆ ಮಾಡುವುದು ಇವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಹೇಳಿದರು.ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಮಾತನಾಡಿ, ಅಂಬೇಡ್ಕರ್ ತಾವು ಬಾಲ್ಯದಲ್ಲಿ ಅನುಭವಿಸಿದ ಸಾಮಾಜಿಕ ಅನ್ಯಾಯಗಳನ್ನು ಬೇರೆಯವರು ಅನುಭವಿಸುವಂತೆ ಆಗಬಾರದು ಎಂಬ ಉದ್ದೇಶದಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ಮಹಾನ್ ಚೇತನವಾಗಿದ್ದಾರೆ ಎಂದರು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಮಿತಿ ಸದಸ್ಯ ಈರೇಶ್ ಹಿರೇಹಳ್ಳಿ ಮಾತನಾಡಿ,ಬಿ.ಆರ್. ಅಂಬೇಡ್ಕರ್ ವಿಶ್ವಶ್ರೇಷ್ಠ ವ್ಯಕ್ತಿಯಾಗಿದ್ದು ಜಗತ್ತಿನಾದ್ಯಂತ ಇವರ ಜನ್ಮದಿನಾಚರಣೆ ಆಚರಿಸಲಾಗುತ್ತಿದೆ. ಅಂಬೇಡ್ಕರ್ ಜಯಂತಿ ಆಚರಣೆಗೆ ಚುನಾವಣಾ ಆಯೋಗ ಅನುವು ಮಾಡಿಕೊಟ್ಟಿರುವುದಕ್ಕೆ ಅಭಿನಂದಿಸಲಾಗುವುದು. ಅಂಬೇಡ್ಕರ್ ಪ್ರತಿಪಾದಿಸಿದ ಸ್ವಾತಂತ್ರ್ಯ, ಸಮಾನತೆ ಹಾಗೂ ಬ್ರಾತೃತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಳ್ಳಬೇಕಿದೆ ಎಂದರು.
ಕಾಂಗ್ರೆಸ್ ಮುಖಂಡ ಎಚ್.ಪಿ.ಶ್ರೀಧರ್ ಗೌಡ ಮಾತನಾಡಿ, ಸಮಾಜದ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರಕುವಂತೆ ಸಂವಿಧಾನದ ಮೂಲಕ ಭದ್ರಬುನಾದಿ ಹಾಕಿಕೊಟ್ಟಿರುವ ಡಾ.ಅಂಬೇಡ್ಕರ್ ಮಹಾನ್ ಮಾನವತಾವಾದಿ. ಇವರ ಆದರ್ಶಗಳನ್ನು ಅನುಸರಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಒಗ್ಗೂಡಿ ದುಡಿಯೋಣ ಎಂದು ಹೇಳಿದರು.ತಾಲೂಕು ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಶಾಸಕ ಎ.ಮಂಜು ಸೇರಿ ಇತರ ನಾಯಕರು ಮಾಲಾರ್ಪಣೆ ಮಾಡಿದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿ.ಆರ್.ರವಿಕುಮಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಮುಖಂಡರಾದ ಕೀರ್ತಿರಾಜ್, ರವಿಕುಮಾರ್, ರಘು, ವಿರಾಜ್, ಪಪಂ ಸದಸ್ಯ ಹೂವಣ್ಣ, ತಾಲೂಕು ದಸಂಸ ಪ್ರಧಾನ ಸಂಚಾಲಕ ದುಮ್ಮಿ ಕೃಷ್ಣ, ಮುಖಂಡರಾದ ಗಣೇಶ್ ವೇಲಾಪುರಿ, ಹರೀಶ್ ಮಾಗಲು, ರಂಗಸ್ವಾಮಿ, ಮುಖಂಡರಾದ ಬಿ.ಸಿ.ರಾಜೇಶ್, ಚಂದ್ರಣ್ಣ, ಧರ್ಮ, ನಿಂಗರಾಜ್ ಇತರರು ಇದ್ದರು.ಅಂಬೇಡ್ಕರ್ ಪ್ರತಿಮೆಗೆ ಸಹಾಯಕ ಚುನಾವಣಾ ಅಧಿಕಾರಿ ಎಸ್.ಧರ್ಮಪಾಲ್, ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ಶಾಸಕ ಎ.ಮಂಜು ಮಾಲಾರ್ಪಣೆ ಮಾಡಿ ಮಾತನಾಡಿದರು. ಇತರ ನಾಯಕರು ಹಾಜರಿದ್ದರು.