ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಸ್ವಾತಂತ್ರ ಪೂರ್ವದಲ್ಲಿಯೇ ಸ್ವಾತಂತ್ರ ಭಾರತ ಹೇಗಿರಬೇಕು ಎಂಬ ಕನಸು ಕಂಡವರು ಅಂಬೇಡ್ಕರ್. ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಹಲವು ದೇಶಗಳ ಸಂವಿಧಾನವನ್ನು ಆಧ್ಯಯನ ಮಾಡಿ, ಸಮಾನತೆ, ಭಾತೃತ್ವದ ನೆಲೆಯಲ್ಲಿ ಸಂವಿಧಾನವನ್ನು ರಚಿಸಿ ಎಲ್ಲರೂ ಜಾತಿ, ಧರ್ಮ, ಭಾಷೆ, ಲಿಂಗ ತಾರತಮ್ಯವಿಲ್ಲದೆ ಬದುಕುವಂತಹ ಅವಕಾಶ ಕಲ್ಪಿಸಿದ ಅಂಬೇಡ್ಕರ್ ಇಂದಿನ ಯುವಪೀಳಿಗೆಗೆ ಮಾದರಿ ಎಂದು ತುಮಕೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅಭಿಪ್ರಾಯಪಟ್ಟಿದ್ದಾರೆ.ತುಮಕೂರು ವಿವಿಯ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತುಮಕೂರು ಅವರು, ತುಮಕೂರು ವಿವಿಯ ವಿವಿಧ ವಿಭಾಗಗಳ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ “ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಓದು “ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಅಂಬೇಡ್ಕರ್ ಅವರನ್ನು ಯುವಜನರು ಓದುವುದರಿಂದ ಓರ್ವ ಜವಾಬ್ದಾರಿಯುತ ಪ್ರಜೆಯಾಗಿ ರೂಪಗೊಳ್ಳಲು ಸಹಕಾರಿಯಾಗುತ್ತದೆ. ಕಡು ಬಡತನ ಕುಟುಂಬದಲ್ಲಿ ಹುಟ್ಟಿದ ಅಂಬೇಡ್ಕರ್ ವಿದ್ಯಾರ್ಥಿ ದಿಸೆಯಲ್ಲಿಯೇ ಆದ ಹಲವು ಅಪಮಾನಗಳನ್ನು ಮೆಟ್ಟಿನಿಂತು ಈ ದೇಶದ ಎಲ್ಲ ಜನರಿಗೆ ಅಗತ್ಯವಾಗಿರುವ ಸಂವಿಧಾನವನ್ನು ರಚಿಸಿಕೊಟ್ಟರು. ಇದರ ಹಿಂದಿನ ಶಕ್ತಿ ಎಂದರೆ ಅವರಲ್ಲಿದ್ದ ಜ್ಞಾನ ನಿರಂತರವಾಗಿ ಪುಸ್ತಕಗಳನ್ನು ಓದುತ್ತಲೇ, ಅದರಲ್ಲಿ ಜ್ಞಾನವನ್ನು ತನ್ನಾಗಿಸಿಕೊಂಡು, ಬಡವರು, ದೀನದಲಿತರು, ಸಮಾಜದ ಎಲ್ಲ ಸ್ತರದ ಜನರು ಸಮಾನವಾಗಿ ಬದುಕಲು ಬೇಕಾದ ಹಕ್ಕು ಮತ್ತು ಕರ್ತವ್ಯಗಳನ್ನು ಸಂವಿಧಾನದಲ್ಲಿ ನೀಡಿದ್ದಾರೆ.
ಅವರು ಲಂಡನ್ನಿನಲ್ಲಿ ಓದುವಾಗ ತಮ್ಮ ಪತ್ನಿ ರಮಾಬಾಯಿ ಅವರಿಗೆ ಪತ್ರದಲ್ಲಿ ನೀಡಿರುವ ಸಂದೇಶ ಇಂದಿಗೂ ಅವಿಸ್ಮರಣಿಯ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹದೊಂದು ಕಾರ್ಯಕ್ರಮದ ಮೂಲಕ ಯುವಜನರ ಕಣ್ಣು ತೆರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರೊ.ವೆಂಕಟೇಶ್ವರಲು ಮೆಚ್ಚುಗೆ ವ್ಯಕ್ತಪಡಿಸಿದರು.ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಕೆಲವೇ ಜಾತಿಗೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಇಂತಹ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ಉದ್ದೇಶದಿಂದಲೇ ರಾಜ್ಯ ಸರ್ಕಾರ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ ಎಂದರು.ಭಾರತೀಯ ಪ್ರತಿ ಪ್ರಜೆಯ ಹುಟ್ಟಿನಿಂದ ಸಾಯುವವರೆಗೂ ಸಂವಿಧಾನ ಅವನ ಬೆನ್ನಿಗೆ ನಿಲ್ಲುತ್ತದೆ. ಪ್ರತಿ ಮಗುವಿನ ವಿದ್ಯಾಭ್ಯಾಸ, ಉದ್ಯೋಗ, ಘನತೆಯ ಜೀವನ, ಘನತೆಯಿಂದ ಅಂತ್ಯ ಸಂಸ್ಕಾರದ ವರೆಗೂ ಸಂವಿಧಾನದ ವಿವಿಧ ಕಲಂಗಳು ಕೆಲಸ ಮಾಡುತ್ತೇವೆ. ಒಂದು ಸಣ್ಣ ವಸ್ತುವಿಗೂ ವಿದೇಶಗಳ ಕಡೆಗೆ ನೋಡಬೇಕಾಗಿದ್ದ ಸ್ವಾತಂತ್ರ ಭಾರತ ಇಷ್ಟು ಅಭಿವೃದ್ಧಿಶೀಲ ರಾಷ್ಟ್ರವಾಗಲು ನಮ್ಮ ಸಂವಿಧಾನವೇ ಕಾರಣ. ಹಾಗಾಗಿ ಮತ್ತೆ ಮತ್ತೆ ನಾವು ಅಂಬೇಡ್ಕರ್ ಅವರನ್ನು ಓದುವ, ಅವರ ವಿಚಾರಧಾರೆಗಳಿಗೆ ಮುಖಾಮುಖಿಯಾಗುವ ಕೆಲಸವನ್ನು ಮಾಡುವ ಮೂಲಕ ಇಂದಿನ ಯುವಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರೊ.ರಮೇಶ್, ಕಳೆದ ಎಂಟು ವರ್ಷಗಳಿಂದ ಕರ್ನಾಟಕ ಸರ್ಕಾರ ಶಾಲಾ, ಕಾಲೇಜುಗಳ ಯುವಜನರಿಗೆ ಸಂವಿಧಾನದ ಮೂಲ ಆಶಯಗಳೇನು, ಸಮಾನತೆ, ಸಾಮಾಜಿಕ ನ್ಯಾಯ, ಭಾತೃತ್ವ ಎಂಬ ಅಂಶಗಳ ತಳಹದಿಯೆ ಮೇಲಿರುವ ಭಾರತದ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವೆನಿಸಿಕೊಂಡಿದೆ ಎಂದರು.
ವೇದಿಕೆಯಲ್ಲಿ ವಿಶೇಷ ಉಪನ್ಯಾಸಕರಾದ ಶಂಕರಾನಂದ್ ಎಂ.ಬಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಈಶ್ವರ್ ಮಿರ್ಜಿ, ಸಂಶೋಧಾನಾಧಿಕಾರಿ ಡಾ.ಲಕ್ಷ್ಮೀರಂಗಯ್ಯ, ಕಲಾಶ್ರೀ ಡಾ.ಲಕ್ಷ್ಮಣದಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕರಾದ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ರಸಪ್ರಶ್ನೆ, ಪ್ರಬಂಧ, ಆಶುಭಾಷಣ, ಕವನ ವಾಚನ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನಗರದ ರೆಡ್‌ಕ್ರಾಸ್ ಮಕ್ಕಳು ಸನ್ಞೆ ಭಾಷೆ ಮೂಲಕ ಸಂವಿಧಾನ ಮತ್ತು ಅಶಯಗಳನ್ನು ವಿವರಿಸಿದರು.