ಶಿರಹಟ್ಟಿ: ಕಾನೂನು ಮತ್ತು ಸಂವಿಧಾನ ಅಧಿಕಾರ ನೀಡಿದರೂ ಅದು ಇನ್ನೂ ಸಮಾನ ಮತ್ತು ಸಂಪೂರ್ಣವಾಗಿ ಎಲ್ಲರಿಗೂ ತಲುಪಿಲ್ಲ ಎಂದು ರಾಜ್ಯ ವಿಕೇಂದ್ರಿಕರಣ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ, ಮಾಜಿ ಶಾಸಕ ಡಿ.ಆರ್. ಪಾಟೀಲ ತಿಳಿಸಿದರು.ಶನಿವಾರ ಸಂಜೆ ಪಟ್ಟಣದ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ನಡೆದ ಶಿರಹಟ್ಟಿ ಪಟ್ಟಣ ಮತ್ತು ಗ್ರಾಮೀಣ ಭಾಗದ ಮಹಿಳೆಯರೊಂದಿಗೆ ಜನರ ಪಾಲ್ಗೊಳ್ಳುವಿಕೆಯಿಂದ ೨೦೨೭- ೨೮ನೇ ಸಾಲಿನ ಅರ್ಥಪೂರ್ಣವಾಗಿ ಜನಪರ ಯೋಜನೆಯನ್ನಾಗಿ ಮಾಡುವ ಕುರಿತು ಕರೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಗ್ರಾಮಗಳಲ್ಲಿ ಮತ್ತು ಪಟ್ಟಣಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಯೋಜನಾ ಪಟ್ಟಿಯನ್ನು ನಾವೇ ಸಿದ್ಧಪಡಿಸುವಂತಾಗಬೇಕು. ನಾವು ಸಿದ್ಧಪಡಿಸಿದ ಯೋಜನಾ ಪಟ್ಟಿಯನ್ನು ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರುವ ಕಾರ್ಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಾದ್ದಾಗಬೇಕು ಎಂದರು.ಗ್ರಾಮ ಮತ್ತು ವಾರ್ಡ್ ಸಭೆಗಳು ಸ್ಥಳೀಯ ಸರ್ಕಾರವಾಗಿ ಅರ್ಥಪೂರ್ಣ ಮತ್ತು ಪರಿಣಾಮಕಾರಿಯಾಗಿ ನಡೆಯಬೇಕು. ವಿಶೇಷವಾಗಿ ಇಂತಹ ಸಭೆಗಳಲ್ಲಿ ಮಹಿಳೆಯರು ಪೂರ್ಣಪ್ರಮಾಣದಲ್ಲಿ ಸೇರುವುದರೊಂದಿಗೆ ಸ್ಥಳೀಯವಾಗಿ ಮೂಲ ಸೌಲಭ್ಯಗಳ ಬಗ್ಗೆ ರಾಜ್ಯಕ್ಕೆ ಮಾದರಿಯಾಗುವ ಹಾಗೆ ಯೋಜನೆ ರೂಪಿಸಿ ನಮ್ಮ ಗಮನಕ್ಕೆ ತಂದಲ್ಲಿ ೨೦೨೭- ೨೮ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಅಳವಡಿಕೆಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.ಪ್ರತಿ ಗ್ರಾಮ ಸಭೆಗಳಲ್ಲಿ ಸ್ಥಳೀಯವಾಗಿ ಇರುವ ಸಮಸ್ಯೆಗಳ ಬಗ್ಗೆ ಚಿಂತಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂಬುವುದರ ಬಗ್ಗೆ ಕುಲಂಕುಷವಾಗಿ ಚರ್ಚೆಯಾಗಬೇಕು. ಸಂವಿಧಾನ ಮತ್ತು ಕಾನೂನಿನಲ್ಲಿರುವ ಅಧಿಕಾರ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮಾತ್ರ ಹಸ್ತಾಂತರವಾಗಿದೆ ಹೊರತು ಜನಸಾಮಾನ್ಯರಿಗೆ ಪೂರ್ಣಪ್ರಮಾಣದ ಅಧಿಕಾರ ಹಸ್ತಾಂತರವಾಗಿಲ್ಲ. ಮುಂದೆ ಹೀಗಾಗಬಾರದು ಎಂಬ ದೃಷ್ಟಿಯಿಂದ ಮುಂಬರುವ ರಾಜ್ಯ ೨೦೨೭- ೨೮ರ ಯೋಜನೆ ಜನರ ಯೋಜನೆಯನ್ನಾಗಿ ರೂಪಿಸಲು ಮುಖ್ಯಮಂತ್ರಿಗಳು ಸಿದ್ಧರಿದ್ದಾರೆ ಎಂದರು.ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಸವಿತಾ ತಾಂಬ್ರೆ, ಸಿಡಿಪಿಒ ಮೃತ್ಯುಂಜಯ ಗುಡ್ಡದಾನವೇರಿ, ತಾಪಂ ಯೋಜನಾಧಿಕಾರಿ ಎಚ್.ಎ. ಕೊಂಡಿಕೊಪ್ಪ, ಪಪಂ ಮಾಜಿ ಅಧ್ಯಕ್ಷ ಹುಮಾಯೂನ ಮಾಗಡಿ, ಪರಮೇಶ ಪರಬ, ಬುಡನಶ್ಯಾ ಮಕಾಂದಾರ, ಎಂ.ಕೆ. ಲಮಾಣಿ, ಗುರಣ್ಣ ಬಳಿಗೇರ, ವೀರಯ್ಯ ಮಠಪತಿ, ಅಜ್ಜು ಪಾಟೀಲ, ನಂದಕ್ಕ ಪಲ್ಲೇದ, ಸಿ.ಕೆ. ಮುಳಗುಂದ, ಸಲ್ಮಾನ ಕುಂದರಗಿ, ರಾಮಣ್ಣ ಶೆಲ್ಯಪ್ಪನವರ ಹಾಗೂ ಶಿರಹಟ್ಟಿ ಪಟ್ಟಣ ಮತ್ತು ಗ್ರಾಮೀಣ ಭಾಗದಿಂದ ಆಗಮಿಸಿದ್ದ ಮಹಿಳೆಯರು ಇದ್ದರು.ಸರ್ವರಿಗೂ ತಲುಪದ ಸಂವಿಧಾನದ ಅಧಿಕಾರ: ಮಾಜಿ ಶಾಸಕ ಡಿ.ಆರ್. ಪಾಟೀಲ
ನಮ್ಮ ಗ್ರಾಮಗಳಲ್ಲಿ ಮತ್ತು ಪಟ್ಟಣಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಯೋಜನಾ ಪಟ್ಟಿಯನ್ನು ನಾವೇ ಸಿದ್ಧಪಡಿಸುವಂತಾಗಬೇಕು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.