ಸಾರಾಂಶ
ಹುಬ್ಬಳ್ಳಿ:
ರಾಜ್ಯದಲ್ಲಿ ಮೊದಲ ಬಾರಿಗೆ ಕಟ್ಟಡ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಡಲು ತೀರ್ಮಾನಿಸಲಾಗಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.ಇಲ್ಲಿನ ಗೋಕುಲ ಗಾರ್ಡನ್‌ನಲ್ಲಿ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾಡಳಿತ ಶನಿವಾರ ಆಯೋಜಿಸಿದ್ದ ಜಿಲ್ಲೆಯ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಟೂಲ್ಸ್ ಕಿಟ್ ವಿತರಣೆ, ಧನ ಸಹಾಯದ ಚೆಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರ ಮನೆ ನಿರ್ಮಾಣಕ್ಕೆ ಭೂಮಿ ಗುರುತಿಸಲಾಗಿದೆ. 7 ಎಕರೆ ಪ್ರದೇಶದಲ್ಲಿ 2500ಕ್ಕೂ ಹೆಚ್ಚು ಮನೆ ನಿರ್ಮಿಸಿ, ಕಟ್ಟಡ ಕಾರ್ಮಿಕರಿಗೆ ಹಸ್ತಾಂತರ ಮಾಡಲಾಗುವುದು. ಮೊದಲಿಗೆ ಹುಬ್ಬಳ್ಳಿಯಲ್ಲೇ ಮಾಡಲಾಗುವುದು ನಂತರ ಬೇರೆ ಜಿಲ್ಲೆಗಳಲ್ಲೂ ಮಾಡಲಾಗುವುದು ಎಂದರು.ದೇಶದಲ್ಲಿ ಶೇ. 92ರಷ್ಟು ಅಸಂಘಟಿತ ಕಾರ್ಮಿಕರಿದ್ದಾರೆ. ರಾಜ್ಯದಲ್ಲಿ 82ರಿಂದ 85ರಷ್ಟು ಅಸಂಘಟಿತ ಕಾರ್ಮಿಕರಿದ್ದಾರೆ. ಅದರಲ್ಲಿ 25 ವರ್ಗಗಳ ಅಸಂಘಟಿತ ವಲಯ ಗುರುತಿಸಲಾಗಿದೆ. ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯ ಒದಗಿಸಲಾಗುತ್ತಿದೆ. 35 ಲಕ್ಷ ಅಸಂಘಟಿತ ಕಾರ್ಮಿಕರನ್ನು ಗುರುತಿಸಲಾಗಿದೆ. ಗಿಗ್ ಕಾರ್ಮಿಕರಿಗೆ ಸರ್ಕಾರದ ಸವಲತ್ತು ಒದಗಿಸಲಾಗುವುದು. ಕಟ್ಟಡ ನಿರ್ಮಾಣ ಕಾರ್ಮಿಕರ ಮಂಡಳಿ ₹10 ಸಾವಿರ ಕೋಟಿ ತೆರಿಗೆ ಮೂಲಕ ಸಂಗ್ರಹಿಸುತ್ತಿದೆ. ತೆರಿಗೆ ಸಂಗ್ರಹವನ್ನು ಹೆಚ್ಚಳ ಮಾಡಲು ಕ್ರಮ ವಹಿಸಲಾಗುತ್ತದೆ ಎಂದರು.
ನವೀಕರಣ ಮಾಡಿಕೊಳ್ಳಿ:ರಾಜ್ಯದಲ್ಲಿರುವ 56 ಲಕ್ಷ ಕಾರ್ಮಿಕ ಕಾರ್ಡ್‌ಗಳಲ್ಲಿ 20 ಲಕ್ಷ ನಕಲಿ ಕಾರ್ಡ್‌ಗಳಿವೆ. ಹೀಗಾಗಿ 20 ಲಕ್ಷ ಕಾರ್ಡ್ ರದ್ದುಪಡಿಸಲಾಗಿದೆ. ಒಂದು ವೇಳೆ ಅರ್ಹರ ಕಾರ್ಡ್ ರದ್ದಾಗಿದ್ದರೆ ಮರಳಿ ಕಾರ್ಡ್ ನೀಡಲಾಗುವುದು. 43 ವಲಯಗಳಲ್ಲಿ ಕಾರ್ಮಿಕರ ವಾಹನ ತೆರಳಿ ಪರಿಶೀಲನೆ ನಡೆಸಿ, ಅರ್ಹರಿಗೆ ಕಾರ್ಡ್ ವಿತರಿಸಲಾಗುವುದು. ಕಾರ್ಮಿಕರನ್ನು ಜಿಐಎಸ್ ಮೂಲಕ ಮ್ಯಾಪಿಂಗ್ ಮಾಡಲಾಗುವುದು ಎಂದು ಲಾಡ್ ತಿಳಿಸಿದರು.
ಸೊಸೈಟಿ ರಚನೆ:ವಿವಿಧ ಇಲಾಖೆಗಳಲ್ಲಿ ಸಾವಿರಾರು ಜನರು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಏಜೆನ್ಸಿ ಕಂಪನಿಗಳು ನಿಗದಿತ ಅವಧಿಯಲ್ಲಿ ಸಂಬಳ ನೀಡುವಲ್ಲಿ ವಿಳಂಬ ಮಾಡುತ್ತವೆ. ಹೀಗಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸೊಸೈಟಿ ರಚನೆ ಮಾಡಲಾಗುವುದು. ಪ್ರಾಯೋಗಿಕವಾಗಿ 3 ಜಿಲ್ಲೆಗಳಲ್ಲಿ ರಚನೆ ಮಾಡಿ, ನಂತರ ಉಳಿದ ಜಿಲ್ಲೆಗಳಲ್ಲಿ ಸೊಸೈಟಿ ರಚಿಸಲಾಗುವುದು ಎಂದರು.ಜಿಲ್ಲಾಧಿಕಾರಿ ದಿವ್ಯಪ್ರಭು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಜಂಟಿ ನಿರ್ದೇಶಕ ಸಂಗಪ್ಪ ಉಪಾಸೆ ಪ್ರಾಸ್ತಾವಿಕ ಮಾತನಾಡಿದರು.
ಈ ವೇಳೆ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಸ್.ಆರ್. ಪಾಟೀಲ, ಎಸ್ಪಿ ಡಾ. ಗೋಪಾಲ್ ಬ್ಯಾಕೋಡ, ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತೆ ಶ್ವೇತಾ ಎಸ್, ಕಾರ್ಮಿಕ ಅಧಿಕಾರಿಗಳಾದ ಮಾರಿಕಾಂಬಾ ಹುಲಕೋಟಿ, ಅಶೋಕ ಒಡೆಯರ, ಭುವನೇಶ್ವರಿ ಕೋಟಿಮಠ, ರಜನಿ ಹಿರೇಮಠ, ಅಕ್ರಂ ಅಲ್ಲಾಪೂರ, ಸಂಗೀತಾ ಬೆನಕನಕೊಪ್ಪ, ಮೀನಾಕ್ಷಿ ಶಿಂದಿಹಟ್ಟಿ, ಲತಾ ಟಿ.ಎಸ್. ಸೇರಿದಂತೆ ಹಲವರಿದ್ದರು.ಯಾವ ಥರ್ಟಿ ಬಗ್ಗೆ ಮಾತಾಡಕತ್ತಿ?:
ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡುತ್ತಿದ್ದ ವೇಳೆ ಪ್ರೇಕ್ಷಕನೋರ್ವ ಥರ್ಟಿ ಎಂದು ನುಡಿದ. ಇದನ್ನು ಕೇಳುತ್ತಿದ್ದಂತೆ ಸಚಿವ ಲಾಡ್, ಯಾರದು ಥರ್ಟಿ ಎಂದು ಹೇಳಿದ್ದು. ನೀನು ಯಾವ ಥರ್ಟಿ ಬಗ್ಗೆ ಮಾತಾಡಕತ್ತಿ. ಥರ್ಟಿ... ಸಿಕ್ಸ್ಟಿ... ನೈಂಟಿ.. ಯಾವುದು ಅದರಲ್ಲಿ ಎಂದು ಲಾಡ್ ಪ್ರಶ್ನಿಸಿದರು. ಗ್ಯಾರಂಟಿಗಾಗಿ ರಾಜ್ಯ ಸರ್ಕಾರ ವರ್ಷಕ್ಕೆ ₹ 60 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಬಡವರಿಗೆ ಅನುಕೂಲ ಆಗಲಿ ಎಂದು ಗ್ಯಾರಂಟಿ ಜಾರಿಗೆ ತಂದಿದ್ದೇವೆ. ದೇಶದಲ್ಲಿ ಎಲ್ಲಿಯೂ ಇಂತಹ ಕಾರ್ಯಕ್ರಮವಿಲ್ಲ. 5 ವರ್ಷಕ್ಕೆ ₹3 ಲಕ್ಷ ಕೋಟಿ ಖರ್ಚು ಮಾಡುತ್ತಿದ್ದೇವೆ ಎಂದರು.ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮಾಡಿದ್ದೇವೆ. ಏನಪ್ಪಾ ನಿನ್ನ ಹೆಂಡತಿಗೆ ಬಸ್ ಫ್ರೀ ಇದೆಯಲ್ವಾ?. ನೀವು ಏನಾದರೂ ತೊಂದರೆ ಕೊಟ್ಟರೆ, ನಿಮ್ಮ ಹೆಂಡತಿ ಬಸ್ ಹತ್ತಿ ತವರು ಮನೆಗೆ ಹೋಗಿ ಬಿಡುತ್ತಾಳೆ ಹುಷಾರು?. ನೀನು ನಡೆದುಕೊಂಡು ಹೋಗುವ ಪರಿಸ್ಥಿತಿ ಬರುತ್ತದೆ ನೋಡು ಎಂದು ನಗೆಚಟಾಕಿ ಸಿಡಿಸಿದರು. ಈ ವೇಳೆ ಗಂಡಸರಿಗೂ ಉಚಿತ ಬಸ್ ಪ್ರಯಾಣ ಕೊಡುವಂತೆ ಕಾರ್ಯಕ್ರಮದಲ್ಲಿದ್ದ ಕಾರ್ಮಿಕರು ಕೇಳುತ್ತಿದ್ದಂತೆ. ಈಗ ಅದೆಲ್ಲ ಬೇಡ ಬರುವ ವರ್ಷ ಪುರುಷರಿಗೂ ಉಚಿತ ಪ್ರಯಾಣದ ವಿಚಾರ ಮಾಡೋಣ ಸುಮ್ನಿರು ಎಂದರು.