ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರಿಂದ ಅನಿರ್ದಿಷ್ಟಾವಧಿ ಧರಣಿ ಆರಂಭ

| Published : Dec 08 2024, 01:16 AM IST

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರಿಂದ ಅನಿರ್ದಿಷ್ಟಾವಧಿ ಧರಣಿ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಅನುಷ್ಠಾನ, ಬೆಳೆವಿಮೆ, ಬೆಳೆ ನಷ್ಟ ಪರಿಹಾರ ಹಾಗೂ ನಬಾರ್ಡ ಸಾಲ ಮುಂದುವರಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು ರೈತರು ಶನಿವಾರ ಅಹೋರಾತ್ರಿ ಹೋರಾಟ ಆರಂಭಿಸಿದರು.

ಹಾವೇರಿ: ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಅನುಷ್ಠಾನ, ಬೆಳೆವಿಮೆ, ಬೆಳೆ ನಷ್ಟ ಪರಿಹಾರ ಹಾಗೂ ನಬಾರ್ಡ ಸಾಲ ಮುಂದುವರಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು ರೈತರು ಶನಿವಾರ ಅಹೋರಾತ್ರಿ ಹೋರಾಟ ಆರಂಭಿಸಿದರು. ಜಿಲ್ಲಾಡಳಿತ ಭವನದ ಎದುರು ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿರುವ ರೈತರು, ಸರ್ಕಾರಗಳ ರೈತ ವಿರೋಧಿ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಮಟೆ ಬಾರಿಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು. ಸ್ಥಳದಲ್ಲಿಯೇ ಅಡುಗೆ ಸಿದ್ಧಪಡಿಸಿ ಊಟ ಮಾಡಿದರು. ರಾತ್ರಿಯೂ ಅಲ್ಲಿಯೇ ಭಜನೆ ಮಾಡುತ್ತ ಪ್ರತಿಭಟನೆ ಮುಂದುವರಿಸಿದರು.

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಜಿಲ್ಲೆಯ ರೈತರಿಗೆ ಬೆಳೆ ವಿಮೆ ಪರಿಹಾರ ನೀಡುವಲ್ಲಿ ತಾರತಮ್ಯ ಆಗಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟ ಎದುರಿಸುವಂತಾಗಿದೆ. ಬೆಳೆವಿಮೆ ಹಣ ಹಾಕದೇ ಬೆಳೆವಿಮೆ ಕಂಪನಿಯವರು ರೈತರಿಗೆ ಅನ್ಯಾಯ ಮಾಡಿದ್ದು, ಕೂಡಲೇ ಜಿಲ್ಲಾಡಳಿತ ಬೆಳೆ ವಿಮೆ ತುಂಬಿಸಿಕೊಂಡ ಕಂಪನಿಯವರನ್ನು ಕರೆಸಿ ಲೆಕ್ಕಾಚಾರ ಮಾಡಿಸಿ, ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.ಅಲ್ಲದೇ ಇದುವರೆಗೂ ಜಿಲ್ಲೆಯ ಒಟ್ಟು ೭೬ ಸಾವಿರ ರೈತರು ಅತಿವೃಷ್ಟಿ, ಅನಾವೃಷ್ಟಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಪರಿಹಾರ ಕೊಡುತ್ತೇವೆ ಎನ್ನುತ್ತಾರೆಯೇ ಹೊರತು ನೀಡುತ್ತಿಲ್ಲ. ೨೦೨೩ ಸೆಪ್ಟೆಂಬರ್ ನಂತರದ ಅವಧಿಯಲ್ಲಿ ಕೊಳವೆ ಬಾವಿ ಕೊರೆಸಿದ ಯಾವುದೇ ರೈತರಿಗೆ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕೊಟ್ಟಿಲ್ಲ. ಇದರಿಂದ ರೈತರಿಗೆ ಹಲವಾರು ತೊದರೆಗಳಾಗುತ್ತಿವೆ. ಟ್ರಾನ್ಸಫಾರ್ಮರ ಸುಡುತ್ತಿವೆ. ದಿನನಿತ್ಯ ನೀರಿನ ಕೊರತೆ, ವಿದ್ಯುತ್ ಸಮಸ್ಯೆಯಿಂದ ಬೆಳೆಗಳು ಹಾಳಾಗುತ್ತಿವೆ ಎಂದು ದೂರಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಮಾಜಿ ಪ್ರಧಾನಿ ವಾಜಪೇಯಿ ರೂಪಿಸಿದರು. ನಂತರ ಮೋದಿ ಅವರು ಅನುಷ್ಠಾನದ ಭರವಸೆ ನೀಡಿದ್ದರೂ ಇದುವರೆಗೂ ಈಡೇರಿಲ್ಲ. ಇದು ನಮ್ಮ ಪ್ರಮುಖ ಬೇಡಿಕೆಯಾಗಿದ್ದು ಇದರಿಂದ ಹಾವೇರಿ ಜಿಲ್ಲೆಯಲ್ಲಿ ವರ್ಷವಿಡೀ ನೀರಾವರಿ ಮಾಡಬಹುದಾಗಿದೆ. ಇದರ ಕುರಿತು ಹಂತ ಹಂತವಾಗಿ ಹೋರಾಟ ಮುಂದುವರೆಯಲಿದೆ. ನೀರಾವರಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುವ ಕ್ರಮದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.೧೯೮೨ರಲ್ಲಿ ರೈತರಿಗೆ ಅನುಕೂಲವಾಗುವಂತೆ ರೂಪಿಸಿದ ನಬಾರ್ಡ್‌ ಯೋಜನೆಯ ಮೊತ್ತವನ್ನು ಈ ಬಾರಿ ಕೇಂದ್ರ ಸರ್ಕಾರವು ಶೇ.೪೨ರಷ್ಟು ಕಡಿತ ಮಾಡಿದ್ದು ಇದು ರೈತ ವಲಯಕ್ಕೆ ನುಂಗಲಾಗದ ತುತ್ತಾಗಿದೆ. ಈಗಾಗಲೇ ನಿರಂತರವಾಗಿ ಬರ ಇಲ್ಲವೇ ಅತಿವೃಷ್ಠಿಗೆ ಸಿಲುಕಿ ಭವಿಷ್ಯದ ಬಗ್ಗೆ ಆತಂಕಕ್ಕೆ ಸಿಲುಕಿದ್ದೇವೆ. ನೈಜವಾಗಿ ಈ ಮೊತ್ತವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಬೇಕಿತ್ತು, ಆದರೆ ಅದನ್ನು ಕಡಿತ ಮಾಡಿದ್ದು ಕೂಡಲೇ ಸರಿಪಡಿಸಿ ಮೊದಲಿನಂತೆ ಮೊತ್ತ ನಿಗದಿ ಮಾಡಿ ನೀಡಬೇಕು. ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಸ್ಥಾಪನೆ ನಮ್ಮ ಆದ್ಯತೆ ಆಗಿದ್ದು, ಅದಕ್ಕೆ ಇರುವ ಎಲ್ಲಾ ತೊಂದರೆಗಳನ್ನು ನಿವಾರಿಸಿ ಶೀಘ್ರವೇ ಜಿಲ್ಲೆಗೆ ಡಿಸಿಸಿ ಬ್ಯಾಂಕ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು. ಈ ವೇಳೆ ಅವರು ಮಾತನಾಡಿ, ಚುನಾವಣಾ ಒತ್ತಡದ ಹಿನ್ನೆಲೆಯಲ್ಲಿ ಬೆಳೆವಿಮೆ, ಬೆಳೆ ಹಾನಿ ಪರಿಹಾರ ನೀಡುವಲ್ಲಿ ವಿಳಂಬವಾಗಿದೆ. ಜಿಲ್ಲೆಯ ರೈತರಿಗೆ ಅನ್ಯಾಯವಾಗದಂತೆ ಪ್ರಾಮಾಣಿಕವಾಗಿ ನ್ಯಾಯಕೊಡಿಸುತ್ತೇನೆ ಎಂದು ರೈತ ಮುಖಂಡರಿಗೆ ಭರವಸೆ ನೀಡಿದರು. ಆಗ ರೈತ ಮುಖಂಡರು ಮಾತನಾಡಿ, ವಿಮೆ ತುಂಬಿಸಿಕೊಂಡ ಕಂಪನಿಯವರನ್ನು ಕರೆಸಿ ಮಾತನಾಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅಡಿವೆಪ್ಪ ಆಲದಕಟ್ಟಿ, ಎಚ್.ಎಚ್. ಮುಲ್ಲಾ, ಶಂಕ್ರಪ್ಪ ಶಿರಗಂಬಿ, ಮಲ್ಲನಗೌಡ ಮಾಳಗಿ, ರುದ್ರನಗೌಡ ಕಾಡನಗೌಡ್ರ, ಕೆ.ವಿ.ದೊಡ್ಡಗೌಡ್ರ, ಪ್ರಭುಗೌಡ ಪ್ಯಾಟಿ, ಶಾಂತನಗೌಡ ಪಾಟೀಲ, ಗಂಗನಗೌಡ ಮುದಿಗೌಡ್ರ, ರುದ್ರಪ್ಪ ಹಣ್ಣಿ, ಸುರೇಶ ಚಲವಾದಿ, ಶಿವಯೋಗಿ ಹೊಸಗೌಡ್ರ, ಮರಿಗೌಡ ಪಾಟೀಲ ಸೇರಿದಂತೆ ಇತರರು ಇದ್ದರು. ಬರ ಪರಿಹಾರ ಹಂಚಿಕೆ ತಾರತಮ್ಯ ಸರಿಪಡಿಸಿ: ಬರ ಪರಿಹಾರ ಹಂಚಿಕೆಯಲ್ಲಿ ಜಿಲ್ಲೆಯ ರೈತರಿಗೆ ತಾರತಮ್ಯವಾಗಿದೆ. ಜಿಲ್ಲೆಗೆ ಒಟ್ಟು ₹ ೭.೪೬ಕೋಟಿ ಬಂದಿದ್ದು, ಕೆಲವೇ ರೈತರಿಗೆ ಮಾತ್ರ ನೀಡಿದ್ದಾರೆ. ಈ ಕುರಿತು ಅರ್ಜಿ ಕೊಟ್ಟ ಒತ್ತಾಯಿಸಿದ ನಂತರ ಈಗ ಹಾಕುತ್ತೇವೆ, ಎರಡು ದಿನದಲ್ಲಿ ಬರುತ್ತದೆ ಎಂದು ಸಬೂಬು ಹೇಳುತ್ತ ಕಾಲ ಕಳೆಯುತ್ತಿದ್ದಾರೆ. ಇದುವರೆಗೂ ೬೯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾತ್ರ ಹಣ ಸಂದಾಯವಾಗಿದ್ದು ಬಾಕಿ ೩೩ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ಬರ ಪರಿಹಾರ ಬಂದಿಲ್ಲ ಎಂದು ಮಲ್ಲಿಕಾರ್ಜುನ ಬಳ್ಳಾರಿ ದೂರಿದರು.