ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಡಾ.ಬಿ.ಆರ್.ಅಂಬೇಡ್ಕರ್ ದೇಶದ ಸಮಸ್ತ ಶೋಷಿತ ಸಮುದಾಯಗಳ ಶಕ್ತಿ ಹಾಗೂ ಸಮಾನತೆಯ ಸಂಕೇತ ಎಂದು ಪಾಂಡವಪುರ ಉಪ ವಿಭಾಗಧಿಕಾರಿ ಡಾ.ಶ್ರೀನಿವಾಸ್ ಬಣ್ಣಿಸಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ದಿನದಲ್ಲಿ ಮಾತನಾಡಿ, ಸಾಕಷ್ಟು ನೊಂದಿದ್ದ ಅಂಬೇಡ್ಕರ್ ಪುಸ್ತಕ ಪ್ರೇಮಿಯಾಗಿದ್ದರು. ಜ್ಞಾನದ ಬಲದಿಂದ ಸಮಾಜದ ಅಂತರಂಗವನ್ನು ಅರಿತು ಸಾಮಾಜಿಕ ಅಸಮಾನತೆ ಮತ್ತು ಶೋಷಣೆಗಳ ವಿರುದ್ಧ ಸಿಡಿದು ನಿಂತರು ಎಂದರು.
ಯುವಕರು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು. ಶೈಕ್ಷಣಿಕವಾಗಿ ನಾವು ಪ್ರಬಲರಾದಾಗ ಮಾತ್ರ ಶೋಷಣೆ ಮತ್ತು ಅಸಮಾನತೆಯಿಂದ ಬಿಡುಗಡೆಯಾಗಲು ಸಾಧ್ಯ. ಸಮಾಜದ ಸವಲತ್ತುಗಳನ್ನು ಪಡೆದು ಮುಂದುವರಿದ ವ್ಯಕ್ತಿಗಳು ತಮ್ಮ ತಮ್ಮ ಸಮುದಾಯಗಳ ಹಿಂದುಳಿದವರನ್ನು ಗುರುತಿಸಿ ಅವರನ್ನು ಸಮಾಜದ ಮುನ್ನೆಲೆಗೆ ತರುವ ಕೆಲಸ ಮಾಡಬೇಕೆಂದರು.ಸರ್ವ ಸಮಾನ ಶಿಕ್ಷಣ ಎಲ್ಲರಿಗೂ ಸಿಗಬೇಕಾದರೆ ಜನ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ತ್ಯಜಿಸಬೇಕು. ಸರ್ಕಾರಿ ಶಾಲೆಯಲ್ಲಿಯೇ ನಮ್ಮ ಮಕ್ಕಳು ಕಲಿಯುವಂತಾಗಬೇಕು. ಸರ್ಕಾರಿ ನೌಕರರು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ವ್ಯವಸ್ಥೆ ರೂಪುಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಮಾತನಾಡಿ, ಅಂಬೇಡ್ಕರ್ ರೂಪಿಸಿದ ಸಂವಿಧಾನ ದೇಶದ ಅತ್ಮಶಕ್ತಿ. ಸಂವಿಧಾನದ ಮೂಲಕ ದೇಶದ ದಮನಿತರಿಗೆ ಶಕ್ತಿ ನೀಡಿದರು ಎಂದರು.ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾಪಂ ಇಒ ಸುಷ್ಮಾ, ಪುರಸಭೆ ಮುಖ್ಯಾಧಿಕಾರಿ ನಟರಾಜು, ಸಮಾಜ ಕಲ್ಯಾಣ ಅಧಿಕಾರಿ ದಿವಾಕರ್, ಸಿಡಿಪಿಒ ಅರುಣಕುಮಾರ್, ಟಿ.ಎಚ್.ಒ ಡಾ.ಅಜಿತ್ ಸೇರಿ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಮುಖಂಡರಾದ ಜಿಪಂ ಮಾಜಿ ಸದಸ್ಯ ರಾಮದಾಸ್, ಪುರಸಭಾ ಸದಸ್ಯ ಡಿ.ಪ್ರೇಂಕುಮಾರ್, ನಿವೃತ್ತ ಪ್ರಾಂಶುಪಾಲ ರಾಜಯ್ಯ, ಬಂಡೀಹೊಳೆ ರಮೇಶ್, ಮಾಂಬಳ್ಳಿ ಜಯರಾಂ, ಪೌರ ಕಾರ್ಮಿಕರ ಮುಖಂಡ ಬನ್ನಾರಿ, ಶಿವಣ್ಣ ಸೇರಿದಂತೆ ಹಲವರಿದ್ದರು.