ಸಾರಾಂಶ
ಓರವಿಲ್ಲ ಫರ್ನಾಂಡಿಸ್
ಹಳಿಯಾಳ: ಹಳಿಯಾಳ ಅರಣ್ಯ ವಿಭಾಗದಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿಗೆ ತತ್ವಾರ ಕಂಡುಬಂದಿದ್ದು, ಅರಣ್ಯ ಇಲಾಖೆಯು ನೀರಿನ ತೊಟ್ಟಿಗಳ ನಿರ್ಮಾಣ ಮಾಡಿ ಟ್ಯಾಂಕರ್ ನೀರು ಪೂರೈಸಿ ಕಾಡುಪ್ರಾಣಿಗಳ ದಾಹ ನೀಗುತ್ತಿದೆ.ಈ ಬಾರಿ ಮಳೆಯ ಅಭಾವದಿಂದ ಬರದಿಂದಾಗಿ ಅರಣ್ಯದಲ್ಲಿರುವ ನೈಸರ್ಗಿಕ ನೀರಿನ ಮೂಲಗಳು ಸಂಪೂರ್ಣವಾಗಿ ಬತ್ತಿವೆ. ಹೀಗಾಗಿ ಕಾಡಿನಲ್ಲಿ ನೀರಿನ ಅಭಾವ ತೀವ್ರವಾಗಿದೆ. ವನ್ಯಜೀವಿಗಳು ಜಲಕ್ಷಾಮದಿಂದ ಬಳಲುತ್ತಿವೆ. ಹಲವೆಡೆ ವನ್ಯಜೀವಿಗಳು ದಾಹ ತಣಿಸಲು ನಾಡಿನತ್ತ ಮುಖ ಮಾಡುತ್ತಿವೆ. ಕಾಡಿನಲ್ಲಿ ಕೃತಕ ನೀರಿನ ತೊಟ್ಟಿಗಳನ್ನು ನಿರ್ಮಿಸಿ ವನ್ಯಜೀವಿಗಳಿಗೆ ನೀರುಣಿಸುವ ಜಲ ಕಾಯಕವನ್ನು ಹಳಿಯಾಳ ಅರಣ್ಯ ವಿಭಾಗ ಆರಂಭಿಸಿದ್ದು, ಈಗಾಗಲೇ 42ಕ್ಕೂ ಹೆಚ್ಚು ತೊಟ್ಟಿಗಳು ನಿರ್ಮಾಣಗೊಂಡಿವೆ.
ನೀರಿನ ತೊಟ್ಟಿಗಳು ಎಲ್ಲೆಲ್ಲಿ?: ತಾಲೂಕಿನಲ್ಲಿನ ಬಹುತೇಕ ದೊಡ್ಡ ಕೆರೆಗಳು ಬತ್ತಿವೆ. ಅರಣ್ಯ ಪ್ರದೇಶದಲ್ಲಿನ ಹಳ್ಳ, ತೊರೆ, ಝರಿಗಳು ಸಂಪೂರ್ಣವಾಗಿ ನೀರಿಲ್ಲದೇ ಭಣಗುಡುತ್ತಿವೆ. ಹೀಗೆ ಬತ್ತಿರುವ ನೀರಿನ ಸೆಲೆಗಳನ್ನು ಇಲಾಖೆಯು ಸಮೀಕ್ಷೆ ಮಾಡಿದೆ. ವನ್ಯಜೀವಿಗಳ ನಡೆದಾಡಿದ ಹೆಜ್ಜೆ, ಕೊಂಬುಗಳನ್ನು ನೆಲಕ್ಕೆ ಉಜ್ಜಿದ ಗುರುತುಗಳನ್ನು ಆಧರಿಸಿ ವನ್ಯಜೀವಿಗಳು ಹೆಚ್ಚಾಗಿ ನೀರು ಕುಡಿಯಲು ಎಲ್ಲಿ ಬರುತ್ತವೆ ಎಂಬುದನ್ನು ಪತ್ತೆ ಹಚ್ಚಿ, ಅಂತಹ ಸ್ಥಳದಲ್ಲೇ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗುತ್ತದೆ. ವನ್ಯಜೀವಿಗಳಗೆ ನೀರಿನ ದಾಹ ತಣಿಸಲು ಸುರಕ್ಷಿತವಾಗುವ ವಿನ್ಯಾಸದಲ್ಲಿ ಈ ತೊಟ್ಟಿಗಳನ್ನು ನಿರ್ಮಿಸಲಾಗುತ್ತಿದೆ.42ಕ್ಕೂ ಹೆಚ್ಚು ತೊಟ್ಟಿ: ಹಳಿಯಾಳ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಮುರ್ಕವಾಡ, ಜಾವಳ್ಳಿ ಸೇರಿದಂತೆ 14 ಕಡೆ, ಸಾಂಬ್ರಾಣಿ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಹೊಸೂರ, ಸಾಂಬ್ರಾಣಿ, ಗರಡೊಳ್ಳಿ, ಮಾಲವಾಡ, ಬಾಳಶೆಟ್ಟಿಕೊಪ್ಪ ಸೇರಿದಂತೆ 18 ಕಡೆ ಹಾಗೂ ಭಾಗವತಿ ಅರಣ್ಯ ವಲಯದಲ್ಲಿ ತಟ್ಟಿಗರಾ ಸೇರಿದಂತೆ 10 ಸ್ಥಳಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ. ಕನಿಷ್ಠ ಹತ್ತು ದಿನಗಳಿಗೊಮ್ಮೆ ಟ್ಯಾಂಕರ್ ಮೂಲಕ ನೀರನ್ನು ತುಂಬಿಸಲಾಗುತ್ತಿದೆ. ತೊಟ್ಟಿ ನಿರ್ಮಾಣ ಮಾಡಲು ಮೇಲಧಿಕಾರಿಗಳು ಪರವಾನಗಿ ನೀಡಿದ್ದಾರೆ. ಮುಂದೆ ಈ ತೊಟ್ಟಿ ನಿರ್ಮಾಣಕ್ಕಾಗಿ ಅನುದಾನ ಮಂಜೂರಾಗಲಿದೆ. ಸದ್ಯಕ್ಕೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವಂತ ಖರ್ಚಿನಲ್ಲಿ ತೊಟ್ಟಿಯನ್ನು ನಿರ್ಮಿಸಿ ವನ್ಯಜೀವಿಗಳತ್ತ ಕಾಳಜಿಯನ್ನು ತೋರುತ್ತಿದ್ದಾರೆ.
ಸಾರ್ವಜನಿಕರೇ ಕೈಜೋಡಿಸಿ: ಹಳಿಯಾಳ ಅರಣ್ಯ ವಿಭಾಗದಲ್ಲಿ ಕೆಲವೇ ಆಯ್ದ ಅರಣ್ಯ ಪ್ರದೇಶದಲ್ಲಿ ಮೂರ್ನಾಲ್ಕು ವರ್ಷಗಳ ಹಿಂದೆಯೇ ನೀರಿನ ತೊಟ್ಟಿ ನಿರ್ಮಿಸಿ ವನ್ಯಜೀವಿಗಳಿಗೆ ಜೀವಜಲವನ್ನು ಪೂರೈಸಲಾಗುತ್ತಿತ್ತು. ಆದರೆ ಈ ಬಾರಿ ತಾಲೂಕಿನಾದ್ಯಂತ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಪ್ರತಿ ಬೇಸಿಗೆಯ ಆರಂಭದಲ್ಲಿ ಅರಣ್ಯದಲ್ಲಿರುವ ತೊಟ್ಟಿಗಳನ್ನು ಶುಚಿಯಾಗಿಸಿ ನೀರನ್ನು ತುಂಬಿಸುವ ಕಾರ್ಯವನ್ನು ಅರಣ್ಯ ಇಲಾಖೆಯು ಅತಿ ನಿಷ್ಠೆಯಿಂದ ಮಾಡುತ್ತಿದೆ. ಇಲಾಖೆ ಕೈಗೊಂಡಿರುವ ಈ ಜಲಕಾಯಕದ ಸೇವೆಗೆ ಸಾರ್ವಜನಿಕರು ಕೈಜೋಡಿಸಬೇಕು, ಅರಣ್ಯದಂಚಿನ ಭಾಗದಲ್ಲಿ ಹೊಲಗದ್ದೆಗಳಲ್ಲಿ ವನ್ಯಜೀವಿಗಳ ದಾಹ ತಣಿಸಲು ಅನುವು ಮಾಡಿಕೊಟ್ಟು ಸಹಕರಿಸಿ ಎಂದು ಅರಣ್ಯ ಇಲಾಖೆಯು ಮನವಿ ಮಾಡಿದೆ.ಸಿಸಿ ಕ್ಯಾಮೆರಾ ಅಳವಡಿಕೆ: ಕಾಡುಪ್ರಾಣಿಗಳು ಸಂಚರಿಸುವ ಸ್ಥಳದ ಕುರಿತು ಸಮೀಕ್ಷೆ ನಡೆಸಿ ನಂತರ ತೊಟ್ಟಿ ನಿರ್ಮಿಸುತ್ತೇವೆ. ಎಲ್ಲ ತೊಟ್ಟಿಗಳ ಬಳಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ವನ್ಯಜೀವಿಗಳ ಚಲನವಲನದ ಬಗ್ಗೆ ನಿಗಾ ಇಟ್ಟಿದ್ದೇವೆ ಎಂದು ಹಳಿಯಾಳ ವಲಯ ಅರಣ್ಯಾಧಿಕಾರಿ ನರೇಶ ಜಿ.ವಿ. ತಿಳಿಸಿದರು.