ಸಾರಾಂಶ
ಬೆಂಗಳೂರು ; ನಗರದಲ್ಲಿ ಅಂತರ್ಜಲ ವೃದ್ಧಿಗಾಗಿ ಜಲಮಂಡಳಿ ಕಳೆದ ಒಂದು ತಿಂಗಳಲ್ಲಿ ನಗರದ ಕೊಳವೆಬಾವಿಗಳ ಬಳಿ 986 ಮಳೆ ನೀರು ಇಂಗುಗುಂಡಿಗಳನ್ನು ನಿರ್ಮಿಸಿದ್ದಾಗಿ ಹೇಳಿಕೊಂಡಿದೆ.
ಮುಂಗಾರು ಮಳೆ ಕೊರತೆಯಿಂದಾಗಿ ಈ ಬಾರಿಯ ಬೇಸಿಗೆಯಲ್ಲಿ ನಗರದಲ್ಲಿ ನೀರಿನ ಅಭಾವ ಉಂಟಾಗಿದೆ. ಕಾವೇರಿ ನೀರಿನ ಜತೆಗೆ ಜಲಮಂಡಳಿಯು ಕೊಳವೆಬಾವಿ ಮೂಲಕ ನೀರು ಪಡೆದು ಹಲವು ಬಡಾವಣೆಗಳಿಗೆ ವಿತರಿಸಿದೆ. ಮಳೆ ಕೊರತೆಯಿಂದಾಗಿ ನೂರಾರು ಕೊಳವೆಬಾವಿಗಳು ಬತ್ತಿ ಹೋಗಿವೆ. ಈ ಪರಿಸ್ಥಿತಿ ಮುಂದಿನ ವರ್ಷಗಳಲ್ಲಿ ಮರುಕಳಿಸದಂತೆ ಮಾಡಲು ಜಲಮಂಡಳಿ ಅಧೀನದಲ್ಲಿರುವ ಕೊಳವೆಬಾವಿಗಳ ಸಮೀಪ ಒಂದು ತಿಂಗಳಲ್ಲಿ ಒಂದು ಸಾವಿರ ಮಳೆ ನೀರು ಇಂಗುಗುಂಡಿ ನಿರ್ಮಾಣಕ್ಕೆ ಮಂಡಳಿ ಅಧ್ಯಕ್ಷರು ಸೂಚನೆ ನೀಡಿದ್ದರು. ಅದರಂತೆ ಜಲಮಂಡಳಿ ಅಧಿಕಾರಿಗಳು ಕೊಳವೆಬಾವಿಗಳ ಬಳಿ 986 ಮಳೆ ನೀರು ಇಂಗುಗುಂಡಿಯನ್ನು ನಿರ್ಮಿಸಿದ್ದಾರೆ.
ಅದೇ ರೀತಿ ನಗರದಲ್ಲಿ ಕೆರೆಗಳಿಗೆ ಮಳೆ ನೀರು ತುಂಬಿಸಿ ಅಂತರ್ಜಲ ವೃದ್ಧಿಗಾಗಿ ಸಮುದಾಯ ಮಳೆ ನೀರು ಕೊಯ್ಲಿಗೂ ಒತ್ತು ನೀಡಲಾಗುತ್ತಿದೆ. ಸಮುದಾಯ ಮಳೆ ನೀರು ಕೊಯ್ಲಿಗೆ 74 ಪ್ರಸ್ತಾವನೆಗಳು ಅಧಿಕಾರಿಗಳಿಂದ ಬಂದಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲಿ ಅವುಗಳ ಅನುಷ್ಠಾನದ ಲಭ್ಯತೆಯನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳಲು ಜಲಮಂಡಳಿ ನಿರ್ಧರಿಸಿದೆ.