ಶಿಕ್ಷಣ, ಪ್ರವಾಸೋದ್ಯಮ, ಅರಣ್ಯೀಕರಣ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ₹34 ಕೋಟಿ ವೆಚ್ಚದಲ್ಲಿ ಕಾರ್ಮಿಕ ಮಕ್ಕಳ ವಸತಿ ಶಾಲೆ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಶಿಕ್ಷಣ, ಪ್ರವಾಸೋದ್ಯಮ, ಅರಣ್ಯೀಕರಣ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ₹34 ಕೋಟಿ ವೆಚ್ಚದಲ್ಲಿ ಕಾರ್ಮಿಕ ಮಕ್ಕಳ ವಸತಿ ಶಾಲೆ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ನಗರದ ಡಾ.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 22 ಎಕರೆ ಪ್ರದೇಶದಲ್ಲಿ ₹14.22 ಕೋಟಿಯಲ್ಲಿ ಅಭಿವೃದ್ಧಿ ಆಗುತ್ತಿರುವ ಕೈಗಾರಿಕಾ ಪ್ರದೇಶ ಕೆಲವೇ ದಿನದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಪ್ರದೇಶವನ್ನು 371 ಜೆ ಮೀಸಲಿಗೆ ಒಳಪಡಿಸಬೇಕು. ಇಲ್ಲವೆ ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಈಗಾಗಲೇ ಸಿಎಂ, ಡಿಸಿಎಂ ಹಾಗೂ ಸದನದಲ್ಲಿ ಸರ್ಕಾರದ ಗಮನ ಸೆಳೆದಿದ್ದೇನೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜಕೀಯ ಸ್ಥಾನಮಾನ ತ್ಯಾಗ ಮಾಡಿದ್ದೇನೆ. 40 ವರ್ಷ ರಾಜಕೀಯದಲ್ಲಿ ಬೆಳೆಸಿದ ಈ ಭಾಗದ ಜನರಿಗಾಗಿ ಸರ್ವತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ಹೇಳಿದರು.ಎಐ, ರೊಬೋಟ್‌ಗಳಂತ ಹೊಸ ತಂತ್ರಜ್ಞಾನ ಅವಿಷ್ಕಾರ ನಡೆಯುತ್ತಿದೆ. ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣ ನೀತಿಗಳು ಜಾರಿಗೆ ಬರಬೇಕು. ಸಂಶೋಧಕರು ಶಿಕ್ಷಣಕ್ಕೆ ಒತ್ತು ನೀಡಬೇಕು. ರಾಜ್ಯದ 8 ಜನರಿಗೆ ಪದ್ಮ ಪ್ರಶಸ್ತಿ ಲಭಿಸಿದ್ದು ಸಂತಸ ತಂದಿದೆ. ಒಳ್ಳೆಯ ಸಾಧಕರನ್ನು ಆಯ್ಕೆ ಮಾಡಿದ ಕೇಂದ್ರ ಸರ್ಕಾರಕ್ಕೆ ಅಭಿನಂದಿಸಿದರು.

ತೋಟಗಾರಿಕೆ, ಕೃಷಿಯಲ್ಲಿ ಸಾಧನೆ ಮಾಡಲಾಗಿದ್ದು, ನೆರೆ ಹಾವಳಿಯಿಂದ ರೈತರು ತೊಂದರೆಗೆ ಒಳಗಾಗಿದ್ದಾರೆ. ಸ್ಲಂ ಪ್ರದೇಶಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಇಂದು ನಿಂಬೆನಾಡು ಇಂಡಿ ನಿತ್ತೋತ್ಸವದ ಸಂಭ್ರಮದಲ್ಲಿ ಇದೆ ಎಂದರು.

ಎಸಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ್‌ ಬಿ.ಎಸ್‌.ಕಡಕಭಾವಿ, ಎಇಇ ದಯಾನಂದ ಮಠ, ಎಸ್‌.ಆರ್‌.ಮೆಡೆಗಾರ, ಶಿವಾಜಿ ಬನಸೋಡೆ, ಮಹಾದೇವಪ್ಪ ಏವೂರ, ಎಚ್‌.ಎಸ್‌.ಪಾಟೀಲ, ಗೀತಾ ಗುತ್ತರಗಿಮಠ, ಶಿವಾನಂದ ಪೂಜಾರಿ, ಉಮೇಶ ಲಮಾಣಿ ಸೇರಿ ಇತರರಿದ್ದರು.

ವಿದ್ಯುತ್‌ ಕ್ಷೇತ್ರದಲ್ಲಿ ಸ್ವಾವಲಂಬನೆಯಾಗಿದ್ದು, ರಾಜ್ಯದಲ್ಲಿಯೇ ಅತೀ ಹೆಚ್ಚು ವಿದ್ಯುತ್‌ ಪವರ್‌ ಸ್ಟೇಷನ್‌ಗಳು ವಿಜಯಪುರ ಜಿಲ್ಲೆಯಲ್ಲಿವೆ. ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಪವರ್ ಸ್ಟೇಷನ್‌ಗಳು ಇಂಡಿ ತಾಲೂಕಿನಲ್ಲಿವೆ. ನೀರಾವರಿಯಲ್ಲಿ ಪ್ರಗತಿ ಸಾಧಿಸಲು, ಅಪ್ಪರ ಕೃಷ್ಣಾ ಎಲ್ಲ ಯೋಜನೆಗಳು ಸಂಪೂರ್ಣ ಯಶಸ್ವಿಯಾಗಲು, ಆಲಮಟ್ಟಿ ಅಣೆಕಟ್ಟು 524 ವರೆಗೆ ಎತ್ತರಿಸಲು ಸರ್ಕಾರ ರೂಪುರೇಷ ಹಾಕಿಕೊಳ್ಳುತ್ತಿದ್ದು, ಮುಳುಗಡೆಯಾಗುವ ರೈತರಿಗೆ, ಜನರಿಗೆ ಪರಿಹಾರ ನೀಡಲು ₹70 ಸಾವಿರ ಕೋಟಿ ಬಜೆಟ್‌ನಲ್ಲಿ ಲಭ್ಯವಾಗಲಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.