ರಾಮನಗರ: ನಗರ ಸವಾಲು ನಿಧಿ (ಅರ್ಬನ್ ಚಾಲೆಂಜ್ ಫಂಡ್ ) ಯೋಜನೆ ಅಡಿಯಲ್ಲಿ ಬಿಡದಿ ಪಟ್ಟಣದ ಹಳೇ ಪುರಸಭೆ ಕಚೇರಿ ಕಟ್ಟಡದಲ್ಲಿ ವಾಣಿಜ್ಯ ಸಂಕೀರ್ಣ ಹಾಗೂ ಸಿಲ್ಕ್ ಫಾರಂ ಹೌಸ್ ಆವರಣದಲ್ಲಿ ಶಾಪಿಂಗ್ ಮಾಲ್ ನಿರ್ಮಿಸಲು ಬಿಡದಿ ಪುರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು

ರಾಮನಗರ: ನಗರ ಸವಾಲು ನಿಧಿ (ಅರ್ಬನ್ ಚಾಲೆಂಜ್ ಫಂಡ್ ) ಯೋಜನೆ ಅಡಿಯಲ್ಲಿ ಬಿಡದಿ ಪಟ್ಟಣದ ಹಳೇ ಪುರಸಭೆ ಕಚೇರಿ ಕಟ್ಟಡದಲ್ಲಿ ವಾಣಿಜ್ಯ ಸಂಕೀರ್ಣ ಹಾಗೂ ಸಿಲ್ಕ್ ಫಾರಂ ಹೌಸ್ ಆವರಣದಲ್ಲಿ ಶಾಪಿಂಗ್ ಮಾಲ್ ನಿರ್ಮಿಸಲು ಬಿಡದಿ ಪುರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಬಿಡದಿ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ನಗರ ಸವಾಲು ನಿಧಿಯಡಿ ಬಿಡದಿ ಪುರಸಭೆಗೆ 5.60 ಕೋಟಿ ಹಂಚಿಕೆಯಾಗಿರುವ ಕುರಿತು ಚರ್ಚೆ ನಡೆದು ಎರಡು ಸುಸಜ್ಜಿತ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲು ನಿರ್ಧರಿಸಲಾಯಿತು. ಹಳೇ ಪುರಸಭೆ ಕಚೇರಿ ಕಟ್ಟಡ ಕೆಡವಿ ಅಲ್ಲಿ 2 ಕೋಟಿ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ಹಾಗೂ 20 ಕೋಟಿ ವೆಚ್ಚದಲ್ಲಿ ರೇಷ್ಮೆ ಇಲಾಖೆಯಿಂದ ಪುರಸಭೆಗೆ ಹಸ್ತಾಂತರಗೊಂಡಿರುವ ಸಿಲ್ಕ್ ಫಾರಂ ಹೌಸ್ ಆವರಣದಲ್ಲಿ ಮಂತ್ರಿ ಮಾಲ್ ಮಾದರಿಯಲ್ಲಿ ಬೃಹತ್ ಶಾಪಿಂಗ್ ಮಾಲ್ ನಿರ್ಮಿಸುವ ಕಾರ್ಯಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.

12 ಎಕರೆ ಜಾಗದಲ್ಲಿ ಕ್ರೀಡಾಂಗಣ:

ಪಟ್ಟಣದ ಸಿಲ್ಕ್ ಫಾರಂ ಸಮೀಪವಿರುವ ರೇಷ್ಮೆ ಇಲಾಖೆಗೆ ಸೇರಿದ 12 ಎಕರೆ ಜಾಗವನ್ನು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸುಪರ್ದಿಗೆ ಹಸ್ತಾಂತರಿಸಲಾಗುತ್ತಿದ್ದು ಈಗಾಗಲೇ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ. ಸದರಿ ಜಾಗದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆ ತನ್ನ ಸಿಎಸ್ಆರ್ ನಿಧಿಯಡಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಮುಂದೆ ಬಂದಿದೆ ಎಂಬ ವಿಷಯವನ್ನು ಶಾಸಕರು ಸಭೆಯ ಗಮನಕ್ಕೆ ತಂದರು.

ಈ ವೇಳೆ ವಿಪಕ್ಷ ನಾಯಕ ಸಿ.ಉಮೇಶ್ ಅವರು ನೂತನ ಕ್ರೀಡಾಂಗಣಕ್ಕೆ ಬಾಲಗಂಗಾಧರನಾಥ ಸ್ವಾಮೀಜಿರವರ ಹೆಸರಿಡುವಂತೆ ಮನವಿ ಮಾಡಿದಾಗ ಶಾಸಕರು ಅದಕ್ಕೆ ಸಮ್ಮತಿಸಿದರು. ಇದನ್ನು ಎಲ್ಲಾ ಸದಸ್ಯರು ಮೇಜು ಕುಟ್ಟುವ ಮೂಲಕ ಸ್ವಾಗತಿಸಿ ಶಾಸಕರಿಗೆ ಹೂಮಾಲೆ ಹಾಕಿ ಅಭಿನಂದಿಸಿದರು.

ಎಂಜಿನಿಯರ್ ವಿರುದ್ಧ ಸದಸ್ಯರ ಆಕ್ರೋಶ :

ಕಚೇರಿಯಲ್ಲಿ ಮದ್ಯಾಹ್ನದ ನಂತರ ಯಾವ ಅಧಿಕಾರಿಗಳೂ ಇರುವುದಿಲ್ಲ. ಮೂಮೆಂಟ್ ರಿಜಿಸ್ಟರ್ ಯಾರೂ ನಿರ್ವಹಣೆ ಮಾಡುತ್ತಿಲ್ಲ. ಎಂಜಿನಿಯರ್ ಶ್ಯಾಮ್ ರವರು ಸದಸ್ಯರ ಕೆರೆ ಸ್ವೀಕರಿಸುವುದಿಲ್ಲ. ಅವರು ಎಲ್ಲಿದ್ದಾರೆಂದು ಮುಖ್ಯಾಧಿಕಾರಿಗಳಿಗೂ ತಿಳಿದಿರುವುದಿಲ್ಲ. ಕೆಲವರು ಮೊಂಡು ಬಿದ್ದಿದ್ದಾರೆ ವರ್ಗಾವಣೆ ಮಾಡಿಸಿ, ಇಲ್ಲವಾದಲ್ಲಿ ಪುರಸಭೆಗೆ ಕೆಟ್ಟ ಹೆಸರು ಬರುತ್ತದೆ ಎಂದು ಕಾಂಗ್ರೆಸ್ ಸದಸ್ಯರಾದ ನವೀನ್ ಮತ್ತು ಎನ್.ಕುಮಾರ್ ಗಮನ ಸೆಳೆದರು.

ಇದಕ್ಕೆ ಶಾಸಕ ಬಾಲಕೃಷ್ಣ, ಎಂಜಿನಿಯರ್ ಗಳು ಮಧ್ಯಾಹ್ನ 3-5.30ರವರೆಗೆ ಕಚೇರಿಯಲ್ಲಿರಬೇಕು. ಇಲ್ಲದಿದ್ದರೆ ಮನೆಗೆ ಕಳುಹಿಸಬೇಕಾಗುತ್ತದೆ. ನಾಳೆಯಿಂದ ನೀರಿನ ಸಮಸ್ಯೆ ಸಂಬಂಧ ಎಂಜಿನಿಯರ್ ಗಳನ್ನು ವಾರ್ಡುಗಳಿಗೆ ಕರೆದೊಯ್ದು ಸಮಸ್ಯೆ ಬಗೆಹರಿಸಿ ಎಂದು ಸೂಚಿಸಿದರು.

ವಿದ್ಯುತ್ ದೀಪಗಳ ನಿರ್ವಹಣೆಗಾಗಿ ವಾಹನ ಅಗತ್ಯವಿದೆ ಎಂದು ಸದಸ್ಯ ನವೀನ್ ಬೇಡಿಕೆ ಇಟ್ಟಾಗ, ತೆರಿಗೆ ಹಣವನ್ನು ಸದ್ಬಳಕೆ ಮಾಡಿ ಸರಿಯಾಗಿ ನಿರ್ವಹಿಸಿ ಉಳಿಯುವ ಹಣದಲ್ಲಿ ವಾಹನ ಖರೀದಿಸಿ ಎಂದು ಶಾಸಕರು ಸಲಹೆ ನೀಡಿದರು.

ಜೆಡಿಎಸ್ ಸದಸ್ಯ ಸೋಮಶೇಖರ್ ಮಾತನಾಡಿ, ಪಂಪ್ ಮೋಟಾರ್ ಅಳವಡಿಸದೆ 35 ಸಾವಿರ ಹಣ ಡ್ರಾ ಮಾಡಲಾಗಿದೆ. ಡಿಸೆಂಬರ್ ನಲ್ಲಿ ಬೋರ್ ವೆಲ್ ರಿಪೇರಿ ಮಾಡಿಸಿದ್ದಾಗಿ ಎಂಜಿನಿಯರ್ ಶ್ಯಾಮ್ ಬಿಲ್ ಮಾಡಿಕೊಂಡಿದ್ದಾರೆ. ಆದರೆ, ಅಲ್ಲಿ ಕೆಲಸವೆ ಆಗಿಲ್ಲ. ಕೆಲವೆಡೆ ಕೆಲಸ ಮಾಡದೆ 1 ಲಕ್ಷದವರೆಗೆ ಬಿಲ್ ಮಾಡಿದ್ದಾರೆಂದು ದೂರಿದರು.

ಇದಕ್ಕೆ ಸದಸ್ಯ ಎನ್.ಕುಮಾರ್ ದ್ವನಿಗೂಡಿಸಿ ಶ್ಯಾಮ್ ಅವರಿಗೆ ಸದಸ್ಯರ ಬಗ್ಗೆ ಗೌರವವೇ ಇಲ್ಲ. ವಾರ್ಡಿನಲ್ಲಿ ಯಾವುದೇ ಕೆಲಸ ಮಾಡುವಾಗ ಸದಸ್ಯರನ್ನು ಕೇಳುವುದೇ ಇಲ್ಲ ಎಂದರು. ಈ ವೇಳೆ ಎಂಜಿನಿಯರ್ ಶ್ಯಾಮ್ , ಸಭೆಗೆ ವಾಟರ್ ಮೆನ್ ನನ್ನು ಕರೆದು ಸಮಾಜಾಯಿಷಿ ನೀಡಲು ಮುಂದಾದಾಗ ಸದಸ್ಯ ಬಿ.ಜಿ.ಲೋಹಿತ್ ಕುಮಾರ್ ರವರು ವಾಟರ್ ಬಾಯ್ ಕರೆದು ಉತ್ತರಿಸುತ್ತಿದ್ದಾರೆ. ಶ್ಯಾಮ್ ರವರು ಎಂಜಿನಿಯರ್ ಕೆಲಸ ಬಿಟ್ಟು ಬೇರೆಲ್ಲಾ ಕೆಲಸ ಮಾಡುತ್ತಿದ್ದಾರೆ. ರಿಪೇರಿ ಮಾಡಿರುವ ಬಿಲ್ ಮತ್ತು ದಾಖಲೆಗಳನ್ನು ತೋರಿಸಿ ಎಂದು ಒತ್ತಾಯಿಸಿದರು.

ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ ಸಂಪತ್, ಉಪಾಧ್ಯಕ್ಷೆ ಆಯಿಷಾ ಖಲೀಲ್, ಸ್ಥಾಯಿಸಮಿತಿ ಅಧ್ಯಕ್ಷ ಆರ್.ದೇವರಾಜು, ಬಿಡದಿ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ವಿಜಯ್ ಕುಮಾರ್, ಮುಖ್ಯಾಧಿಕಾರಿ ಎಂ.ಮೀನಾಕ್ಷಿ , ಕಂದಾಯ ಅಧಿಕಾರಿ ನಂಜುಂಡಸ್ವಾಮಿ ಹಾಜರಿದ್ದರು. ಸೇರಿದಂತೆ ಸದಸ್ಯರು, ನಾನಾ ಇಲಾಖೆಗಳ ಅಧಿಕಾರಿಗಳು, ಪುರಸಭೆ ಸಿಬ್ಬಂದಿ ವರ್ಗ ಇದ್ದರು.

ಬಾಕ್ಸ್ ...............

ನಮಗೆ ಅವಕಾಶ ಕೊಡಿ ಆಡಳಿತ ಮಾಡಿ ತೋರಿಸುತ್ತೇವೆ: ಉಮೇಶ್

ರಾಮನಗರ: ವಿರೋಧ ಪಕ್ಷದವರಿಗಿಂತ ಆಡಳಿತ ಪಕ್ಷದ ಸದಸ್ಯರ ಸಮಸ್ಯೆಗಳೇ ಹೆಚ್ಚಾಗಿವೆ. ನೀವು ಅಧಿಕಾರದಿಂದ ಕೆಳಗಿಳಿದು ನಮಗೆ ಅವಕಾಶ ಕೊಡಿ ಆಡಳಿತ ಮಾಡಿ ತೋರಿಸುತ್ತೇವೆ ಎಂದು ವಿಪಕ್ಷ ನಾಯಕ ಸಿ.ಉಮೇಶ್ ಆಡಳಿತ ಪಕ್ಷದ ಸದಸ್ಯರ ಕಾಲೆಳೆದ ಪ್ರಸಂಗ ಸಾಮಾನ್ಯಸಭೆಯಲ್ಲಿ ನಡೆಯಿತು.

ಆಡಳಿತಾರೂಢ ಜೆಡಿಎಸ್ ಸದಸ್ಯರೇ ಸಮಸ್ಯೆಗಳನ್ನು ಹೇಳಿಕೊಂಡು ವಿಪಕ್ಷದವರಂತೆ ವರ್ತಿಸುತ್ತಿದ್ದರು. ಇದೆಲ್ಲವನ್ನು ತಾಳ್ಮೆಯಿಂದ ಗಮನಿಸಿದ ವಿಪಕ್ಷ ನಾಯಕ ಉಮೇಶ್, ನೀವೆಲ್ಲರು ಕಾಂಗ್ರೆಸ್ ಪಕ್ಷಕ್ಕೆ ಸೇರಿದರೆ ಶಾಸಕರು ನಿಮ್ಮೆಲ್ಲರ ಸಮಸ್ಯೆ ಬಗೆಹರಿಸುತ್ತಾರೆ ಎಂದು ಟಾಂಗ್ ನೀಡಿದರು.

ಅಧಿಕಾರಿಗಳಿಗೆ ಶಾಸಕರ ಭಯವೇ ಇಲ್ಲ. ಇನ್ನು ಸದಸ್ಯರಿಗೆ ಬೆಲೆ ಇದೆಯೇ ಎಂದು ಸದಸ್ಯ ಎಚ್.ನಾಗರಾಜು ಅಸಮಾಧಾನ ವ್ಯಕ್ತಪಡಿಸಿದರು. ಆಗಲೂ ಸಿ.ಉಮೇಶ್, ನಿಮಗೆ ಆಡಳಿತ ನಡೆಸಿ ಅನುಭವ ಇಲ್ಲ. ನೀವು ಅಧಿಕಾರದಿಂದ ಕೆಳಗಿಳಿದು ನಮಗೆ ಅವಕಾಶ ಕೊಡಿ ಆಡಳಿತ ಮಾಡಿ ತೋರಿಸುತ್ತೇವೆ ಎಂದು ಕಾಲೆಳೆದಾಗ ಸದಸ್ಯರೆಲ್ಲರು ನಗೆಗಡಲಲ್ಲಿ ತೇಲಿದರು.

25ಕೆಆರ್ ಎಂಎನ್ 4.ಜೆಪಿಜಿ

ಬಿಡದಿ ಪುರಸಭೆ ಸಾಮಾನ್ಯಸಭೆಯಲ್ಲಿ ಶಾಸಕ ಬಾಲಕೃಷ್ಣ ಅವರನ್ನು ಪುರಸಭೆ ಅಧ್ಯಕ್ಷೆ ಭಾನುಪ್ರಿಯಾ, ಉಪಾಧ್ಯಕ್ಷೆ ಆಯಿಷಾ, ವಿಪಕ್ಷ ನಾಯಕ ಸಿ.ಉಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ದೇವರಾಜ್ ಹಾಗೂ ಸದಸ್ಯರು ಅಭಿನಂದಿಸಿದರು.