ಬೆಂಗಳೂರು- ಜಲಸೂರು ರಾಜ್ಯ ಹೆದ್ದಾರಿ ಅಂಡರ್ ಪಾಸ್, ಸರ್ವೀಸ್ ರಸ್ತೆಗಳ ನಿರ್ಮಾಣ ಅವೈಜ್ಞಾನಿಕ

| Published : Oct 09 2025, 02:00 AM IST

ಬೆಂಗಳೂರು- ಜಲಸೂರು ರಾಜ್ಯ ಹೆದ್ದಾರಿ ಅಂಡರ್ ಪಾಸ್, ಸರ್ವೀಸ್ ರಸ್ತೆಗಳ ನಿರ್ಮಾಣ ಅವೈಜ್ಞಾನಿಕ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನ ಹಾದು ಹೋಗಿರುವ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿಯಲ್ಲಿ ಕೆಶಿಪ್‌ನವರು ನಿರ್ಮಿಸಿರುವ ಅಂಡರ್ ಪಾಸ್ ಗಳು ಮತ್ತು ಸರ್ವೀಸ್ ರಸ್ತೆಗಳು ಸಂಪೂರ್ಣ ಅವೈಜ್ಞಾನಿಕವಾಗಿರುವುದರಿಂದ ಸುಗಮ ಸಂಚಾರ ಮಾಡಲು ರೈತರು ಮತ್ತು ವಾಹನ ಸವಾರರಿಗೆ ದೊಡ್ಡ ಸಮಸ್ಯೆ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಹಾದು ಹೋಗಿರುವ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿಯಲ್ಲಿ ಕೆಶಿಪ್‌ನವರು ನಿರ್ಮಿಸಿರುವ ಅಂಡರ್ ಪಾಸ್ ಗಳು ಮತ್ತು ಸರ್ವೀಸ್ ರಸ್ತೆಗಳು ಸಂಪೂರ್ಣ ಅವೈಜ್ಞಾನಿಕವಾಗಿರುವುದರಿಂದ ಸುಗಮ ಸಂಚಾರ ಮಾಡಲು ರೈತರು ಮತ್ತು ವಾಹನ ಸವಾರರಿಗೆ ದೊಡ್ಡ ಸಮಸ್ಯೆ ಎದುರಾಗಿದೆ.

ಅವೈಜ್ಞಾನಿ ಕಾಮಗಾರಿಯಿಂದ ಮಳೆಗಾಲದಲ್ಲಿ ಬಹುತೇಕ ಅಂಡರ್ ಪಾಸ್‌ಗಳಲ್ಲಿ ನೀರು ನಿಲ್ಲುತ್ತಿರುವುದರಿಂದ ಜನಸಾಮಾನ್ಯರು ಸಂಚರಿಸಲಾಗದ ಸ್ಥಿತಿ ಬಂದಿದೆ. ಪಟ್ಟಣದ ಹೊರವಲಯದ ಚೌಡೇಶ್ವರಿ ದೇವಾಲಯದ ಬಳಿ ಜಲಸೂರು ಹೆದ್ದಾರಿಯಲ್ಲಿರುವ ಅಂಡರ್ ಪಾಸ್ ಹೇಮಾವತಿ ವಿತರಣಾ ನಾಲಾ ಏರಿಯ ಮೂಲಕ ಕೆ.ಆರ್.ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್‌ ಹಿಂಭಾಗದ ವರೆಗೂ ಸಂಪರ್ಕ ಕಲ್ಪಿಸುತ್ತದೆ.

ಈ ಭಾಗದ ನೂರಾರು ಎಕರೆ ಪ್ರದೇಶದಲ್ಲಿ ಕೃಷಿ ಮಾಡುತ್ತಿರುವ ರೈತಾಪಿ ವರ್ಗ ಮತ್ತು ಪಾಲಿಟೆಕ್ನಿಕ್ ಹಿಂಭಾಗದ ಮೂಲಕ ಪಟ್ಟಣವನ್ನು ಸಂರ್ಕಿಸುವ ಜನರಿಗೆ ಇರುವ ಏಕೈಕ ಅಂಡರ್ ಪಾಸ್ ಆಗಿದ್ದು, ಈ ರಸ್ತೆಯಲ್ಲಿ ಸಂಚರಿಸುವವರಿಗಾಗಿ ಕೆಶಿಪ್ ಎಂಜಿನಿಯರುಗಳು ಅಂಡರ್ ಪಾಸ್ ನ ಎರಡೂ ಬದಿಯಲ್ಲೂ ಸರ್ವೀಸ್ ರಸ್ತೆ ನಿರ್ಮಿಸಿದ್ದಾರೆ.

ಆದರೆ, ಸರ್ವೀಸ್ ರಸ್ತೆ ಅವೈಜ್ಞಾನಿಕವಾಗಿದ್ದು, ಜನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಮಳೆ ಬಂದರೆ ನೀರು ತುಂಬಿಕೊಳ್ಳುತ್ತಿದೆ. ನಿಂತ ನೀರು ಹೊರ ಹೋಗಲು ಸರಿಯಾದ ವ್ಯವಸ್ಥೆ ಇಲ್ಲ. ಇದೇ ರೀತಿ ಪಟ್ಟಣದ ಚಿಕ್ಕೋನಹಳ್ಳಿ ಬಳಿಯೂ ಒಂದು ಅಂಡರ್ ಪಾಸ್ ನಲ್ಲೂ ಮಳೆ ನೀರು ತುಂಬಿಕೊಂಡು ಜನ ನೀರಿನೊಳಗೆ ಸಂಚರಿಸಬೇಕಾದ ಸ್ಥಿತಿ ಎದುರಾಗಿದೆ.

ಚಿಕ್ಕೋನಹಳ್ಳಿ ಅಂಡರ್ ಪಾಸ್‌ನಲ್ಲಿ ಬರುವ ಕೆಶಿಪ್ ರಸ್ತೆಯಲ್ಲಿ ಕಾಲುವೆ ನೀರು ಮತ್ತು ಮಳೆಯ ನೀರಿನೊಂದಿಗೆ ಶಾಲಾ ಮಕ್ಕಳು ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ತಿರುಗಾಡಲು ಸಾಧ್ಯವಾಗುತ್ತಿಲ್ಲ. ಕೆಶಿಪ್ ಅಧಿಕಾರಿಗಳು ಹೆದ್ದಾರಿ ಅಕ್ಕಪಕ್ಕದ ಹಳ್ಳಿಯ ಜನರ ಸಂಚಾರಕ್ಕೂ ಕೆಲವು ಕಡೆ ಸರ್ವೀಸ್ ರಸ್ತೆಗಳನ್ನು ನಿರ್ಮಿಸಿಲ್ಲ.

ಗ್ರಾಮದೊಳಗೆ ಹೆದ್ದಾರಿ ಹಾದುಹೋಗಿದೆ. ಅವೈಜ್ಞಾನಿ ಕಾಮಗಾರಿಯಿಂದ ತಾಲೂಕು ವ್ಯಾಪ್ತಿಯಲ್ಲಿ ಒಂದಲ್ಲ ಒಂದು ಕಡೆ ಅಮಾಯಕರು ಅಪರಿಚಿತ ವಾಹನಗಳಿಗೆ ಬಳಿಯಾಗುತ್ತಿದ್ದಾರೆ. ತಾಲೂಕಿನ ದಡದಹಳ್ಳಿಯ ಚನ್ನೇಗೌಡ ಎನ್ನುವ 62 ವರ್ಷದ ವೃದ್ದ ಸೈಕಲ್ಲಿನಲ್ಲಿ ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಇದೇ ರೀತಿ ಹೆದ್ದಾರಿ ಬದಿಯ ಕೈಗೋನಹಳ್ಳಿ, ಬೊಮ್ಮೇನಹಳ್ಳಿ, ಹರಿಹರಪುರ, ಹೇಮಾವತಿ ನದಿ ಸೇತುವೆ ಮುಂತಾದ ಕಡೆ ಜನ ಅಪರಿಚಿತ ವಾಹನಗಳಿಗೆ ಬಲಿಯಾಗಿದ್ದಾರೆ. ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದ ಜನರ ಬಲಿ ಪಡೆದು ಯಮಲೋಕದ ಹೆದ್ದಾರಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವೈಜ್ಞಾನಿಕ ಹೆದ್ದಾರಿಯಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಕ್ಷೇತ್ರದ ಜನರ ದೂರುಗಳನ್ನು ಆಲಿಸಿ ಕಳೆದ ಎರಡು ತಿಂಗಳ ಹಿಂದೆ ಶಾಸಕ ಎಚ್.ಟಿ.ಮಂಜು ಕೆಶಿಪ್ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಹೆದ್ದಾರಿಯಲ್ಲಿ ಸಂಚರಿಸಿ ಜನರ ಸಮಸ್ಯೆಗಳನ್ನು ಮನವರಿಕೆ ಮಾಡಿದ್ದರು. ಅಲ್ಲದೇ, ಕೆಶಿಪ್ ಎಂಜಿನಿಯರುಗಳು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರಾದರೂ ಇದುವರೆಗೆ ಒಂದೇ ಒಂದು ಸಮಸ್ಯೆ ಬಗೆಹರಿದಿಲ್ಲ.

ತಾಲೂಕು ವ್ಯಾಪ್ತಿ ನಿರ್ಮಿಸಿರುವಅಂಡರ್ ಪಾಸ್ ಗಳಲ್ಲಿ ನೀರು ನಿಲ್ಲದಂತೆ ಸರಿಪಡಿಸಬೇಕಾಗಿದೆ. ಸರ್ವೀಸ್ ರಸ್ತೆಗಳನ್ನು ಸುಧಾರಿಸಿ ರೈತರ ಎತ್ತಿನ ಗಾಡಿಗಳು ಮತ್ತು ಟ್ರ್ಯಾಕ್ಟರ್, ಕಬ್ಬಿನ ಲಾರಿಗಳ ಸಂಚಾರಕ್ಕೆ ಯೋಗ್ಯವಾಗಿಸಬೇಕಾಗಿದೆ. ಹೆದ್ದಾರಿಗಳಲ್ಲಿ ಅಪಘಾತಗಳನ್ನು ನಿಯಂತ್ರಿಸಲು ಅಗತ್ಯ ಕ್ರಮ ವಹಿಸಬೇಕಾಗಿದೆ.