ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ರಸ್ತೆ ನಿರ್ಮಾಣದ ವೇಳೆ ರೈತರು ರಸ್ತೆಗೆ ಜಾಗ ಬಿಟ್ಟುಕೊಡುವುದರ ಜೊತೆಗೆ ಸ್ಥಳೀಯರು, ಗ್ರಾಮಸ್ಥರು ಸಹಕಾರ ನೀಡಿದ್ದಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣವಾಗಲು ಸಾಧ್ಯವೆಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.ತಾಲೂಕಿನ ಕಸಬಾ ಹೋಬಳಿ ಅಡಗೂರು ಗ್ರಾಮಕ್ಕೆ ಡಿ. ಕಾಳೇನಹಳ್ಳಿ ಗ್ರಾಮದ ಮಂಚಿಕಟ್ಟೆಯಿಂದ ಸಂಪರ್ಕ ಕಲ್ಪಿಸುವ ೮೦೦ ಮೀಟರ್‌ ಉದ್ದದ ರಸ್ತೆಗೆ ಭಾನುವಾರದಂದು ಅಡಗೂರು ಗ್ರಾಮದಲ್ಲಿ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣದಿಂದ ೩ ಕಿ. ಮೀ. ದೂರದಲ್ಲಿರುವ ಅಡಗೂರು ಗ್ರಾಮಕ್ಕೆ ಡಿ. ಕಾಳೇನಹಳ್ಳಿಯ ಮಂಚಿಕಟ್ಟೆವರೆಗೂ ಈಗಾಗಲೇ ರಸ್ತೆ ನಿರ್ಮಾಣವಾಗಿದ್ದು, ಮಂಚಿಕಟ್ಟೆಯಿಂದ ಯಾಚೇನಹಳ್ಳಿ, ಅಡಗೂರು ತಿರುವಿನವರೆಗೂ ರಸ್ತೆ ನಿರ್ಮಾಣವಾಗದೇ ಉಳಿದಿರುವ ರಸ್ತೆಯನ್ನು ಅಂದಾಜು ೧ ಕೋಟಿ ರು. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುವುದು. ರಸ್ತೆ ನಿರ್ಮಾಣದ ವೇಳೆ ಗ್ರಾಮಸ್ಥರು, ರೈತರು ಸಹಕಾರ ನೀಡಿ ಗುಣಮಟ್ಟದ ರಸ್ತೆ ನಿರ್ಮಿಸಿಕೊಳ್ಳುವಂತೆ ಸೂಚನೆ ನೀಡಿದರು. ರಾಜಕೀಯ ಆರಂಭದ ದಿನಗಳಲ್ಲಿ ತಾವು ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನನ್ನ ಗೆಲುವಿಗೆ ಕಾರಣವಾದ ಗ್ರಾಮಗಳಿವು, ಇವರ ಆಶೀರ್ವಾದ ತಮ್ಮ ಮೇಲಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದಾಗ ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿಲ್ಲಿ ಸೇರಿ ಎರಡ್ಮೂರು ಬಾರಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಈ ವ್ಯಾಪ್ತಿಯಲ್ಲಿ ತೇವಾಂಶ ಹೆಚ್ಚಿರುವ ಕಾರಣ ಡಾಂಬರು ರಸ್ತೆ ಉಳಿಯುವುದಿಲ್ಲ, ಇದನ್ನು ಮನಗಂಡು ಇದೀಗ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ೪ ಮೀಟರ್ ಅಗಲವಾದ ೮ ಇಂಚು ದಪ್ಪದ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದ್ದು, ರಸ್ತೆ ನಿರ್ಮಾಣದ ವೇಳೆ ಡಿ.ಕಾಳೇನಹಳ್ಳಿ ಮತ್ತು ಯಾಚೇನಹಳ್ಳಿ ಗ್ರಾಮಸ್ಥರು ಪರಸ್ಪರ ಸಹಕಾರದೊಂದಿಗೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕೆಂದು ಹೇಳಿದರು. ಈ ವೇಳೆ ಎ.ಚೋಳೆನಹಳ್ಳಿ ಪಿಎಸಿಸಿಎಸ್ ಅಧ್ಯಕ್ಷ ಮಧು, ಮಾಜಿ ಅಧ್ಯಕ್ಷ ಲಲಿತಾ ಎ.ಆರ್‌. ನಾರಾಯಣ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್‌, ಎ.ಎಚ್.ನಾಗರಾಜ್, ಮಾಜಿ ಉಪಾಧ್ಯಕ್ಷ ಜಿಮ್ ಪ್ರತಾಪ್, ಡೇರಿ ಅಧ್ಯಕ್ಷ ನರಸಿಂಹ, ಕಾರ್ಯದರ್ಶಿ ಧರ್ಮರಾಜ್, ಎಸ್,ನಾಗರಾಜ್, ಡಿ.ಕಾಳೇನಹಳ್ಳಿ ಜೆಡಿಎಸ್ ಮುಖಂಡ ರಂಗಸ್ವಾಮಿ ಸೇರಿ ಅಡಗೂರು ಗ್ರಾಮಸ್ಥರಾದ ಚಂದ್ರೇಗೌಡ, ರಾಜಣ್ಣ, ಲಕ್ಷ್ಮೇಗೌಡ, ಸಣ್ಣಪ್ಪ, ರಾಜೇಗೌಡ, ಶಿವಣ್ಣ, ಎ.ಆರ್. ಚಂದ್ರೇಗೌಡ, ರಂಗೇಗೌಡ, ನಂಜುಂಡೇಗೌಡ, ಸೇರಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಮತ್ತು ಡೇರಿ ಹಾಲಿ , ಮಾಜಿ ಸದಸ್ಯರು ಹಾಜರಿದ್ದರು.