ಚೆಕ್ ಡ್ಯಾಮ್ ನಿರ್ಮಾಣ ಅನಿವಾರ್ಯ: ಕೊಡಗು ಬೆಳೆಗಾರರ ಒಕ್ಕೂಟ

| Published : Mar 09 2024, 01:34 AM IST

ಚೆಕ್ ಡ್ಯಾಮ್ ನಿರ್ಮಾಣ ಅನಿವಾರ್ಯ: ಕೊಡಗು ಬೆಳೆಗಾರರ ಒಕ್ಕೂಟ
Share this Article
  • FB
  • TW
  • Linkdin
  • Email

ಸಾರಾಂಶ

ನೀರಿನ ಅಭಾವ ತಲೆದೋರಿದಾಗ ನದಿನೀರಿನ ಬಳಕೆ ನಿಷೇಧಿಸುವುದು ಶಾಶ್ವತ ಪರಿಹಾರವಲ್ಲ. ದಿಢೀರನೆ ನದಿ, ನದಿಮೂಲಗಳಿಂದ ನೀರು ಬಳಸದಂತೆ ನಿಷೇಧಾಜ್ಞೆಯಿಂದ ತಮ್ಮ ಜೀವನಕ್ಕೆ ಅವಲಂಬಿಸಿರುವ ಬೆಳೆ ನಾಶವಾಗುವ ಆತಂಕ ಉಂಟಾಗಲಿದೆ.ಈ ನಿಷೇಧಾಜ್ಞೆಯನ್ನು ಬೆಳೆಗಾರರ ಸಂಕಷ್ಟ ಅರಿತು ಸಡಿಲಿಸಬೇಕು ಎಂದು ಬೆಳೆಗಾರರು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಶ್ರೀಮಂಗಲಕೊಡಗು ಜಿಲ್ಲೆಯ ಎಲ್ಲಾ ನದಿ, ತೋಡುಗಳಿಗೆ ಚೆಕ್ ಡ್ಯಾಮ್ ನಿರ್ಮಿಸುವ ಮೂಲಕ ಅಂತರ್ಜಲ ವೃದ್ಧಿಸುವ ಹಾಗೂ ಕೃಷಿಗೂ ನೀರು ಬಳಸಲು ಅನುಕೂಲವಾಗುವಂತೆ, ನೀರು ಸಂಗ್ರಹಕ್ಕೆ ಜಿಲ್ಲಾಡಳಿತ ಬರಗಾಲ ನಿಭಾಯಿಸುವ ಯೋಜನೆಯ ಅನುದಾನದ ಮೂಲಕ ಕಾಮಗಾರಿ ಕೈಗೊಳ್ಳುವಂತೆ ಕೊಡಗು ಬೆಳೆಗಾರರ ಒಕ್ಕೂಟ ಮನವಿ ಮಾಡಿದೆ.

ಶ್ರೀಮಂಗಲದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖರು, ನೀರಿನ ಅಭಾವ ತಲೆದೋರಿದಾಗ ನದಿನೀರಿನ ಬಳಕೆ ನಿಷೇಧಿಸುವುದು ಶಾಶ್ವತ ಪರಿಹಾರವಲ್ಲ. ದಿಢೀರನೆ ನದಿ, ನದಿಮೂಲಗಳಿಂದ ನೀರು ಬಳಸದಂತೆ ನಿಷೇಧಾಜ್ಞೆಯಿಂದ ತಮ್ಮ ಜೀವನಕ್ಕೆ ಅವಲಂಬಿಸಿರುವ ಬೆಳೆ ನಾಶವಾಗುವ ಆತಂಕ ಉಂಟಾಗಲಿದೆ.ಈ ನಿಷೇಧಾಜ್ಞೆಯನ್ನು ಬೆಳೆಗಾರರ ಸಂಕಷ್ಟ ಅರಿತು ಸಡಿಲಿಸಬೇಕು ಎಂದು ಒತ್ತಾಯಿಸಿದರು.

ನದಿ ನೀರು ಬಳಸುವ ಬೆಳೆಗಾರರ ಮೇಲೆ ಕ್ರಮ ಜರುಗಿಸಬಾರದು. ಮುನ್ನೆಚ್ಚರಿಕೆ ಕ್ರಮವಾಗಿ ಬರಗಾಲ ಎದುರಿಸಲು ಜಿಲ್ಲೆಯ ಎಲ್ಲಾ ನದಿ, ತೋಡುಗಳಿಗೆ - 3 ಕಿ.ಮೀ. ಅಂತರದಲ್ಲಿ ಚೆಕ್ ಡ್ಯಾಮ್ ಪ್ರಸಕ್ತ ವರ್ಷದ ಮುಂಗಾರಿಗೂ ಮುನ್ನ ನಿರ್ಮಿಸಬೇಕು, ಇದರಿಂದ ಬೇಸಿಗೆ ಕಾಲದಲ್ಲಿ ನೀರಿನ ಮೂಲ ಮತ್ತು ನೀರಿನ ಅಂತರ್ಜಲ ಮಟ್ಟ ಕುಸಿಯದಂತೆ ತಡೆಯಬಹುದು. ಕುಡಿಯುವ ನೀರು, ಕೃಷಿ ಹಾಗೂ ಕಾಫಿ ಬೆಳೆಗೂ ತಮ್ಮ ಜಿಲ್ಲೆಯ ಪಾಲಿನ ನೀರಿನ ಹಕ್ಕಿನ ಬಳಕೆಗೆ ನೀರು ಸಂಗ್ರಹ ಲಭ್ಯವಾಗಲಿದೆ ಎಂದು ಸಲಹೆ ನೀಡಿದ್ದಾರೆ.ಹಲವು ವರ್ಷಗಳ ಹಿಂದೆಯೂ ಬರಗಾಲ ಹಿನ್ನಲೆಯಲ್ಲಿ ಆಗಿನ ಜಿಲ್ಲಾಧಿಕಾರಿ ನದಿ ನೀರಿನ ಬಳಕೆಗೆ ನಿಷೇಧಾಜ್ಞೆ ಹೊರಡಿಸಿದ್ದರು. ಆ ಸಂದರ್ಭದಲ್ಲಿ ಚೆಕ್ ಡ್ಯಾಮ್ ನಿರ್ಮಾಣಕ್ಕೆ ಅವರನ್ನು ಭೇಟಿ ಮಾಡಿ ಮನವಿಯನ್ನು ಕೊಡಗು ಬೆಳೆಗಾರ ಒಕ್ಕೂಟದಿಂದ ಸಲ್ಲಿಸಿತ್ತು.ಆದರೆ ಬರಗಾಲ ನಿಭಾಯಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಚೆಕ್ ಡ್ಯಾಮ್ ನಿರ್ಮಾಣಕ್ಕೆ ಬರಗಾಲ ನಿಭಾಯಿಸುವ ಅಥವಾ ಮುನ್ನೆಚ್ಚರಿಕೆಯ ಕಾಮಗಾರಿಗೆ ಅನುದಾನ ಬಳಕೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಅತಿವೃಷ್ಟಿಗೆ ತುತ್ತಾಗುವ ಹಾಗೂ ನದಿಗಳ ತವರಿನ ಕೊಡಗು ಜಿಲ್ಲೆಯಲ್ಲಿ ನದಿ ನೀರಿನ ಬಳಕೆಗೆ ನಿಷೇಧ ಸರಿಯಲ್ಲ,ಇದು ಶಾಶ್ವತ ಪರಿಹಾರವೂ ಅಲ್ಲ. ಸರ್ಕಾರ ಹಲವಾರು ದಶಕಗಳಿಂದ ನೀರಿನ ಮೂಲಗಳ ಸಂರಕ್ಷಣೆ ಮತ್ತು ಸಂಗ್ರಹಕ್ಕೆ ಸೂಕ್ತ ವೈಜ್ಞಾನಿಕ ಯೋಜನೆ ರೂಪಿಸುವಲ್ಲಿ ಉಂಟಾದ ವೈಫಲ್ಯದಿಂದ ನೀರಿನ ಕೊರತೆ ಉಂಟಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ವ್ಯಾಪಕವಾಗಿ ಭತ್ತದ ಗದ್ದೆಗಳ ಲೇಔಟ್ ಆಗಿ ಭೂಪರಿವರ್ತನೆ, ಪರಿಸರ ನಾಶದಿಂದ ನೀರಿನ ಮೂಲಗಳಿಗೆ ಧಕ್ಕೆ ತರಲಾಗಿದ್ದು,ಇದರ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಜಾರಿಗೆ ತರದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.ಈ ಬಗ್ಗೆ ಜಿಲ್ಲೆಯ ಶಾಸಕರು ಮತ್ತು ಜಿಲ್ಲಾಧಿಕಾರಿಗೆ ಪ್ರತ್ಯೇಕ ಮನವಿ ಪತ್ರ ಸಲ್ಲಿಸಲಾಗುವೆಂದು ಅವರು ವಿವರಿಸಿದರು.ಒಕ್ಕೂಟದ ಅಧ್ಯಕ್ಷ ಕೇಚಂಡ ಕುಶಾಲಪ್ಪ, ಸ್ಥಾಪಕ ಸದಸ್ಯ ಮಾಣೀರ ಮುತ್ತಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ ನಂಜಪ್ಪ, ಶ್ರೀಮಂಗಲ ಹೋಬಳಿ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ ಮತ್ತಿತರರಿದ್ದರು.