ಸದ್ಯದಲ್ಲೇ ಜಿಲ್ಲಾಮಟ್ಟದ ಮಾದರಿ ಗುರುಭವನ ನಿರ್ಮಾಣ

| Published : Sep 06 2024, 01:06 AM IST

ಸಾರಾಂಶ

ನಗರದ ಕೇಂದ್ರಭಾಗದಲ್ಲಿ ಸುಮಾರು 31 ಗುಂಟೆ ಜಾಗದಲ್ಲಿ ಶಿಕ್ಷಕರು, ವಿದ್ಯಾರ್ಥಿ, ಸಾರ್ವಜನಿಕರಿಗೆ ಅನುಕೂಲವಾಗಲು ಜಿಲ್ಲಾಮಟ್ಟದ ಗುರುಭವನ ನಿರ್ಮಾಣ ಮಾಡುತ್ತೇನೆ ಎಂದು ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿದರು.

ಶಿರಾ: ನಗರದ ಕೇಂದ್ರಭಾಗದಲ್ಲಿ ಸುಮಾರು 31 ಗುಂಟೆ ಜಾಗದಲ್ಲಿ ಶಿಕ್ಷಕರು, ವಿದ್ಯಾರ್ಥಿ, ಸಾರ್ವಜನಿಕರಿಗೆ ಅನುಕೂಲವಾಗಲು ಜಿಲ್ಲಾಮಟ್ಟದ ಗುರುಭವನ ನಿರ್ಮಾಣ ಮಾಡುತ್ತೇನೆ ಎಂದು ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿದರು.

ನಗರದ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ 137ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲೂಕು ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಹೊಂದುತ್ತಿದೆ. ಇಲ್ಲಿ ಹಲವು ಮೊರಾರ್ಜಿ ಶಾಲೆ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಪ.ಪೂ ಕಾಲೇಜು, ಪ್ರಥಮ ದರ್ಜೆ ಕಾಲೇಜು ಇದ್ದು, ಸಾವಿರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಆದ್ದರಿಂದ ನಗರದಲ್ಲಿ ಗುರುಭವನ ನಿರ್ಮಾಣಕ್ಕೆ ಒಂದು ಉತ್ತಮ ಸ್ಥಳಾವಕಾಶ ದೊರಕಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದೇನೆ ಎಂದರು.

ಶಿಕ್ಷಣದಿಂದ ಮಾತ್ರ ದೇಶ ಅಭಿವೃದ್ಧಿ: ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಕರಿಗೆ ದೇವರಿಗಿಂತಲೂ ದೊಡ್ಡ ಸ್ಥಾನವನ್ನು ನೀಡಿದ್ದೇವೆ. ಶಿಕ್ಷಣದಿಂದ ಮಾತ್ರ ದೇಶ ಪ್ರಗತಿ ಸಾಧಿಸಲು ಸಾಧ್ಯ. ಸಮಾಜದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣದಲ್ಲಿ ಅನೇಕ ರೀತಿಯ ಬದಲಾವಣೆಗಳಾಗುತ್ತಿದ್ದು, ಶಿಕ್ಷಕರು ಪ್ರಸ್ತುತ ಸಮಾಜಕ್ಕೆ ತಕ್ಕಂತೆ ಬೋಧನೆ ಮಾಡುವ ಅವಶ್ಯಕತೆ ಇದೆ ಎಂದರು.

ಇಂದು ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ಓದುವ ಹವ್ಯಾಸ ಮೂಡಿಸುವುದೇ ಬಹು ದೊಡ್ಡ ಸವಾಲಾಗಿದೆ. ಆದರೂ ಸಹ ಶಿಕ್ಷಕರು ವಿದ್ಯಾರ್ಥಿಗಳನ್ನು ಓದುವ ಹವ್ಯಾಸ ಮೂಡಿಸಬೇಕಿದೆ. ತಾಲೂಕನ್ನು ಶೈಕ್ಷಣಿಕ ಹಬ್ ಮಾಡುವ ಗುರಿ ಹೊಂದಿದ್ದೇನೆ. ಸುಮಾರು 9ಕ್ಕೂ ಹೆಚ್ಚು ಮೊರಾರ್ಜಿ ವಸತಿ ಶಾಲೆಗಳನ್ನು ಪ್ರಾರಂಭಿಸಿದ ಪರಿಣಾಮ ಸುಮಾರು 2600ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತಾಲೂಕಿಗೆ ವೃತ್ತಿಪರ ಕೋರ್ಸ್‌ಗಳಿಗೆ ತರಬೇತಿ ನೀಡುವ ಕೇಂದ್ರವನ್ನು ಸ್ಥಾಪನೆ ಮಾಡಲು ಯೋಜಿಸಿದ್ದು ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ ಎಂದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತರಾಜು.ಬಿ.ಆರ್ ಮಾತನಾಡಿ, ತಾಲೂಕಿನ ಶಿಕ್ಷಕರ ಸುಮಾರು 40 ವರ್ಷಗಳ ಬೇಡಿಕೆಯಾದ ಗುರುಭವನ ನಿರ್ಮಾಣಕ್ಕೆ ನಗರದ ಕೇಂದ್ರ ಭಾಗದಲ್ಲಿ ಸುಮಾರು 31 ಗುಂಟೆ ಜಾಗ ದೊರಕಿದ್ದು ಎಲ್ಲಾ ಶಿಕ್ಷಕರಿಗೂ ಸಂತೋಷ. ಈಗಾಗಲೇ ನಕ್ಷೆ, ಕಟ್ಟಡಕ್ಕೆ ಅನುಮೋದನೆ ದೊರಕಿದೆ. ಕ್ರಿಯಾ ಯೋಜನೆಯೂ ಸಿದ್ದವಾಗಿದೆ. ಶಾಸಕರು ಗುರುಭವನಕ್ಕೆ ಹೆಚ್ಚಿನ ಅನುದಾನ ನೀಡಿ ಮುಂದಿನ ಶಿಕ್ಷಕರ ದಿನಾಚರಣೆಯನ್ನು ಗುರುಭವನದಲ್ಲಿ ನಡೆಯುವಂತೆ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ಕೃಷ್ಣಪ್ಪ, ತಾಪಂ ಇಒ ಹರೀಶ್, ಪೌರಾಯುಕ್ತ ರುದ್ರೇಶ್, ಗೃಹ ಸಚಿವರ ವಿಶೇಷಾಧಿಕಾಶರಿ ಡಾ.ಕೆ.ನಾಗಣ್ಣ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಿನೋದ್.ಎಂ.ಎ, ನೇಜಂತಿ ರಾಜಣ್ಣ, ಕೆ.ಸಿ.ಜೀವನ್ ಪ್ರಕಾಶ್, ಡಾ.ನಾಗೇಶ್, ಶಿವರಾಮಯ್ಯ, ಮಂಜುನಾಥ್, ಬಿ.ಆರ್.ಸಿ ರಂಗಪ್ಪ, ಕರಿಯಣ್ಣ, ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು, ಗೀತಾ ಸುರೇಶ್, ಮಾಲಾ.ಕೆ.ಎಚ್. ಶ್ರೀಶೈಲಾ.ಕೆ.ಎಂ, ಮಲ್ಲೇಶ್, ಮಂಜಮ್ಮ, ಲಕ್ಷ್ಮಿದೇವಿ, ಹಿಮಂತರಾಜ್, ಓಂಕಾರೇಶ್ವರ್ ಹಾಜರಿದ್ದರು.