ಜಿಲ್ಲೆಯ ಮೊದಲನೇಯ ಎಂಆರ್‌ಎಫ್ ಘಟಕ ಸಗರದಲ್ಲಿ ನಿರ್ಮಾಣ

| Published : Nov 17 2023, 06:45 PM IST

ಜಿಲ್ಲೆಯ ಮೊದಲನೇಯ ಎಂಆರ್‌ಎಫ್ ಘಟಕ ಸಗರದಲ್ಲಿ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಘಟಕದ ಸ್ಥಳ ಯೋಜನಾ ನಿರ್ದೇಶಕ ಪರಿಶೀಲಿಸಿದ ಬಿಎಸ್ ರಾಠೋಡ್

ಕನ್ನಡಪ್ರಭ ವಾರ್ತೆ ಶಹಾಪುರಸ್ವಚ್ಛ ಭಾರತ ಮಿಷನ್ ಯೋಜನೆ ಹಾಗೂ ಇತರೆ ಯೋಜನೆ ಒಗ್ಗೂಡಿಸಿ ಪ್ರತಿ ತಾಲೂಕಿನಲ್ಲಿ ಎಂಆರ್‌ಎಫ್ ಘಟಕ ಸ್ಥಾಪನೆ ಮಾಡಲು ಸಗರ ಗ್ರಾಮದಲ್ಲಿ ಸ್ಥಳ ಗುರುತಿಸಲಾಗಿದ್ದು, ಇದು ಯಾದಗಿರಿ ಜಿಲ್ಲೆಯಲ್ಲಿಯೇ ಮೊದಲನೇಯ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ (ಎಂಆರ್‌ಎಫ್) ಘಟಕವಾಗಿದೆ ಎಂದು ಜಿಪಂ ಯೋಜನಾ ನಿರ್ದೇಶಕ ಬಿಎಸ್ ರಾಠೋಡ್ ಹೇಳಿದರು.

ತಾಲೂಕಿನ ಸಗರ ಗ್ರಾಪಂಗೆ ಭೇಟಿ ನೀಡಿ ಸ್ವಚ್ಛ ಸಂಕೀರ್ಣ ಘಟಕದಲ್ಲಿ ತ್ಯಾಜ್ಯ ವಿಂಗಡಣೆ ಕಾರ್ಯ ಮತ್ತು ಅದರ ಪಕ್ಕದಲ್ಲಿ ಘಟಕ ನಿರ್ಮಿಸಲು ಗುರುತಿಸಿರುವ ಸ್ಥಳವನ್ನು ವೀಕ್ಷಣೆ ಮಾಡಿ ಬಳಿಕ ಅವರು ಮಾತನಾಡಿದರು.

ಸ್ವಚ್ಛ ಸಂಕೀರ್ಣ ಘಟಕದ ಸುತ್ತಮುತ್ತಲು ಹಾಗೂ ಎಂಆರ್‌ಎಫ್ ನಿರ್ಮಿಸಲು ಗುರುತಿಸಿರುವ ಜಮೀನಿನಲ್ಲಿ ಸ್ವಚ್ಛತೆ ಮಾಡಿ, ಈ ಘಟಕಗಳಿಗೆ ಪೂರಕವಾಗಿ ಬೇಕಾಗಿರುವ ಇತರೆ ಕಾಮಗಾರಿಗಳನ್ನು ಅನುಷ್ಟಾನಕ್ಕಾಗಿ ಮಾರ್ಗಸೂಚಿ ಅನುಸಾರ ಇತರೆ ಯೋಜನೆ ಒಗ್ಗೂಡಿಸುವಿಕೆ ಕ್ರಿಯಾ ಯೋಜನೆ ಅಳವಡಿಸಿಕೊಳ್ಳಲು ಸೂಚಿಸಿದರು. ಈ ಘಟಕಗಳ ಕಾರ್ಚರಣೆ ಮಾಹಿತಿ ಕುರಿತು ಗ್ರಾಪಂ ಅಧ್ಯಕ್ಷರು, ಸದಸ್ಯರು ಮತ್ತು ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಿ ಅವರ ಸಹಕಾರ ಪಡೆದುಕೊಂಡಾಗ ಮಾತ್ರ ಈ ಯೋಜನೆ ಯಶಸ್ವಿಯಾಗಿ ಮಾಡಲು ಸಾಧ್ಯವಾಗುತ್ತದೆ ಎಂದರು.

ಎಂಆರ್‌ಎಫ್ ಘಟಕ ಸ್ಥಾಪನೆ ಮಾಡುವುದರಿಂದ ಜಿಲ್ಲೆಯ ಎಲ್ಲಾ ಗ್ರಾಪಂಯಲ್ಲಿರುವ ಸ್ವಚ್ಛ ವಾಹಿನಿಯ ಘಟಕದಲ್ಲಿ ಸಂಗ್ರಹಣೆ ಮಾಡುವ ಕಚ್ಚಾ ವಸ್ತು ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಈ ಘಟಕದಲ್ಲಿ ತಂದು ಶೇಖರಿಸಲು ಅನುಕೂಲವಾಗುತ್ತದೆ. ಆ ತ್ಯಾಜ್ಯವನ್ನು ಶ್ರೆಡಿಂಗ್, ಪ್ರೇಸಿಂಗ್ ಮಾಡಿ ಮರುಬಳಕೆಯಾಗುವ ಕಚ್ಚಾವಸ್ತುಗಳನ್ನು ಮರು ಉತ್ಪಾದನೆಯ ಘಟಕಕ್ಕೆ ಮತ್ತು ಮರುಬಳಕೆಯಾಗದೇ ಅತಿ ಹೆಚ್ಚು ಶಾಖದಲ್ಲಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಕರಗಿಸಲು ಸಮೀಪದ ಸೀಮೆಂಟ್ ಕಾರ್ಖಾನೆಗೆ ಕಳುಹಿಸುವ ಉದ್ದೇಶ ಹೊಂದಿದೆ. ಈ ದೃಷ್ಟಿಯಿಂದ ಎಂಆರ್‌ಎಫ್ ಘಟಕ ಸ್ಥಾಪನೆಯಿಂದ ಜಿಲ್ಲೆ ಮತ್ತು ತಾಲೂಕಿನ ತ್ಯಾಜ್ಯವನ್ನು ಒಂದೆಡೆ ಕ್ರೂಢಿಕರಿಸಿ ಇಡುವುದರಿಂದ ಪ್ರತಿ ಗ್ರಾಪಂ ಘಟಕಕ್ಕೆ ಸಂಚರಿಸುವ ವೆಚ್ಚ ತಗ್ಗಿಸಿ ಸಾಗಿಸಬಹುದಾಗಿದೆ ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ್, ಸಹಾಯಕ ನಿರ್ದೇಶಕ ಭೀಮಣ್ಣಗೌಡ ಬಿರಾದಾರ್ ಸೇರಿ ಇತರರಿದ್ದರು. ಸ್ವಚ್ಛ ಭಾರತ ಮಿಷನ್ ಸಮಾಲೋಚಕರಾದ ವೆಂಕಟೇಶ, ಶಿವಕುಮಾರ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಸಭೆಯಲ್ಲಿದ್ದರು.

ನರೇಗಾ ಮತ್ತು ಎಸ್‌ಬಿಎಂ ಯೋಜನೆ ಸಭೆ: ಶಹಾಪುರ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು, ಟಿಎಇ, ಡಿಇಒ ಅವರೊಂದಿಗೆ ನರೇಗಾ ಮತ್ತು ಸ್ವಚ್ಛ ಭಾರತ ಮಿಷನ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಇದೆ ವೇಳೆ ಮಾತನಾಡಿದ ಜಿಪಂ ಯೋಜನಾ ನಿರ್ದೇಶಕ ಬಿ.ಎಸ್ ರಾಠೋಡ್, ಬರಗಾಲ ಘೋಷಣೆಯಾಗಿರುವುದರಿಂದ ಗ್ರಾಮೀಣ ಪ್ರದೇಶದ ನರೇಗಾ ಕಾರ್ಮಿಕರಿಗೆ ಕೆಲಸ ನೀಡಲು ತಿಳಿಸಿದರು. ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ ಶೌಚಾಲಯ ರಹಿತ ಕುಟುಂಬಗಳನ್ನು ಗುರುತಿಸಿ, ಅವರಿಗೆ ಶೌಚಾಲಯ ಕಲ್ಪಿಸಲು ಪ್ರತಿ ಮನೆಗೆ ಭೇಟಿ ನೀಡಿ ಅಗತ್ಯ ದಾಖಲೆ ಸಂಗ್ರಹಿಸಿ ಕೊಂಡು ಕಾರ್ಯದೇಶ ಹೊರಡಿಸಬೇಕು. ಪ್ರತಿ ದಿನ ಎಲ್ಲಾ ಗ್ರಾಪಂಯಿಂದ ಸ್ವಚ್ಛ ವಾಹಿನಿ ಮೂಲಕ ತ್ಯಾಜ್ಯ ಸಂಗ್ರಹಿಸಿ, ಪ್ರತಿ ದಿನ ಪ್ರತಿ ಕುಟುಂಬ, ಅಂಗಡಿ, ಹೋಟೆಲ್‌ಗಳಿಂದ ಒಣ ಕಸ ನೀಡುವಂತೆ ವ್ಯಾಪಕ ಪ್ರಚಾರ ಮಾಡಲು ಕ್ರಮಕೈಗೊಳ್ಳಲು ಹೇಳಿದರು.