ಕ್ಷೇತ್ರದಲ್ಲಿ ಮಾದರಿ ವಸತಿ ನಿಲಯಗಳ ನಿರ್ಮಾಣ

| Published : Feb 05 2025, 12:32 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಶಿಥಿಲಾವಸ್ಥೆಯಲ್ಲಿರುವ ವಸತಿ ನಿಲಯಗಳ ಕಟ್ಟಡಗಳನ್ನು ಪರಿಶೀಲಿಸಿ ನೂತನ ಕಟ್ಟಡಗಳನ್ನು ನಿರ್ಮಿಸಲಾಗಿದೆ. ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿದ್ದರೆ ವಸತಿ ನಿಲಯಕ್ಕೆ ಜಾಗ ಕೊಡಿಸಿ ನೂತನ ಕಟ್ಟಡ ನಿರ್ಮಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಕ್ಷೇತ್ರದ ಎಲ್ಲ ವಸತಿ ನಿಲಯಗಳನ್ನು ಮಾದರಿಯಾಗಿ ರೂಪಿಸಲಾಗುತ್ತಿದೆ ಎಂದು ವಸತಿ ನಿಲಯಗಳನ್ನಾಗಿ ರೂಪಿಸಲಾಗುತ್ತಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಶಿಥಿಲಾವಸ್ಥೆಯಲ್ಲಿರುವ ವಸತಿ ನಿಲಯಗಳ ಕಟ್ಟಡಗಳನ್ನು ಪರಿಶೀಲಿಸಿ ನೂತನ ಕಟ್ಟಡಗಳನ್ನು ನಿರ್ಮಿಸಲಾಗಿದೆ. ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿದ್ದರೆ ವಸತಿ ನಿಲಯಕ್ಕೆ ಜಾಗ ಕೊಡಿಸಿ ನೂತನ ಕಟ್ಟಡ ನಿರ್ಮಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಕ್ಷೇತ್ರದ ಎಲ್ಲ ವಸತಿ ನಿಲಯಗಳನ್ನು ಮಾದರಿಯಾಗಿ ರೂಪಿಸಲಾಗುತ್ತಿದೆ ಎಂದು ವಸತಿ ನಿಲಯಗಳನ್ನಾಗಿ ರೂಪಿಸಲಾಗುತ್ತಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ತೆಲಗಿ ರಸ್ತೆಯಲ್ಲಿ ಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ ಮೆಟ್ರಿಕ್ ನಂತರದ (ಪರಿಶಿಷ್ಟ ಜಾತಿ) ಬಾಲಕಿಯರ ವಸತಿವನ್ನು ಉದ್ಘಾಟಿಸಿ ಮಾತನಾಡಿದರು. ಈ ವಸತಿ ನಿಲಯದ ಕಟ್ಟಡ ಅಂದಾಜು ₹ ೫.೨೬ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದೊಂದು ಮಾದರಿ ವಸತಿ ನಿಲಯವಾಗಿದ್ದು, ವಿದ್ಯಾರ್ಥಿನಿಯರ ಅನುಕೂಲತೆಯ ದೃಷ್ಟಿಯಿಂದ ಸಾಂಕೇತಿಕವಾಗಿ ಉದ್ಘಾಟಿಸಲಾಗಿದೆ. ಶೀಘ್ರದಲ್ಲಿಯೇ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಊಟದ ತಟ್ಟೆ, ಬೆಡ್, ಕಾಟಾ ಎಲ್ಲ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.ಪಟ್ಟಣದ ವಿಜಯಪುರ ರಸ್ತೆಯಲ್ಲಿ ನಿರ್ಮಿಸಿರುವ ಬಸವ ಭವನ ಕಟ್ಟಡವು ಎಲ್ಲ ರೀತಿಯ ಕಾರ್ಯಕ್ರಮಗಳಿಗೆ ಅನುಕೂಲವಾಗಿದೆ. ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಿಸಿರುವ ಮೆಗಾ ಮಾರುಕಟ್ಟೆ ಕಟ್ಟಡವು ಎಲ್ಲ ವ್ಯಾಪಾರಸ್ಥರಿಗೆ ಅನುಕೂಲವಾಗಿದೆ. ಪಟ್ಟಣದಲ್ಲಿ ಸೌಲಭ್ಯಗಳು ಸ್ಟಷ್ಟಿಯಾಗುತ್ತಿವೆ. ರಾಜ್ಯದಲ್ಲಿಯೇ ಬಸವನಬಾಗೇವಾಡಿ ಪಟ್ಟಣವು ಮಾದರಿ ಪಟ್ಟಣವಾಗುತ್ತಿದೆ. ಪ್ರವಾಸಿಗರು ಈ ಪಟ್ಟಣದಲ್ಲಿ ಯಾವುದೇ ಅನಾನುಕೂಲತೆಯಾಗಿಲ್ಲ ಎಂದು ಹೇಳುತ್ತಿದ್ದಾರೆ. ತಾಲೂಕಿನ ಟಕ್ಕಳಕಿ ಗ್ರಾಮದ ಬಳಿ ನಿರ್ಮಿಸಲಾಗಿರುವ ಅಧೀಕ್ಷಕ ಅಭಿಯಂತರ ಕಚೇರಿ ಉದ್ಘಾಟನೆಯಾಗದಿದ್ದರೂ ಜನರ ಅನುಕೂಲಕ್ಕಾಗಿ ಆರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ಪಟ್ಟಣದಲ್ಲಿ ನಿರ್ಮಿಸಿರುವ ಪುರಸಭೆ ಕಟ್ಟಡ, ಮೆಗಾಮಾರುಕಟ್ಟೆ, ಬಸವ ಭವನ ಸೇರಿದಂತೆ ಎಲ್ಲ ಕಟ್ಟಡಗಳನ್ನು ಉದ್ಘಾಟಿಸುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್-೧ ನಿರ್ದೇಶಕಿ ಮಂಜು ಹಿರೇಮನಿ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಕೆಪಿಸಿಸಿ ಸದಸ್ಯ ಶೇಖರ ಗೊಳಸಂಗಿ, ವ್ಹಿಪಿಕೆಪಿಎಸ್ ಬ್ಯಾಂಕಿನ ಉಪಾಧ್ಯಕ್ಷ ಮಲ್ಲೇಶಿ ಕಡಕೋಳ, ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ಮಹಿಬೂಬ ನಾಯ್ಕೋಡಿ, ಡಿಎಸ್‌ಎಸ್ ಮುಖಂಡರಾದ ಅರವಿಂದ ಸಾಲವಾಡಗಿ, ಮಹಾಂತೇಶ ಸಾಸಾಬಾಳ, ಗುರು ಗುಡಿಮನಿ ಇತರರು ಇದ್ದರು. ಅಶೋಕ ನಡುವಿನಮನಿ ಸ್ವಾಗತಿಸಿದರು. ವಿರೇಶ ಗೂಡ್ಲಮನಿ ನಿರೂಪಿಸಿದರು. ಎಂ.ಎಂ.ದಪ್ಪೇದಾರ ವಂದಿಸಿದರು.ಹೆಸರು ನಾಮಕರಣ ಗದ್ದಲ:

ಪಟ್ಟಣದಲ್ಲಿ ಉದ್ಘಾಟನೆಯಾಗಿರುವ ವಸತಿ ನಿಲಯದ ಕೋಣೆಗಳಿಗೆ ಮಹಿಳಾ ಸಾಧಕರ ಹೆಸರು ನಾಮಕರಣ ಮಾಡಲಾಗಿದೆ. ಆದರೆ ಡಾ.ಬಿ.ಆರ್.ಅಂಬೇಡ್ಕರ ಅವರ ಪತ್ನಿ ರಮಾಬಾಯಿ ಅವರ ಹೆಸರು ಯಾವ ಕೋಣೆಗೂ ನಾಮಕರಣ ಮಾಡದೇ ಅವರಿಗೆ ಅಗೌರವ ತೋರಿಸಿದಂತಾಗುತ್ತದೆ. ಅವರ ಹೆಸರು ಸೇರಿದಂತೆ ಸಾಲುಮರದ ತಿಮ್ಮಕ್ಕ ಮತ್ತು ಉಳಿದ ಮಹಿಳಾ ಸಾಧಕಿಯರ ಹೆಸರು ನಾಮಕರಣ ಮಾಡಬೇಕೆಂದು ಡಿಎಸ್‌ಎಸ್ ಮುಖಂಡರಾದ ಅಶೋಕ ಚಲವಾದಿ, ಪರಶುರಾಮ ದಿಂಡವಾರ ಸೇರಿ ಇತರರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದರು. ಅಲ್ಲದೇ, ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಈ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು, ಗುತ್ತಿಗೆದಾರರು ಇದನ್ನು ನಾಳೆಯೇ ಸರಿಪಡಿಸುವುದಾಗಿ ಹೇಳಿದರು.