ಜೋಡುರಥಗಳ ನಿರ್ಮಾಣ ಕಾಮಗಾರಿಗೆ ಚಾಲನೆ

| Published : Dec 16 2024, 12:45 AM IST

ಸಾರಾಂಶ

ಲಕ್ಷ್ಮೀನಾರಾಯಣ, ಆಂಜನೇಯ ದೇವಸ್ಥಾನದ ನಿಧಿಯಿಂದ ₹60 ಲಕ್ಷ ವೆಚ್ಚದಲ್ಲಿ ದೇವಸ್ಥಾನದ ಮುಂದಿನ ಆವರಣದ ಚಾವಣಿಗೆ ಶೀಟ್‌ ಹಾಕುವುದು

ಮರಿಯಮ್ಮನಹಳ್ಳಿ: ಇಲ್ಲಿನ ಲಕ್ಷ್ಮೀನಾರಾಯಣ, ಆಂಜನೇಯ ನೂತನ ಜೋಡುರಥಗಳ ನಿರ್ಮಾಣದ ಕಾರ್ಯ ಅತ್ಯಂತ ವಿಶೇಷ ರೀತಿಯಲ್ಲಿ ಸಿದ್ದಗೊಳ್ಳುತ್ತಿದ್ದು, ಈ ವರ್ಷ ಶ್ರೀರಾಮನವಮಿಗೆ ನೂತನ ಜೋಡಿ ರಥೋತ್ಸವವನ್ನಾಗಿ ಆಚರಿಸಲು ರಥಗಳ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ ಎಂದು ಶಾಸಕ ಕೆ. ನೇಮಿರಾಜ್ ನಾಯ್ಕ ಹೇಳಿದರು.

ಇಲ್ಲಿನ ಶ್ರೀಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀಆಂಜನೇಯಸ್ವಾಮಿ ದೇವಸ್ಥಾನದ ಆವರಣದ ಹೊರಾಂಡದ ನೆಲಕ್ಕೆ ಗ್ರಾನೈಟ್‌ ಹಾಸುವ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಲಕ್ಷ್ಮೀನಾರಾಯಣ, ಆಂಜನೇಯ ದೇವಸ್ಥಾನದ ನಿಧಿಯಿಂದ ₹60 ಲಕ್ಷ ವೆಚ್ಚದಲ್ಲಿ ದೇವಸ್ಥಾನದ ಮುಂದಿನ ಆವರಣದ ಚಾವಣಿಗೆ ಶೀಟ್‌ ಹಾಕುವುದು ಮತ್ತು ನೆಲಕ್ಕೆ ಗ್ರಾನೈಟ್‌ ಹಾಸುವ ಕಾರ್ಯಕ್ಕೆ ₹60 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ದೇವಸ್ಥಾನದ ಆವರಣದ ಚಾವಣಿಗೆ ಶೀಟ್‌ ಹಾಕುವ ಕಾರ್ಯ ಮುಗಿದಿದ್ದು, ಈಗ ದೇವಸ್ಥಾನ ಆವರಣದ ಹೊರಾಂಡದ ನೆಲಕ್ಕೆ ಗ್ರಾನೈಟ್‌ ಹಾಸಲಾಗುವುದು. ಇನ್ನು ಮುಂದಿನ ದಿನಗಳಲ್ಲಿ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ಹೇಳಿದರು.

18 ವಾರ್ಡುಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಸುವ ಕಾರ್ಯ ಮುಗಿದ ತಕ್ಷಣವೇ ಎಲ್ಲ ವಾರ್ಡುಗಳಲ್ಲಿ ಸಿಸಿ ರಸ್ತೆಗಳನ್ನು ನಿರ್ಮಿಸಲಾಗುವುದು. ಪಟ್ಟಣವನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸಲಾಗುವುದು. ಇದೇ ರೀತಿಯಲ್ಲಿ ಮರಿಯಮ್ಮನಹಳ್ಳಿ ಹೋಬಳಿಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ವೈದ್ಯರು ಇರುವುದಿಲ್ಲ ಎನ್ನುವುದು ನಮ್ಮ ಗಮನಕ್ಕೆ ಬಂದಿದೆ. ತಕ್ಷಣವೇ ಡಿಎಚ್‌ಒ ಜತೆ ಮಾತನಾಡಿ, ಮರಿಯಮ್ಮನಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಗಲು ಮತ್ತು ರಾತ್ರಿ ವೇಳೆಯಲ್ಲಿ ವೈದ್ಯರು ಸೇವೆ ಸಲ್ಲಿಸುವಂತೆ ಸೂಚಿಸುತ್ತೇನೆ. ಅಧಿವೇಶನದಲ್ಲಿ ಆರೋಗ್ಯ ಸಚಿವರವನ್ನು ಕಂಡು ಮರಿಯಮ್ಮನಹಳ್ಳಿಯ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಚರ್ಚಿಸುವೆ ಎಂದು ಅವರು ಹೇಳಿದರು.

ಲಕ್ಷ್ಮೀನಾರಾಯಣ, ಆಂಜನೇಯ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ, ಗೋವಿಂದರ ಪರುಶುರಾಮ, ಚಿದ್ರಿಸತೀಶ್‌, ತಳವಾರ್‌ ದೊಡ್ಡರಾಮಣ್ಣ, ಗಂಗಾವತಿ ಸತ್ಯನಾರಾಯಣ ಶೆಟ್ಟಿ, ಎಂ. ವೆಂಕಟೇಶ್‌, ಕೆ. ರಘುವೀರ್‌, ಎಲೆಗಾರ್‌ ಮಂಜುನಾಥ, ಸಜ್ಜದ್ ವಿಶ್ವನಾಥ, ನಾಗೇಶ್‌, ಅಂಜಿ, ಮಂಜುನಾಥ, ಹನುಮಂತಪ್ಪ ಇದ್ದರು.

ಮರಿಯಮ್ಮನಹಳ್ಳಿಯ ಲಕ್ಷ್ಮೀನಾರಾಯಣ, ಆಂಜನೇಯ ದೇವಸ್ಥಾನದ ಆವರಣದ ಹೊರಾಂಡದ ನೆಲಕ್ಕೆ ಗ್ರಾನೈಟ್‌ ಕಾಮಗಾರಿಗೆ ಶಾಸಕ ಕೆ.ನೇಮಿರಾಜ್‌ ನಾಯ್ಕ ಭೂಮಿಪೂಜೆ ನೆರವೇರಿಸಿದರು.